×
Ad

ಮಂಗಳೂರು: ಸಿಸಿಬಿ ಪೊಲೀಸರ ಕಾರ್ಯಾಚರಣೆ; ಮಾದಕ ವಸ್ತು ಎಂಡಿಎಂಎ ಹೊಂದಿದ್ದ ನಾಲ್ವರು ಆರೋಪಿಗಳ ಸೆರೆ

Update: 2022-06-15 21:27 IST
ಅಬ್ದುಲ್ ರವೂಫ್ / ಮುಹಮ್ಮದ್ ರಮೀಝ್ / ಮೊಹಿದ್ದೀನ್ ರಾಶೀದ್ /  ಸಬಿತಾ

ಮಂಗಳೂರು, ಜೂ.15: ಬೆಂಗಳೂರಿನಿಂದ ಮಾದಕ ವಸ್ತು (ಎಂಡಿಎಂಎ)ವನ್ನು ಖರೀದಿಸಿ ಸಾರ್ವಜನಿಕರಿಗೆ ಮಾರಾಟ ಮಾಡುವ ಸಲುವಾಗಿ ನಗರಕ್ಕೆ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಜಾಲವೊಂದನ್ನು ಮಂಗಳೂರು ಸಿಸಿಬಿ ಪೊಲೀಸರು ಬುಧವಾರ ಕಾರ್ಯಾಚರಣೆ ನಡೆಸಿ ನಾಲ್ಕು ಮಂದಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ಬಂಧಿತ ಆರೋಪಿಗಳನ್ನು ಉಪ್ಪಳದ ಮುಹಮ್ಮದ್ ರಮೀಝ್ (24) ಮತ್ತು ಅಬ್ದುಲ್ ರವೂಫ್ (35), ಶಿರಿಯಾದ ಮೊಹಿದ್ದೀನ್ ರಾಶೀದ್(24), ಬೆಂಗಳೂರಿನ ಮಡಿವಾಳದ ಸಬಿತಾ ಯಾನೆ ಸಮೀರಾ (25) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 125 ಗ್ರಾಂ ತೂಕದ 6 ಲಕ್ಷ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, 6 ಮೊಬೈಲ್ ಫೋನ್‌ಗಳು, ಡಿಜಿಟಲ್ ತೂಕ ಮಾಪನ ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಮಾರುತಿ ರಿಡ್ಜ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಒಟ್ಟು ಸೊತ್ತುಗಳ ಮೌಲ್ಯ 9,82,000 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಎಸ್ಸೈ ಪ್ರದೀಪ್ ಟಿಆರ್ ಅವರ ನೇತೃತ್ವದ ಸಿಸಿಬಿ ಪೊಲೀಸರು ನಗರದ ಪಡೀಲ್ ಬಳಿ ಕಾರನ್ನು ತಪಾಸಣೆ ಮಾಡಿದಾಗ ಮಾದಕ ವಸ್ತು ಪತ್ತೆಯಾಗಿದೆ.

ಆರೋಪಿಗಳ ಪೈಕಿ ಮುಹಮ್ಮದ್ ರಮೀಝ್ ಎಂಬಾತನ ವಿರುದ್ಧ 2021ರಲ್ಲಿ ಕೊಣಾಜೆ ಠಾಣೆಯಲ್ಲಿ ಮಾದಕ ವಸ್ತುವನ್ನು ಹೊಂದಿದ ಬಗ್ಗೆ 2 ಪ್ರಕರಣ ದಾಖಲಾಗಿತ್ತು. ಈತನು 6 ತಿಂಗಳ ಹಿಂದೆ ಜೈಲ್ನಿಂದ ಬಿಡುಗಡೆಗೊಂಡಿದ್ದನು. ಆರೋಪಿ ಅಬ್ದುಲ್ ರವೂಫ್ ಎಂಬಾತನ ವಿರುದ್ದ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ 2018ರಲ್ಲಿ ಮಾದಕ ವಸ್ತುಗಳ ಸಾಗಾಟ ಮತ್ತು ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣ ದಾಖಲಾಗಿತ್ತು. ಅಲ್ಲದೆ ಕಾಸರಗೋಡು ಜಿಲ್ಲೆಯ ವಿದ್ಯಾನಗರ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿರುತ್ತದೆ.

ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News