ಪ್ರತಿಭಟಿಸುವುದೇ ಅಶಾಂತಿಯ ಕೃತ್ಯವಾದರೆ....!

Update: 2022-06-15 04:44 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸರ್ವಾಧಿಕಾರಿಯ ಆಡಳಿತದಲ್ಲಿ 'ಶಾಂತಿಯುತ ಪ್ರತಿಭಟನೆ'ಯೆನ್ನುವುದು ಅಸ್ತಿತ್ವದಲ್ಲೇ ಇರುವುದಿಲ್ಲ.. ಯಾಕೆಂದರೆ, ಸರ್ವಾಧಿಕಾರಿಯು 'ಪ್ರಜೆಗಳ ಪ್ರತಿಭಟನೆ'ಯೆನ್ನುವುದೇ ಅಶಾಂತಿಯ ಭಾಗ ಎಂದು ನಂಬಿರುತ್ತಾನೆ. ಆದುದರಿಂದಲೇ, ಆತ ಯಾವುದೇ ಶಾಂತಿಯುತ ಪ್ರತಿಭಟನೆಗಳನ್ನು ಅಶಾಂತಿಯುತ ಪ್ರತಿಭಟನೆಗಳಾಗಿ ಮಾರ್ಪಡಿಸಿ ಪ್ರತಿಭಟನಾಕಾರರನ್ನು ಮಟ್ಟ ಹಾಕಬಲ್ಲ. ಸದ್ಯಕ್ಕೆ ದೇಶದಲ್ಲಿ ಇದುವೇ ನಡೆಯುತ್ತಿರುವುದು. ಪ್ರವಾದಿ ನಿಂದನೆಯ ವಿರುದ್ಧ ಪ್ರತಿಭಟನೆಗಿಳಿದ ಸಾರ್ವಜನಿಕರನ್ನು ಕಳೆದ ಕೆಲವು ದಿನಗಳಿಂದ ಖಳರಂತೆ ಮಾಧ್ಯಮಗಳು ಚಿತ್ರೀಕರಿಸುತ್ತಿವೆ. 'ಪ್ರತಿಭಟನಾ ಕಾರರ ಹಿಂಸಾಚಾರವನ್ನು' ಮುಖಪುಟದ ಸುದ್ದಿಯಾಗಿಸುತ್ತಾ, ಅಮಾಯಕರ ಕಗ್ಗೊಲೆಗಳನ್ನು ಪರೋಕ್ಷವಾಗಿ ಸಮರ್ಥಿಸುತ್ತಿವೆ. ಪ್ರತಿಭಟನಾಕಾರರು ಬೀದಿಗಿಳಿದು ದಾಂಧಲೆ ನಡೆಸಿದ ಪರಿಣಾಮವಾಗಿ, ಪೊಲೀಸರು ಅನಿವಾರ್ಯವಾಗಿ ಪ್ರತಿಭಟನಾಕಾರರ ಮೇಲೆ ಗೋಲಿಬಾರ್ ನಡೆಸಬೇಕಾಯಿತು ಎಂದು ಮಾಧ್ಯಮಗಳು ತಮ್ಮ ವರದಿಗಳ ಮೂಲಕ ವಕಾಲತ್ತು ನಡೆಸುತ್ತಿವೆ. ಇವನ್ನೆಲ್ಲ ಬಳಸಿಕೊಂಡು ಪ್ರತಿಭಟನೆಯಲ್ಲಿ ಗುರುತಿಸಿಕೊಂಡವರ ನಿವಾಸಗಳ ಮೇಲೆ ಬುಲ್ಡೋಜರ್ ಹರಿಸುವ ಪರವಾನಿಗೆಯನ್ನು ಸ್ಥಳೀಯ ನಗರಪಾಲಿಕೆಗಳು ತನ್ನದಾಗಿಸಿಕೊಂಡಿವೆ.

