ಗಣಿತ- ಖಗೋಳಶಾಸ್ತ್ರ ಒಲಂಪಿಯಾಡ್: ಅಂತಾರಾಷ್ಟ್ರೀಯ ಮಟ್ಟದಲ್ಲಿ 2ನೆ ಹಂತ ತೇರ್ಗಡೆಯಾದ ಮಂಗಳೂರಿನ ಮುರಳೀಧರ ರಾವ್
ಮಂಗಳೂರು: ನಗರದ ಬಿಜೈ ಕಾಪಿಕಾಡ್‌ನಲ್ಲಿರುವ ಸೆಂಟರ್ ಫಾರ್ ಅಡ್ವಾನ್ಸ್‌ಡ್ ಲರ್ನಿಂಗ್(ಸಿಎಫ್ಎಎಲ್) ಇದರ ವಿದ್ಯಾರ್ಥಿಯಾಗಿರುವ ಮುರಳೀಧರ ರಾವ್ ಅಂತಾರಾಷ್ಟ್ರೀಯ ಗಣಿತ ಒಲಂಪಿಯಾಡ್ಸ್-2022 ಮತ್ತು ಇಂಟರ್‌ನ್ಯಾಶನಲ್ ಖಗೋಳಶಾಸ್ತ್ರ ಒಲಂಪಿಯಾಡ್ -2020ರ ಎರಡನೆಯ ಹಂತವನ್ನು ತೇರ್ಗಡೆಯಾಗುವ ಮೂಲಕ ಮಹತ್ವದ ಸಾಧನೆ ತೋರಿದ್ದಾರೆ ಎಂದು ಸಿಎಫ್ಎಎಲ್ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಮೋರಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಸಾಧನೆಯ ಮೂಲಕ ಮುರಳೀಧರ್ ಐಎನ್‌ಎಂಒ ಮತ್ತು ಐಎನ್‌ಎಒ ಎರಡಕ್ಕೂ ಮಂಗಳೂರಿನಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿಯಾಗಿದ್ದಾರೆ ಎಂದರು.
ಪ್ರತಿ ವರ್ಷ ಆಯ್ದ ವಿದ್ಯಾರ್ಥಿಗಳು ಮುಂಬೈನಲ್ಲಿರುವ ಹೋಮಿ ಭಾಭಾ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದಲ್ಲಿ ನಾಲ್ಕು ವಾರಗಳ ಓರಿಯಂಟೇಶನ್ ಕಮ್ ಆಯ್ಕೆ ಶಿಬಿರಕ್ಕೆ ಹಾಜರಾಗಲು ಅರ್ಹರಾಗಿರುತ್ತಾರೆ. ಅಲ್ಲಿ ಅಂತಿಮ ಅಂತಾರಾಷ್ಟ್ರೀಯ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಈ ವರ್ಷ ಕೋವಿಡ್ ನಿರ್ಬಂಧಗಳಿಂದಾಗಿ ಶಿಬಿರ ನಡೆಸಲಾಗಿಲ್ಲ. ಐಎನ್‌ಎಂಒನಲ್ಲಿನ ಒಟ್ಟು ಅಂಕಗಳ ಆಧಾರದ ಮೇಲೆ ಅಂತಾರಾಷ್ಟ್ರೀಯ ಒಲಿಂಪಿಯಾಡ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಲು ಒಟ್ಟು ಆರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದವರು ವಿವರಿಸಿದರು.
ಭಾರತೀಯ ರಾಷ್ಟ್ರೀಯ ಗಣಿತ ಒಲಿಂಪಿಯಾಡ್‌ನಲ್ಲಿ 81ರಲ್ಲಿ 23 ಅಂಕಗಳನ್ನು ಗಳಿಸಿದ ಮುರಳೀಧರ್ ಭಾರತೀಯ ಒಲಿಂಪಿಯಾಡ್ ಕ್ವಾಲಿಫೈಯರ್ ಗಣಿತದಲ್ಲಿ 40 ಅಂಕಗಳಿಗೆ 27 ಅಂಕಗಳನ್ನು ಗಳಿಸಿದ್ದಾರೆ. ಅವರು 78 ಅಂಕಗಳನ್ನು ಗಳಿಸುವ ಮೂಲಕ ಖಗೋಳಶಾಸದಲ್ಲಿ ಇಂಡಿಯನ್ ಒಲಿಂಪಿಯಾಡ್ ಅರ್ಹತಾ ಸುತ್ತಿನಲ್ಲಿ ಆಯ್ಕೆಯಾಗಿದ್ದಾರೆ. ಅಲ್ಲದೆ ಭಾರತೀಯ ರಾಷ್ಟ್ರೀಯ ಖಗೋಳಶಾಸ ಒಲಂಪಿಯಾಡ್‌ನಲ್ಲಿ 90ರಲ್ಲಿ 39 ಅಂಕಗಳನ್ನು ಗಳಿಸಿದ್ದಾರೆ ಎಂದು ಮೋರಸ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಎಫ್ಎಎಲ್ ನ ಗಣಿತ ಕಾರ್ಯಕ್ರಮ ಸಂಯೋಜಕ ಫರ್ಡಿ ಡಿಸೋಜ, ಸಾಧಕ ವಿದ್ಯಾರ್ಥಿ ಮುರಳೀಧರ್ ರಾವ್ ಮತ್ತು ಅವರ ತಂದೆ ಗೋಪಿಕೃಷ್ಣನ್ ರಾವ್ ಉಪಸ್ಥಿತರಿದ್ದರು.