ದಾದ್ರಿ ಗುಂಪು ಥಳಿತ, ಹತ್ಯೆ: ಏಳು ವರ್ಷಗಳ ಬಳಿಕ ಸಾಕ್ಷ್ಯ ದಾಖಲಿಸಿದ ಮೃತ ಅಖ್ಲಾಕ್‌ ಪುತ್ರಿ

Update: 2022-06-15 17:08 GMT
Photo: PTI

ದಾದ್ರಿ: ಏಳು ವರ್ಷಗಳ ನಂತರ ವಿಚಾರಣೆ ವೇಗ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ದಾದ್ರಿ ಗುಂಪು ಥಳಿತದಿಂದ ಮೃತಪಟ್ಟ ಅಖ್ಲಾಕ್ ಪುತ್ರಿ ಬುಧವಾರ‌, ಎರಡನೇ ದಿನವೂ ತಮ್ಮ ಹೇಳಿಕೆ ದಾಖಲಿಸಿದ್ದಾರೆ. 2015ರಲ್ಲಿ ಗೋಮಾಂಸ ಹೊಂದಿರುವ ಮತ್ತು ಗೋಹತ್ಯೆ ಆರೋಪದ ಮೇಲೆ ಥಳಿಸಿ ಕೊಂದ ಮೊಹಮ್ಮದ್ ಅಖ್ಲಾಕ್ ಅವರ ಪುತ್ರಿ ಶೈಸ್ತಾ (27) ವಿಚಾರಣೆಯ ಸಾಕ್ಷ್ಯದ ಹಂತದಲ್ಲಿ ಸೂರಜ್‌ಪುರದ ತ್ವರಿತ ನ್ಯಾಯಾಲಯದಲ್ಲಿ ತಮ್ಮ ಸಾಕ್ಷ್ಯವನ್ನು ದಾಖಲಿಸಿದ್ದಾರೆ.

“ಪ್ರಕರಣದ ಪ್ರಮುಖ ಸಾಕ್ಷಿಗಳ ಸಾಕ್ಷ್ಯಗಳು ಮಂಗಳವಾರದಿಂದ ಪ್ರಾರಂಭವಾದವು. ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್ ಆಧರಿಸಿ ಅಖ್ಲಾಕ್ ಪುತ್ರಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಘಟನೆಯ ಸಮಯದ ಅನುಕ್ರಮವನ್ನು ದೃಢೀಕರಿಸಿದ್ದಾಳೆ. ಆಕೆಯ ನಂತರ, ಇತರ ಕುಟುಂಬ ಸದಸ್ಯರು ತಮ್ಮ ಸಾಕ್ಷ್ಯವನ್ನು ನೀಡುತ್ತಾರೆ, ” ಎಂದು ಅಖ್ಲಾಕ್ ಅವರ ಕುಟುಂಬವನ್ನು ಪ್ರತಿನಿಧಿಸುವ ವಕೀಲ ಯೂಸುಫ್ ಸೈಫಿ ಹೇಳಿದ್ದಾರೆ.

ಅಧಿಕಾರಿಗಳ ಪ್ರಕಾರ, ಶೈಸ್ತಾ ತನ್ನ ಸಾಕ್ಷ್ಯದಲ್ಲಿ ಘಟನೆಯ ನಂತರ ಕುಟುಂಬಕ್ಕೆ ಕಿರುಕುಳ ನೀಡಿದ ಆರೋಪಿಯನ್ನು ಹೆಸರಿಸಿದ್ದಾರೆ.  ಹಾಗೂ ಅಖ್ಲಾಕ್‌ ರನ್ನು ಗುಂಪೊಂದು ಮನೆಯಿಂದ ಹೊರಗೆ ಎಳೆದು ಥಳಿಸಿರುವುದನ್ನು ನೋಡಿರುವುದನ್ನು ತನ್ನ ಸಾಕ್ಷ್ಯದಲ್ಲಿ ವಿವರಿಸಿದ್ದಾರೆ. CrPC ಸೆಕ್ಷನ್ 164 ರ ಅಡಿಯಲ್ಲಿ ಆಕೆಯ ಹೇಳಿಕೆಯನ್ನು ಈ ಹಿಂದೆ ಸ್ಥಳೀಯ ಪೊಲೀಸರು ದಾಖಲಿಸಿದ್ದರು.

ಕಾರ್ಯವಿಧಾನದ ಭಾಗವಾಗಿ ಶೈಸ್ತಾರನ್ನು ಪ್ರತಿವಾದಿ ವಕೀಲರೊಬ್ಬರು ಅಡ್ಡ ಪರೀಕ್ಷೆಗೆ ಒಳಪಡಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಕೆಯ ಹೇಳಿಕೆಯನ್ನು ದಾಖಲಿಸಿದ ನಂತರ, ಅಖ್ಲಾಕ್ ಅವರ ಪತ್ನಿ ಇಕ್ರಮನ್ ಮತ್ತು ಅವರ ತಾಯಿ ಅಸ್ಗರಿ ಸೇರಿದಂತೆ ಕುಟುಂಬ ಸದಸ್ಯರು ಸಹ ತಮ್ಮ ಸಾಕ್ಷ್ಯವನ್ನು ಮಂಡಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳು ತಮ್ಮ ಸಾಕ್ಷ್ಯವನ್ನು ಹಾಜರುಪಡಿಸಿದ ನಂತರ ಅವರ ಸಾಕ್ಷ್ಯವನ್ನು ದಾಖಲಿಸಲಾಗುತ್ತದೆ. ಮುಂದಿನ ದಿನಾಂಕವನ್ನು ಶುಕ್ರವಾರ ನಿಗದಿಪಡಿಸಲಾಗಿದ್ದು, ಈ ಸಮಯದಲ್ಲಿ ಶೈಸ್ತಾ ಅವರ ಸಾಕ್ಷ್ಯವು ಮುಕ್ತಾಯಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ದಾದ್ರಿಯ ಗುಂಪು ಥಳಿತ, ಹತ್ಯೆ ಪ್ರಕರಣದ ಎಲ್ಲಾ ಹತ್ತೊಂಬತ್ತು ಆರೋಪಿಗಳು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ.

ಈ ನಡುವೆ, ಗೋಹತ್ಯೆ ಆರೋಪದಡಿ ಅಖ್ಲಾಕ್ ಕುಟುಂಬದ ಸದಸ್ಯರ ವಿರುದ್ಧ ಪ್ರತ್ಯೇಕ ಎಫ್‌ಐಆರ್ ದಾಖಲಿಸುವಂತೆ ಸೂರಜ್‌ಪುರ ನ್ಯಾಯಾಲಯ 2016ರಲ್ಲಿ ಆದೇಶ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News