ಒಂದು ನಿರ್ದಿಷ್ಟ ಸಮುದಾಯವನ್ನು ಪದೇ ಪದೇ ಬೀದಿಗಿಳಿಯಲು ಪ್ರಚೋದಿಸುತ್ತಿ ರುವುದು ಯಾರು? ಎನ್ನುವುದನ್ನು ಗಮನಿಸಿದರೆ ಸಾಕು, ಸರಕಾರದ ನಿಜವಾದ ಉದ್ದೇಶ ಅರ್ಥವಾಗಿ ಬಿಡುತ್ತದೆ. ಸಾರ್ವಜನಿಕರನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸುತ್ತಿರುವ ತನ್ನದೇ ಸರಕಾರದೊಳಗಿರುವ ಜನರನ್ನು ನಿಯಂತ್ರಿಸಿದರೆ ಸಾಕು, ದೇಶ ಶಾಂತಿಯ ಆಗರವಾಗುತ್ತದೆ. ಕೊಲ್ಲಿ ರಾಷ್ಟ್ರಗಳ ಒತ್ತಡಗಳಿಂದಾಗಿ ಪ್ರವಾದಿನಿಂದನೆ ಕೃತ್ಯವನ್ನು ಭಾರತ ಸರಕಾರ ಖಂಡಿಸಲೇಬೇಕಾದ ಅನಿವಾರ್ಯ ಸ್ಥಿತಿಗೆ ತಲುಪಿತು. ಈ ಸಂದರ್ಭದಲ್ಲಿ ನಿಂದನೆಗೈದ ಆರೋಪಿಗಳು ಬಿಜೆಪಿಯಿಂದ ವಜಾಗೊಳ್ಳಬೇಕಾಯಿತು. ಸದ್ಯಕ್ಕೆ ಆರೋಪಿಗಳ ವಿರುದ್ಧ ಬಿಜೆಪಿ ಕ್ರಮ ತೆಗೆದುಕೊಂಡಿದೆಯೇ ಹೊರತು, ಭಾರತ ಸರಕಾರ ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಪಕ್ಷದಿಂದ ವಜಾಗೊಳಿಸುವುದು ಆರೋಪಿಗಳಿಗೆ ನೀಡಿದ ಶಿಕ್ಷೆಯೆಂದು ಪರಿಗಣಿಸಲು ಸಾಧ್ಯವಿಲ್ಲ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಆರೋಪಿಗಳನ್ನು 'ಕ್ಷುದ್ರ ಶಕ್ತಿಗಳು' ಎಂದು ಒಪ್ಪಿಕೊಂಡಿರುವ ಸರಕಾರಕ್ಕೆ, ಆ ಶಕ್ತಿಗಳನ್ನು ಬಂಧಿಸುವುದಕ್ಕೆ ಇರುವ ಅಡ್ಡಿಗಳೇನು? ಅವರನ್ನು ಬಂಧಿಸಿ ಜೈಲಿಗೆ ತಳ್ಳಲು ಯಾಕೆ ಸಾಧ್ಯವಾಗಿಲ್ಲ? ಈ ಪ್ರಶ್ನೆಗೆ ಉತ್ತರ ಊಹಿಸುವುದು ಕಷ್ಟವೇನೂ ಇಲ್ಲ.

