ಮಂಗಳೂರು; ಭಯೋತ್ಪಾದನಾ ನಿಗ್ರಹ ತಂಡದಿಂದ ಅಣುಕು ಪ್ರದರ್ಶನ
ಮಂಗಳೂರು: ನಗರ ಸೇರಿದಂತೆ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗಳಲ್ಲಿ ಆಂತರಿಕ ಭದ್ರತಾ ವಿಭಾಗದಡಿ (ಐಎಸ್‌ಡಿ) ನಗರ ಭಯೋತ್ಪಾದನಾ ನಿಗ್ರಹ ತಂಡ ರಚನೆಯ ನಿರ್ದೇಶನದಂತೆ ತರಬೇತಿ ಮುಗಿಸಿ ಆಗಮಿಸಿರುವ ಮಂಗಳೂರಿನ ತಂಡದಿಂದ ಕಾರ್ಯಾಚರಣೆಯ ಕುರಿತ ಅಣುಕು ಪ್ರದರ್ಶನ ಇಂದು ನಡೆಯಿತು.
ನಗರದ ಪೊಲೀಸ್ ಮೈದಾನದಲ್ಲಿ ನಡೆದ ಅಣುಕು ಪ್ರದರ್ಶನದಲ್ಲಿ ಭಯೋತ್ಪಾದಕ ದಾಳಿ ಸಂದರ್ಭ ಈ ಕಮಾಂಡೊ ಪಡೆ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದೆ ಎಂಬ ಬಗ್ಗೆ ತಿಳಿಸಲಾಯಿತು.
ಪೊಲೀಸಿಂಗ್ ಎಂದರೆ ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧ ಚಟುವಟಿಕೆಗಳನ್ನು ಪತ್ತೆ ಹಚ್ಚುವುದು ಮಾತ್ರವಲ್ಲ, ಆತಂಕವಾದ, ಕರಾವಳಿ ತೀರದಲ್ಲಿ ಯಾವುದೇ ರೀತಿಯಲ್ಲಿ ರಾಷ್ಟ್ರೀಯ ಭದ್ರತೆಗೆ ಅಪಾಯ, ಒತ್ತೆಯಾಳಾಗಿಸುವುದು ಮೊದಲಾದ ಕ್ಲಿಷ್ಟಕರ ಸಂದರ್ಭದಲ್ಲಿ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ನಗರ ಸ್ವಾಟ್ (ನಗರ ಸ್ಪೆಷಲ್ ವೆಪನ್ ಆ್ಯಂಡ್ ಟ್ಯಾಕ್ಟಿಕ್ಟ್) ತಂಡ ತರಬೇತಿ ಪಡೆದು ಕಾರ್ಯಾಚರಣೆಗೆ ಸಿದ್ಧಗೊಂಡಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಆಗದಂತೆ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳಿಗೆ ಪೊಲೀಸ್ ಇಲಾಖೆ ಈಗಾಗಲೇ ಸಕಲ ರೀತಿಯಲ್ಲೂ ಸಮರ್ಥವಾಗಿದೆ. ಇದಕ್ಕೆ ಪೂರಕವಾಗಿ ಸಂಭಾವ್ಯ ಯಾವುದೇ ರೀತಿಯ ದುಷ್ಕೃತ್ಯಗಳನ್ನು ಎದುರಿಸಲು ಪೊಲೀಸ್ ಇಲಾಖೆಗೆ ಈ ತಂಡ ಬಲ ತುಂಬಿದೆ ಎಂದು ಅವರು ಹೇಳಿದರು.
ಮಂಗಳೂರು ನಗರ ಪೊಲೀಸ್ ಸಶಸ್ತ್ರ ಮೀಸಲು ಪಡೆ (ಸಿಎಆರ್) ವರುಣ್ ಎಂಬ ನೀರಿನ ವಾಹನ ಸೇರ್ಪಡೆ ಯಾಗಿದೆ. ಇದು ಭಾರೀ ಪ್ರಮಾಣದ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು, ಕಾನೂನು ಸುವ್ಯವಸ್ಥೆಯ ಸಂದರ್ಭದಲ್ಲಿ ಉದ್ರಿಕ್ತ ಜನಸಮೂಹಕ್ಕೆ ನೀರನ್ನು ಚಿಮುಕಿಸಿ ಸಮೂಹವನ್ನು ಚದುರಿಸುವಲ್ಲಿ ಈ ವಾಹನ ಕಾರ್ಯ ನಿರ್ವಹಿಸಲಿದೆ.
ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್, ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಚೆನ್ನವೀರಪ್ಪ ಹಡಪದ್ ಮೊದಲಾದವರು ಉಪಸ್ಥಿತರಿದ್ದರು.
‘‘ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ದಡಿ ಮಂಗಳೂರು ಈ ನಗರ ಭಯೋತ್ಪಾದನಾ ನಿಗ್ರಹ ತಂಡ ಕಾರ್ಯ ನಿರ್ವಹಿಸಲಿದೆ. ಅಧಿಕಾರಿ ಸಿಬ್ಬಂದಿ ಸೇರಿ 30 ಮಂದಿಯ ತಂಡ ಇದಾಗಿದ್ದು, ಎರಡು ತಿಂಗಳ ಕಾಲ ಸಶಸ್ತ್ರ ತರಬೇತಿ, ದೈಹಿಕ ಹಾಗೂ ಮಾನಸಿಕ ತರಬೇತಿಯನ್ನು ಬೆಂಗಳೂರಿನಲ್ಲಿ ಈ ತಂಡಕ್ಕೆ ಒದಗಿಸಲಾಗಿದೆ. ಮಾತ್ರವಲ್ಲದೆ ಕಾಡು, ನಗರ ಪ್ರದೇಶಗಳಲ್ಲಿ ಕಾರ್ಯಾಚರಣೆ ಸೇರಿದಂತೆ ತುರ್ತು ಸಂದರ್ಭದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ತರಬೇತಿಯನ್ನು ಈ ತಂಡಕ್ಕೆ ನೀಡಲಾಗಿದೆ. ಎಲ್ಲಾ ಜಿಲ್ಲೆ ಹಾಗೂ ಕಮಿಷನರೇಟ್ ವ್ಯಾಪ್ತಿಯಲ್ಲಿ ಈ ತಂಡವನ್ನು ನಿಯೋಜಿಸಲಾಗಿದೆ’’
-ಎನ್. ಶಶಿಕುಮಾರ್, ಪೊಲೀಸ್ ಆಯುಕ್ತರು, ಮಂಗಳೂರು.