ಅದಾನಿ ಸಂಸ್ಥೆಗೆ ಯೋಜನೆಯ ಗುತ್ತಿಗೆ: ಶ್ರೀಲಂಕಾದಲ್ಲಿ ನಾಗರಿಕರ ಪ್ರತಿಭಟನೆ

Update: 2022-06-16 18:20 GMT

ಕೊಲಂಬೊ, ಜೂ.16: ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಶ್ರೀಲಂಕಾ ಅಧ್ಯಕ್ಷರ ನಡುವಿನ ಸಂಶಯಾಸ್ಪದ ಒಪ್ಪಂದದ ಹಿನ್ನೆಲೆಯಲ್ಲಿ ಶ್ರೀಲಂಕಾದ ಇಂಧನ ಯೋಜನೆಯ ಗುತ್ತಿಗೆಯನ್ನು ಭಾರತದ ಉದ್ಯಮಿ ಗೌತಮ್ ಅದಾನಿ ಸಮೂಹ ಸಂಸ್ಥೆಗೆ ನೀಡಲಾಗಿದೆ ಎಂದು ಖಂಡಿಸಿ ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ನಾಗರಿಕರು ಗುರುವಾರ ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಮನ್ನಾರ್ ನಗರದಲ್ಲಿ 500 ಮೆಗಾವ್ಯಾಟ್ ಸೌರ ಮತ್ತು ಪವನಶಕ್ತಿ ಘಟಕವನ್ನು ಸ್ಥಾಪಿಸುವ ಯೋಜನೆಯನ್ನು ಅದಾನಿ ಸಂಸ್ಥೆಗೆ ವಹಿಸಲಾಗಿದೆ.
ಮೋದಿ ಮತ್ತು ರಾಜಪಕ್ಸ ರೂಪಿಸಿದ ಒಪ್ಪಂದ ಪಾರದರ್ಶಕವಾಗಿಲ್ಲ ಮತ್ತು ಕಾನೂನು ಬಾಹಿರವಾಗಿದೆ. ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಅದಾನಿಗೆ ಯೋಜನೆಯ ಗುತ್ತಿಗೆ ದೊರಕಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಪೀಪಲ್ಸ್ ಪವರ್’ ಎಂಬ ನಾಗರಿಕರ ಸಂಘಟನೆ ಈ ಪ್ರತಿಭಟನೆ ಆಯೋಜಿಸಿದೆ. ಸ್ಟಾಪ್ ಅದಾನಿ ಎಂಬ ಘೋಷವಾಕ್ಯದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಮನವಿಗೆ ಉತ್ತಮ ಸ್ಪಂದನೆ ದೊರಕಿದೆ ಎಂದು ವರದಿಯಾಗಿದೆ.

ಬಿಡ್ಡಿಂಗ್ ನಡೆಸದೇ ಅದಾನಿಗೆ ಯೋಜನೆ ವಹಿಸಿಕೊಡಲು ಅನುಕೂಲವಾಗುವಂತೆ ಶ್ರೀಲಂಕಾ ಸರಕಾರ ವಿದ್ಯುತ್ಶಕ್ತಿ ಕಾಯ್ದೆಗೆ ಸರ್ವಾನುಮತದಿಂದ ತಿದ್ದುಪಡಿ ತಂದಿದೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೂಝ್ಲಿ ಹಮೀಮ್ ಕೊಲಂಬೊದಿಂದ ಫೋನ್ ಮೂಲಕ ಹೇಳಿರುವುದಾಗಿ ಎನ್ಡಿ ಟಿವಿ ವರದಿ ಮಾಡಿದೆ. ಭಾರತ ನೀಡಿದ ನೆರವಿಗೆ ನಾವು ಧನ್ಯವಾದ ಸಲ್ಲಿಸುತ್ತೇವೆ. ಆದರೆ ಬಿಡ್ಡಿಂಗ್ ನಡೆಸದೆ ಬೃಹತ್ ಯೋಜನೆಯನ್ನು ವಹಿಸಿಕೊಟ್ಟಿರುವುದು ಸರಿಯಲ್ಲ. ನಾವು ಬಹುರಾಷ್ಟ್ರೀಯ ಸಂಸ್ಥೆಗಳು ಬಿಡ್ಡಿಂಗ್ ನಲ್ಲಿ ಪಾಲ್ಗೊಳ್ಳುವ ಪರವಾಗಿದ್ದೇವೆ, ಆದರೆ ಭ್ರಷ್ಟ ಮುಖಂಡರ ಭ್ರಷ್ಟ ಉಪಕ್ರಮಗಳ ಮೂಲಕ ನಮ್ಮ ದೇಶವನ್ನು ಬರಿದಾಗಿಸುವುದಕ್ಕೆ ನಮ್ಮ ಬೆಂಬಲವಿಲ್ಲ ಎಂದವರು ಹೇಳಿದ್ದಾರೆ.

ಅದಾನಿ ಸಂಸ್ಥೆಗೆ ಯೋಜನೆಯ ಗುತ್ತಿಗೆಯನ್ನು ನೇರವಾಗಿ ವಹಿಸಿಕೊಡುವಂತೆ ಪ್ರಧಾನಿ ಮೋದಿ ಒತ್ತಡ ಹೇರುತ್ತಿರುವುದಾಗಿ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಹೇಳಿದ್ದರು ಎಂದು ಶ್ರೀಲಂಕಾದ ವಿದ್ಯುಛ್ಚಕ್ತಿ ಮಂಡಳಿಯ ಅಧ್ಯಕ್ಷ ಎಂಎಂಸಿ ಫೆರ್ಡಿನಾಂಡೊ ಸಂಸದೀಯ ಸಮಿತಿಯ ಎದುರು ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಹೇಳಿಕೆಯನ್ನು ರಾಜಪಕ್ಸ ನಿರಾಕರಿಸಿದ್ದರು. ಮರುದಿನ ಫೆರ್ಡಿನಾಂಡೊ ತಮ್ಮ ಹೇಳಿಕೆಯನ್ನು ವಾಪಾಸು ಪಡೆದಿದ್ದರು.

ಆದರೆ , ತನಗೆ ದೊರಕಿರುವ ಪತ್ರದಲ್ಲಿರುವ ಮಾಹಿತಿಯಂತೆ, ಯೋಜನೆಗೆ ಶೀಘ್ರ ಅನುಮೋದನೆ ನೀಡುವಂತೆ ಶ್ರೀಲಂಕಾದ ವಿತ್ತ ಇಲಾಖೆಯನ್ನು ಕೋರಿದ್ದ ಫರ್ಡಿನಾಂಡೊ, ಅದಾನಿ ಸಮೂಹದ ಪ್ರಸ್ತಾವನೆಯನ್ನು ಭಾರತ ಸರಕಾರದ ಪ್ರಸ್ತಾವನೆಯಂತೆ ಪರಿಗಣಿಸುವಂತೆ ರಾಜಪಕ್ಸ ನಿರ್ದೇಶಿಸಿದ್ದಾರೆಂದು ಉಲ್ಲೇಖಿಸಿದ್ದರು ಎಂದು ಎನ್ಡಿ ಟಿವಿ ವರದಿ ಮಾಡಿದೆ.ಈ ಆರೋಪವನ್ನು ಅದಾನಿ ಸಂಸ್ಥೆ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News