ಪ್ರವಾದಿ ನಿಂದನೆಯ ಆರೋಪಿಗಳಿಗೆ ಶಿಕ್ಷೆ ವಿಧಿಸುವುದೆಂದರೆ, ಸರಕಾರ ಸ್ವತಃ ತನಗೆ ತಾನೇ ಶಿಕ್ಷೆ ವಿಧಿಸಿಕೊಂಡಂತೆ. ಹಾಗೆಯೇ ಇವರಂತೆಯೇ ಶಿಕ್ಷೆಗೆ ಅರ್ಹರಾಗಿರುವ ನೂರಾರು ಮುಖಂಡರು ಇದೇ ಸರಕಾರದ ಆಯಕಟ್ಟಿನ ಸ್ಥಾನಗಳನ್ನು ಅಲಂಕರಿಸಿಕೊಂಡಿರುವಾಗ, ಸರಕಾರ ಯಾರನ್ನೆಂದು ಶಿಕ್ಷಿಸುವುದು? ಈ ನಿಂದನೆಯ ಬಳಿಕ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಜನರು ಬೀದಿಗಿಳಿದರು. ಆದರೆ ಬೀದಿಗಿಳಿದ ಜನರ ಮೇಲೆ ಪೊಲೀಸರು ನಿರ್ದಯದಿಂದ ವರ್ತಿಸಿದರು. ಯಾವುದೇ ಸೂಚನೆಗಳಿಲ್ಲದೆ ಅವರ ಮೇಲೆ ಲಾಠಿಚಾರ್ಜ್ ಮಾಡಿದರು. ಪೊಲೀಸ್ ಠಾಣೆಗೆ ಕೊಂಡೊಯ್ದು ಪ್ರತಿಭಟನಾಕಾರರ ಮೇಲೆ ಬರ್ಬರ ಹಲ್ಲೆ ನಡೆಸಿದರು. ಯಾವುದೇ ಹಿಂಸಾಚಾರದಲ್ಲಿ ಭಾಗಿಯಾಗದ ಆರೋಪಿಗಳ ಮೇಲೆ ಗುಂಡು ಹಾರಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಶಾಸಕರು, ಸಚಿವರು ಪೊಲೀಸರ ಈ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ನಿಜಕ್ಕೂ ಹಿಂಸಾಚಾರ ಆರಂಭವಾಗಿರುವುದು ಯಾರಿಂದ? ಪ್ರತಿಭಟನಾಕಾರರಿಂದ ಅಥವಾ ಪೊಲೀಸರಿಂದ? ಈ ಪ್ರಶ್ನೆಗೆ ಸರಿಯಾದ ಉತ್ತರ ಕಂಡುಕೊಳ್ಳಬೇಕಾದರೆ ಈ ಬಗ್ಗೆ ತನಿಖೆ ನಡೆಯಬೇಕಾಗಿದೆ. ಆದರೆ ಆರೋಪಿ ಸ್ಥಾನದಲ್ಲಿರುವ ಪೊಲೀಸರ ಹೇಳಿಕೆಗಳನ್ನೇ ಮಾಧ್ಯಮಗಳು ಇಂದು ಸುದ್ದಿಯಾಗಿ ಹಂಚುತ್ತಿವೆ.

ಪ್ರತಿಭಟನಾಕಾರರ ಧ್ವನಿಯನ್ನು ದಮನಿಸುತ್ತಿವೆ. 'ಹಿಂಸಾಚಾರ ಆರೋಪಿಗಳ ಅಕ್ರಮ ಮನೆಗಳ ಮೇಲೆ ಬುಲ್ಡೋಜರ್ ಹರಿಸುತ್ತಿದ್ದೇವೆ' ಎನ್ನುವುದು ಸರಕಾರದ ಇನ್ನೊಂದು ಸುಳ್ಳು. ಇಷ್ಟಕ್ಕೂ ಅಕ್ರಮ ಮನೆಗಳನ್ನು ಕೆಡವಬೇಕಾದರೆ, ಮನೆ ಮಾಲಕರು ಸಾರ್ವಜನಿಕ ಹಿಂಸಾಚಾರದಲ್ಲಿ ಭಾಗಿಯಾಗಬೇಕಾದ ಅನಿವಾರ್ಯವೇನೂ ಇಲ್ಲ. ಅಕ್ರಮ ಮನೆಗಳನ್ನು