ತಪ್ಪು ಆದಾಯ ಘೋಷಿಸಿದ ಬಳಿಕ ಕ್ಷಮಾದಾನ ಯೋಜನೆಯಲ್ಲಿ ಪರಿಹಾರ ಪಡೆದಿದ್ದ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ: ವರದಿ

Update: 2022-06-15 12:38 GMT
ಜಸ್ಟಿಸ್ ಅರಿಜಿತ್ ಪಸಾಯತ್ (Photo: Twitter/@NationalTrust99)

ಹೊಸದಿಲ್ಲಿ: ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಮತ್ತು ಕಾಳಧನದ ಕುರಿತಂತೆ ವಿಶೇಷ ತನಿಖಾ ತಂಡದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಜಸ್ಟಿಸ್ ಅರಿಜಿತ್ ಪಸಾಯತ್ ಅವರು ತಮ್ಮ ಆದಾಯ ತೆರಿಗೆ ವ್ಯಾಜ್ಯಗಳನ್ನು 2020ರಲ್ಲಿ ಪರಿಹರಿಸಲು ಸರಕಾರದ ಕ್ಷಮಾದಾನ ಯೋಜನೆಯೊಂದನ್ನು ಬಳಸಿದ್ದರು ಎಂದು ವರದಿಯಾಗಿದೆ.

ಕಾಳಧನದ ಕುರಿತಾದ ಸಿಟ್  ಅಧ್ಯಕ್ಷತೆಯನ್ನು ಮಾಜಿ ನ್ಯಾಯಾಧೀಶ ಎಂ ಬಿ ಶಾ ವಹಿಸಿದ್ದಾರೆ. 2014ರಲ್ಲಿ ಜಸ್ಟಿಸ್ ಪಸಾಯತ್ ಅವರು  ಅದರ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು ಹಾಗೂ ಇದು ಮೋದಿ ಸರಕಾರದ ಮೊದಲ ಕ್ಯಾಬಿನಟ್ ನಿರ್ಧಾರವಾಗಿತ್ತು.

2019ರಲ್ಲಿ ಆದಾಯ ತೆರಿಗೆ ಇಲಾಖೆಯ ಕಟಕ್ ಘಟಕವು ಜಸ್ಟಿಸ್ ಪಸಾಯತ್ ಅವರಿಗೆ ನೋಟಿಸ್ ಕಳುಹಿಸಿ ರೂ 1.06 ಕೋಟಿಯಷ್ಟು ಆದಾಯವನ್ನು ಅವರು 2017-18ರಲ್ಲಿ ಸರಿಯಾಗಿ ಉಲ್ಲೇಖಿಸಿರಲಿಲ್ಲ ಎಂದು ಹೇಳಿತ್ತು.

ಇದಾದ ಒಂದು ವರ್ಷದಲ್ಲಿಯೇ ಅವರು ಡೈರೆಕ್ಟ್ ಟ್ಯಾಕ್ಸ್ ವಿವಾದ್ ಸೆ ವಿಶ್ವಾಸ್ ಕಾಯಿದೆ 2020 ಇದರ ಪ್ರಯೋಜನ ಪಡೆದಿದ್ದರು. ಇದರನ್ವಯ ಸಂಬಂಧಿತರು ತಾವು ಘೋಷಿಸದೇ ಇರುವ ಆದಾಯವನ್ನಷ್ಟೇ ನೀಡಬೇಕಿದೆಯಲ್ಲದೆ ಯಾವುದೇ ಬಡ್ಡಿ ಅಥವಾ ದಂಡ ಪಾವತಿಸುವ ಅಗತ್ಯವಿಲ್ಲ.

ಮಾಧ್ಯಮವೊಂದು ಪಡೆದುಕೊಂಡ ದಾಖಲೆಯ ಪ್ರಕಾರ ಜಸ್ಟಿಸ್ ಪಸಾಯತ್ ಅವರು ತಮ್ಮ ಐಟಿ ದಾಖಲೆಗಳಲ್ಲಿ ರೂ. 1,06,49,760 ಮೊತ್ತವನ್ನು 'ವಾಪಸ್ ನೀಡಿದ' ಆದಾಯಐವೆಂದು ಘೋಷಿಸಿದ್ದರು."ಸಂಧಾನ ಮತ್ತು ವಿವಾದ ಪರಿಹಾರ ಕೆಲಸಕ್ಕಾಗಿ ಉಂಟಾದ ಖರ್ಚಿಗೆ ಕ್ಲೇಮ್ ಮಾಡಿದ ಹೆಚ್ಚುವರಿ ಮೊತ್ತ'' ಎಂದು ಹೇಳಲಾಗಿತ್ತು.

ಆರ್ಥಿಕ ವರ್ಷ 2017-18ರಲ್ಲಿ ಅವರು ರೂ 26.85 ಲಕ್ಷ ಆದಾಯ ವೇತನದ ಮುಖಾಂತರ  ಹಾಗೂ ರೂ 3.66 ಕೋಟಿ ಆದಾಯ ತಮ್ಮ ವಿವಾದ ಪರಿಹಾರ ಹಾಗೂ ಸಂಧಾನ ಕೆಲಸದಿಂದ ದೊರೆತ ಆದಾಯ ಎಂದು ವಿವರಿಸಿದ್ದರು. ಆದರೆ ತಮ್ಮ ವೃತ್ತಿಯಿಂದ ದೊರೆತ ಆದಾಯವೆಂದು ಈ ರೂ. 3.66 ಕೋಟಿಯನ್ನು ನಮೂದಿಸದೆ ಇತರ ಮೂಲಗಳಿಂದ ಆದಾಯ ಎಂದು ಜಸ್ಟಿಸ್ ಪಸಾಯತ್ ನಮೂದಿಸಿದ್ದರೆಂದು ಹೇಳಲಾಗಿದೆ.

ಅವರ ಬ್ಯಾಂಕ್ ಸ್ಟೇಟ್ಮೆಂಟ್‍ಗಳಲ್ಲಿ ರೂ. 1.36 ಕೋಟಿ  ಮೊತ್ತವನ್ನು ಸಾಲ ಅಥವಾ ಉಡುಗೊರೆಯಾಗಿ ಪುತ್ರಿಗೆ ನೀಡಲಾಗಿದೆ ಹಾಗೂ ಆಕೆ ಸಿಬಿಐ ಪಬ್ಲಿಕ್ ಪ್ರಾಸಿಕ್ಯೂಟರ್ ಎಂದು ಉಲ್ಲೇಖಿಸಲಾಗಿತ್ತು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News