ಬೊಳ್ಳೂರು: ರಿಲಯನ್ಸ್ ಅಸೋಸಿಯೇಷನ್‌ನಿಂದ ಉಚಿತ ಪುಸ್ತಕ ವಿತರಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

Update: 2022-06-16 05:43 GMT

ಬೊಳ್ಳೂರು: ರಿಲಯನ್ಸ್ ಅಸೋಸಿಯೇಷನ್ ಬೊಳ್ಳೂರು ಹಳೆಯಂಗಡಿ ಇದರ ವತಿಯಿಂದ ತೈತೋಟ ಚಾರಿಟೇಬಲ್ ಟ್ರಸ್ಟ್ ಬೊಳ್ಳೂರು ಇದರ ಸಹಭಾಗಿತ್ವದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮತ್ತು ಎಸೆಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಇಂದಿರಾನಗರದ ರಿಲಯನ್ಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೊಳ್ಳೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಜಯರಾಮ್, ತಾನು 2009ರಲ್ಲಿ ಈ ಶಾಲೆಗೆ ಬಂದಾಗ ಊರಿನ ಸಂಘಸಂಸ್ಥೆಗಳ ಸಹಕಾರ ಪಡೆದುಕೊಂಡು ಶಾಲೆಯನ್ನು ಅಭಿವೃದ್ಧಿಪಡಿಸಬೇಕೆಂಬ ಗುರಿ ಇತ್ತು. ಆ ಸಂದರ್ಭದಲ್ಲಿ ಇಲ್ಲಿನ ರಿಲಯನ್ಸ್ ಅಸೋಸಿಯೇಷನ್ ನ ಪರಿಚಯವಾಯಿತು. ಅಂದಿನಿಂದ ಇಂದಿನ ವರೆಗೆ ಈ ಸಂಸ್ಥೆಯಿಂದ ವರ್ಷಂಪ್ರತಿ ಮಕ್ಕಳಿಗೆ ಉಚಿತ ಪುಸ್ತಕ ಮತ್ತು ಶಾಲೆಗೆ ಬೇಕಾದ ಅಗತ್ಯ ಸಹಕಾರವನ್ನು ಪಡೆಯುತ್ತಾ ಬಂದಿದ್ದೇವೆ. ಈ ವರ್ಷವೂ ಸಂಸ್ಥೆಯೊಂದಿಗೆ ಮನವಿ ಮಾಡಿದಾಗ ಉತ್ತಮ ರೀತಿಯಲ್ಲಿ ಸ್ಪಂದಿಸಿ, ಶಾಲೆಯ ಎಲ್ಲಾ 80 ಮಕ್ಕಳಿಗೆ ಉಚಿತ ಪುಸ್ತಕದ ವ್ಯವಸ್ಥೆ ಮಾಡಿದರು. ಹಾಗೆಯೇ ಇಲ್ಲಿ ಸುಮಾರು 300 ಮನೆಗಳಿದ್ದು, ಊರಿನ ಸಂಘಸಂಸ್ಥೆಗಳ ಸಹಕಾರ ದೊರಕಿದರೆ ಇಲ್ಲಿ LKG, UKG ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಕೂಡ ಪ್ರಾರಂಭಿಸಬಹುದು ಎಂದು ಇಂಗಿತ ವ್ಯಕ್ತಪಡಿಸಿದರು.

ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ಇಂದಿರಾನಗರ, ಬೊಳ್ಳೂರು ಪರಿಸರದ ಪ್ರತಿಭಾವಂತ ವಿದ್ಯಾರ್ಥಿಗಳಾದ ರಾಝಿಕ್ ಅಹ್ಮದ್, ಆಸಿಯಾ ಅಫ್ರೀನಾ, ಜಯೇಶ್, ರಿಝ್ವಿನಾ, ಪ್ರಜ್ಞಾ, ಮುಹಮ್ಮದ್ ಶಾಝಿಲ್, ಸಬ್ರೀನಾ, ಝಹೀರ್ ಇವರಿಗೆ ಇದೇ ವೇಳೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ರಿಲಯನ್ಸ್ ಅಸೋಸಿಯೇಷನ್ ಅಧ್ಯಕ್ಷ ಅಕ್ಬರ್ ಬೊಳ್ಳೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮುಹಿಯುದ್ದೀನ್ ಜುಮಾ ಮಸೀದಿಯ ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಹಳೆಯಂಗಡಿ ಗ್ರಾ.ಪಂ. ಸದಸ್ಯ ಅಝೀಝ್ ಐ.ಎ.ಕೆ, ಎಲ್.ಐ.ಡಿ.ಸಿ  ಬೊಳ್ಳೂರು ಇದರ ಅಧ್ಯಕ್ಷ ಶಮೀಮ್ ಬೊಳ್ಳೂರು, ರಿಲಯನ್ಸ್ ಉಪಾಧ್ಯಕ್ಷ ರಿಯಾಝ್ ಕೊಪ್ಪಳ, ರಿಲಯನ್ಸ್ ದುಬೈ ಘಟಕದ ಫಾರೂಕ್ ನವರಂಗ್, ರಿಲಯನ್ಸ್ ಸೌದಿ ಘಟಕದ ಫಾರೂಕ್ ಫ್ಯಾನ್ಸಿ , ಹಮೀದ್ ಬೊಳ್ಳೂರು, ಅಲ್ತಾಫ್ ಮಜಲ್, ರಿಲಯನ್ಸ್ ಜೊತೆ ಕಾರ್ಯದರ್ಶಿ ಇಲ್ಯಾಸ್ ಬೊಳ್ಳೂರು, ಸಾಮಾಜಿಕ ಜಾಲತಾಣದ ಮುಖ್ಯಸ್ಥರಾದ ಮುಬಾರಕ್ ಬೊಳ್ಳೂರು ಉಪಸ್ಥಿತರಿದ್ದರು.

ಸಂಸ್ಥೆಯ ಕಾರ್ಯದರ್ಶಿ ಇಕ್ಬಾಲ್ ಎಂ.ಎ. ಕಾರ್ಯಕ್ರಮ ನಿರೂಪಿಸಿದರು. ಹಾರಿಸ್ ನವರಂಗ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News