ಕೆಡಹುವುದಕ್ಕೆ ಸ್ಥಳೀಯ ಸಂಸ್ಥೆಗಳಿಗೆ ಕಾನೂನು ವ್ಯಾಪ್ತಿಯಲ್ಲಿ ಅಧಿಕಾರವಿದೆ. ಆದರೆ ಅದರದ್ದೇ ಆದ ಶಿಷ್ಟಾಚಾರಗಳಿವೆ. ಇದೀಗ ಸ್ಥಳೀಯ ಸಂಸ್ಥೆಗಳು, ಮಹಾನಗರ ಪಾಲಿಕೆಗಳು ನಗರದೊಳಗಿರುವ ಬಡವರ ಮನೆಗಳನ್ನು ಧ್ವಂಸಗೊಳಿಸಲು 'ಪ್ರತಿಭಟನೆ'ಯನ್ನು ನೆಪವಾಗಿ ಬಳಸಿಕೊಳ್ಳುತ್ತಿವೆ. ಉಳಿದ ಸಂದರ್ಭಗಳಲ್ಲಿ ಮನೆಗಳನ್ನು ಕೆಡವಿದರೆ ಸಾರ್ವಜನಿಕರು ಬೀದಿಗಿಳಿದು ಅವುಗಳನ್ನು ಪ್ರಶ್ನಿಸುತ್ತಾರೆ. ಆದರೆ ಈ ಸನ್ನಿವೇಶದಲ್ಲಿ 'ಸಂತ್ರಸ್ತರೇ ಅಪರಾಧಿ'ಯಾಗಿ ನಿಂತಿದ್ದಾರೆ.

ಸಾರ್ವಜನಿಕ ಪ್ರತಿರೋಧಗಳಿರುವುದಿಲ್ಲವಾದುದರಿಂದ ನಗರ ಪಾಲಿಕೆ ಅಧಿಕಾರಿಗಳ ಕೆಲಸ ಸುಲಭವಾಗುತ್ತದೆ. ಸ್ಥಳೀಯ ಲ್ಯಾಂಡ್ ಮಾಫಿಯಾ ಕೂಡ ಈ 'ಬುಲ್ಡೋಜರ್ ಕಾರ್ಯಾಚರಣೆ'ಯಲ್ಲಿ ಪರೋಕ್ಷವಾಗಿ ಭಾಗವಹಿಸುತ್ತಿದೆ. ನಿಜಕ್ಕೂ ಸರಕಾರ ಅಕ್ರಮ ಕಟ್ಟಡಗಳ ಬಗ್ಗೆ ಆತಂಕ ಹೊಂದಿದೆಯಾದರೆ ಅದನ್ನು ಕಾನೂನಿನ ದಾರಿಯ ಮೂಲಕ ಧ್ವಂಸಗೊಳಿಸಲಿ. ಪ್ರತಿಭಟನೆಯಲ್ಲಿ ಭಾಗವಹಿಸಿದರು ಎಂದು ಆರೋಪ ಹೊರಿಸಿ, ಅವರಿಗೆ ಶಿಕ್ಷೆ ವಿಧಿಸುವ ಭಾಗವಾಗಿ ಮನೆಗಳನ್ನು ಕೆಡಹುವ ಅಧಿಕಾರ ಸ್ಥಳೀಯ ಸಂಸ್ಥೆಗೆ ಇಲ್ಲ. ಇಷ್ಟಕ್ಕೂ ಹಿಂಸಾಚಾರ ಆರೋಪಿಗಳೆಂದು ಒಬ್ಬ ವ್ಯಕ್ತಿಯನ್ನು ಪೊಲೀಸರು ಗುರುತಿಸಿದಾಕ್ಷಣ ಆತ ಅಪರಾಧಿಯಾಗುವುದಿಲ್ಲ. ಪೊಲೀಸರ ಕೆಲಸ ಆರೋಪಿಗಳನ್ನು ಗುರುತಿಸುವುದೇ ಹೊರತು, ಅವರಿಗೆ ಶಿಕ್ಷೆ ವಿಧಿಸುವುದಲ್ಲ. ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಬೇಕು. ಅಲ್ಲಿ ಸಾಕ್ಷಾಧಾರಗಳ ಮೂಲಕ ಆರೋಪಿ ಅಪರಾಧಿ ಹೌದೋ ಅಲ್ಲವೋ ಎನ್ನುವುದನ್ನು ನ್ಯಾಯಾಧೀಶರು ತೀರ್ಮಾನಿಸುತ್ತಾರೆ. ನಾಳೆ ನ್ಯಾಯಾಲಯ ಆರೋಪಿಯನ್ನು ನಿರಪರಾಧಿ ಎಂದು ಘೋಷಿಸಿದರೆ, ನಗರ ಪಾಲಿಕೆ ಆರೋಪಿಯ ಮನೆಯನ್ನು ಮತ್ತೆ ನಿರ್ಮಿಸಿ ಕೊಡುತ್ತದೆಯೇ?

