ಧರ್ಮ ಸಂಘರ್ಷ ಮುಂದುವರಿದರೆ ಜನರ ಬದುಕು ಸುಧಾರಣೆ ಅಸಾಧ್ಯ: ಅಣ್ಣಾ ವಿನಯಚಂದ್ರ

Update: 2022-06-15 12:56 GMT

ಸುಳ್ಯ: ದೇಶದಲ್ಲಿ ದಿನವೂ 38 ಕೋಟಿ ಜನರು ದಿನನಿತ್ಯ ಅರೆಹೊಟ್ಟೆಯಲ್ಲಿ ಮಲಗುತ್ತಾರೆ. ಅನೇಕರಿಗೆ ಉದ್ಯೋಗ, ಸೂರಿನ ಕೊರತೆ ಇದೆ. ಭವಿಷ್ಯದ ಆತಂಕ ಇದೆ. ಅದರಲ್ಲಿ ಧರ್ಮ, ಜಾತಿಯ ವಿಭಜನೆಯೇ ಇಲ್ಲ. ಧರ್ಮ ಧರ್ಮಗಳ ನಡುವೆ ಸಂಘರ್ಷ ಮುಂದುವರಿದರೆ ಜನರ ಬದುಕು ಸುಧಾರಣೆ ಅಸಾಧ್ಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಗಾಂಧಿ ವಿಚಾರ ವೇದಿಕೆ ಗೌರವಾಧ್ಯಕ್ಷ ಅಣ್ಣಾ ವಿನಯಚಂದ್ರ ಹೇಳಿದ್ದಾರೆ.

ಅವರು ಗಾಂಧಿ ವಿಚಾರ ವೇದಿಕೆಯ ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ಎಣ್ಮೂರು ಐವತ್ತೊಕ್ಲು ರಹ್ಮಾನಿಯಾ ಕೇಂದ್ರ ಜುಮಾ ಮಸ್ಜಿದ್‌ನ ಸಫಾ ಅಡಿಟೋರಿಯಂನಲ್ಲಿ ಶನಿವಾರ ನಡೆದ ಧಾರ್ಮಿಕತೆಯ ಅರಿವು ವಿಚಾರ ಸಂಕಿರಣದ ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಎಲ್ಲಾ ಧರ್ಮಗಳ ಸಾರ ಜನರ ಉನ್ನತೀಕರಣ, ಜೀವನ ಉನ್ನತೀಕರಣ. ಇದಕ್ಕಾಗಿ ವಿವಿಧ ಪೂಜಾ ಪದ್ಧತಿಗಳು. ಹೀಗಾಗಿ ಪೂಜಾ ಪದ್ಧತಿಗಳಲ್ಲಿ ಸಂಘರ್ಷ ಇರಬಾರದಿತ್ತು, ಆದರೆ ಎಲ್ಲೆಡೆಯೂ ಇಂದು ಇದಕ್ಕಾಗಿಯೇ ಸಂಘರ್ಷ ನಡೆಯುತ್ತಿದೆ. ಇದಕ್ಕೆ ಕಾರಣ ಧರ್ಮಗಳ ಅಧ್ಯಯನ ಕೊರತೆ. ವೈಚಾರಿಕತೆಗಳು ಚಿಂತನೆ ಮಾತ್ರ ಆಗಬಾರದು, ಅದು ಪ್ರಾಕ್ಟಿಕಲ್ ಆಗುವತ್ತ ಹೆಜ್ಜೆ ಇಡಬೇಕು. ಸಮಾಜದ ಸ್ವಾಸ್ಥದ ಕಡೆಗೆ ಎಲ್ಲರ ದೃಷ್ಟಿ ಅಗತ್ಯ ಎಂದು ವಿನಯಚಂದ್ರ ಹೇಳಿದರು.
  