ಪ್ರವಾದಿ ನಿಂದನೆಗಾಗಿ ಈಗಾಗಲೇ ಜಾಗತಿಕವಾಗಿ ಭಾರತದ ಮಾನ ಹರಾಜು ಹಾಕಿರುವ ಸರಕಾರ, ಇದೀಗ ಪ್ರತಿಭಟನಾಕಾರರನ್ನು 'ಬುಲ್ಡೋಜರ್ ಕಾರ್ಯಾಚರಣೆ'ಯ ಮೂಲಕ ಹತ್ತಿಕ್ಕಲು ಹೊರಟು ದೇಶದ ವರ್ಚಸ್ಸಿಗೆ ಇನ್ನಷ್ಟು ಧಕ್ಕೆ ತರುತ್ತಿದೆ. ಪ್ರವಾದಿ ನಿಂದನೆಗೆ ಪ್ರತಿಕ್ರಿಯಿಸಿರುವ ಕೊಲ್ಲಿ ರಾಷ್ಟ್ರಗಳು, ಇಲ್ಲಿರುವ ಮುಸ್ಲಿಮರ ಮನೆಗಳ ಮೇಲೆ ಹರಿಯುತ್ತಿರುವ ಬುಲ್ಡೋಜರ್‌ಗಳ ಬಗ್ಗೆ ತುಟಿ ಪಿಟಿಕ್ ಎನ್ನುತ್ತಿಲ್ಲ. ಯಾಕೆಂದರೆ, ಈ ಬುಲ್ಡೋಜರ್ ಕಾರ್ಯಾಚರಣೆಯ ಮೂಲಕ, ಭಾರತ ತನಗೆ ತಾನೇ ಹಾನಿ ಮಾಡಿಕೊಳ್ಳುತ್ತಿದೆ ಎನ್ನುವ ವಾಸ್ತವ ಆ ರಾಷ್ಟ್ರಗಳಿಗೆ ಚೆನ್ನಾಗಿ ಗೊತ್ತಿದೆ. ಸ್ವಯಂ ಇರಿದು ಸಾಯುವವರನ್ನು ಯಾರಾದರೂ, ಸಾಯಿಸುವ ಅಗತ್ಯವಿದೆಯೆ? ಎಂಬಂತಿದೆ ಆ ರಾಷ್ಟ್ರಗಳ ವೌನ. ಇಂದು ದೇಶವನ್ನು ಹೊರಗಿನ ಶಕ್ತಿಗಳಿಂದ ಅಲ್ಲ, ನಮ್ಮನ್ನಾಳುವವರ ಕೈಯಿಂದಲೇ ಉಳಿಸಬೇಕಾಗಿದೆ. ಇದು ಪ್ರಜಾಸತ್ತೆಯ ಬಗ್ಗೆ ಕಾಳಜಿಯಿರುವ ಪ್ರತಿಯೊಬ್ಬರ ಮುಂದಿರುವ ಬಹುದೊಡ್ಡ ಸವಾಲಿನ ಕಾರ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News