ಅತಿಥಿಯಾಗಿದ್ದ ಲೇಖಕ ಮುಶ್ತಾಕ್ ಹೆನ್ನಾಬೈಲು ಮಾತನಾಡಿ, ಇತಿಹಾಸ, ಪುರಾಣಗಳನ್ನು ಗಮನಿಸಿದರೆ ಪ್ರತೀ ಕಾಲಘಟ್ಟದಲ್ಲೂ ಸಂಘರ್ಷ ನಡೆದಿದೆ. ಸಂಘರ್ಷ ಇಲ್ಲದೆಯೇ ಮನುಷ್ಯ ಬದುಕಿದ ಇತಿಹಾಸ ಇಲ್ಲ. ಆದರ್ಶ ಪುರುಷರ ನೆರಳಲ್ಲಿಯೇ ಜಗಳವಾಗಿದೆ.ಪ್ರತೀ ಕಾಲಘಟ್ಟದಲ್ಲೂ ಸರ್ವ ಸಮ್ಮತ ವ್ಯಕ್ತಿ ಸಿಗಲಿಲ್ಲ. ಇದೇ ವೇಳೆಯೇ ಈ ಸಂಘರ್ಷಗಳನ್ನು ತಡೆಯುವ ವ್ತಕ್ತಿಗಳೂ ಹುಟ್ಟಿಕೊಂಡಿದ್ದಾರೆ. ಇಂದು ಧರ್ಮಗಳ ನಡುವಿನ ಹೊಡೆದಾಟ ಇರುವುದು ರಾಜಕೀಯ ಪ್ರೇರಿತ. ಧರ್ಮ, ದೇವರು ಎರಡು ಎನ್ನುವುದೇ ಅಜ್ಞಾನದ ಆರಾಧನೆ, ವಿವೇಚನೆ ಇದ್ದಾಗ ಯಾವ ಸಂಘರ್ಷವೂ ನಡೆಯದು ಎಂದರು.

ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಎಣ್ಮೂರು -ಐವತ್ತೊಕ್ಲು ರಹ್ಮಾನಿಯಾ ಕೇಂದ್ರ ಜುಮಾ ಮಸ್ಜಿದ್ ಖತೀಬ್ ಅಹ್ಮದ್ ಕಬೀರ್ ಅಮ್ಜದಿ, ಸಾಮಾಜಿಕ ಕಾರ್ಯಕರ್ತ ಗುರುಪ್ರಸಾದ್ ಪಂಜ, ಪತ್ರಕರ್ತ ಇಕ್ಬಾಲ್ ಬಾಳಿಲ ಮಾತನಾಡಿದರು. ಸಭೆಯಲ್ಲಿ ಗಾಂಧಿ ವಿಚಾರ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ, ಗಾಂಧಿ ವಿಚಾರ ವೇದಿಕೆ ಕೋಶಾಧಿಕಾರಿ ಕರುಣಾಕರ ಪಲ್ಲತ್ತಡ್ಕ, ಸಲಹಾ ಸಮಿತಿ ಸದಸ್ಯ ಪೂವಪ್ಪ ಕಣಿಯೂರು, ಪಂಜ ವಲಯಾಧ್ಯಕ್ಷ ಭೀಷ್ಮಕ್ ಜಾಕೆ ಮತ್ತಿತರರು ಉಪಸ್ಥಿತರಿದ್ದರು.

ಗಾಂಧಿ ವಿಚಾರ ವೇದಿಕೆ ಸುಳ್ಯ ಘಟಕದ ಅಧ್ಯಕ್ಷ ಲಕ್ಷ್ಮೀಶ ಗಬ್ಲಡ್ಕ ಸ್ವಾಗತಿಸಿ ಪ್ರಸ್ತಾವನೆಗೈದರು. ಉಪಾಧ್ಯಕ್ಷ ಸಿ.ಎಂ.ರಫೀಕ್ ಐವತ್ತೊಕ್ಲು ನಿರೂಪಿಸಿದರು. ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News