×
Ad

ಟೋಲ್ ತೆರವುಗೊಳಿಸಿ, ಇಲ್ಲವೇ ರಾಜೀನಾಮೆ ನೀಡಿ; ಸಂಸದ, ಶಾಸಕರಿಗೆ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಒತ್ತಾಯ

Update: 2022-06-17 17:34 IST

ಮಂಗಳೂರು : ಸುರತ್ಕಲ್ ಟೋಲ್‌ಗೇಟ್ ಮುಚ್ಚಲು ನೀಡಿರುವ ಗಡುವು ಮುಗಿಯಲು ಕೆಲವೇ ದಿನಗಳು ಬಾಕಿ ಇದ್ದು, ಟೋಲ್‌ಗೇಟ್ ತೆರವುಗೊಳಿಸಬೇಕು, ಇಲ್ಲವಾದಲ್ಲಿ ಸ್ಥಳೀಯ ಸಂಸದ ಮತ್ತು ಶಾಸಕರು ರಾಜೀನಾಮೆ ನೀಡಬೇಕು ಎಂದು ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಅವರು, 60 ಕಿ.ಮೀ ಒಳಗಿರುವ ಎಲ್ಲ ಟೋಲ್ ಸಂಗ್ರಹ ಕೇಂದ್ರಗಳನ್ನು 90 ದಿನಗಳ ಒಳಗೆ ತೆರವುಗೊಳಿಸುವುದಾಗಿ ಹೇಳಿದ್ದ ಕೇಂದ್ರ ಸಚಿವರ ಹೇಳಿಕೆಯನ್ನು ಸ್ಥಳೀಯ ಸಂಸದ ನಳಿನ್‌ ಕುಮಾರ್ ಕಟೀಲ್ ಹಾಗೂ ಶಾಸಕ ಡಾ. ವೈ. ಭರತ್ ಶೆಟ್ಟಿ ಪುನರುಚ್ಚರಿಸಿದ್ದರು. ಜೂ.22ಕ್ಕೆ ಅವರು ಹೇಳಿರುವ 90 ದಿನಗಳು ಪೂರ್ಣಗೊಳ್ಳುತ್ತದೆ. ಆದರೆ, ಟೋಲ್ ಕೇಂದ್ರ ತೆರವಿಗೆ ಸಂಬಂಧಿಸಿ ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ ಎಂದರು.

ಆರು ತಿಂಗಳ ಅವಧಿಗೆ ತಾತ್ಕಾಲಿಕ ನೆಲೆಯಲ್ಲಿ ಆರಂಭವಾಗಿದ್ದ ಸುರತ್ಕಲ್ ಟೋಲ್ ಕೇಂದ್ರವು ಏಳು ವರ್ಷಗಳಿಂದ ಅಕ್ರಮವಾಗಿ ಸುಂಕ ವಸೂಲಿ ಮಾಡುತ್ತಿದೆ. ಈ ಬಾರಿ ನಿಗದಿತ ಅವಧಿಯಲ್ಲಿ ಕೇಂದ್ರ ಮುಚ್ಚದಿದ್ದರೆ, ಹೋರಾಟ ಸಮಿತಿ ವತಿಯಿಂದ ಟೋಲ್ ಮುತ್ತಿಗೆ ಕಾರ್ಯಕ್ರಮ ನಡೆಸಲಾಗುವುದು ಮತ್ತು ನಿರಂತರ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ದಲಿತ ನಾಯಕ ಎಂ. ದೇವದಾಸ್, ವಕೀಲ ದಿನೇಶ್ ಹೆಗ್ಡೆ, ಹೋರಾಟ ಸಮಿತಿ ಸಹ ಸಂಚಾಲಕ ವೈ. ರಾಘವೇಂದ್ರ ರಾವ್, ಉಡುಪಿ ಜಿಲ್ಲೆ ಟ್ಯಾಕ್ಸಿ ಮೆನ್ಸ್ ಮತ್ತು  ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಅಧ್ಯಕ್ಷ ರಮೇಶ್ ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ದಿನೇಶ್ ಕುಂಪಲ, ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್, ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ಹೆದ್ದಾರಿ ಹೋರಾಟ ಸಮಿತಿ ಉಡುಪಿ ಸಂಚಾಲಕ ಶೇಖರ ಹೆಜಮಾಡಿ, ದಕ ಜಿಲ್ಲಾ ಲಾರಿ ಮಾಲಕರ ಸಂಘದ ಉಪಾಧ್ಯಕ್ಷ ಮೂಸಬ್ಬ ಪಕ್ಷಿಕೆರೆ, ದಲಿತ ಸಂಘರ್ಷ ಸಮಿತಿ ಸಂಚಾಲಕ ರಘು ಎಕ್ಕಾರು, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಮುಖಂಡರಾದ ಟಿ.ಎನ್. ರಮೇಶ್, ಶ್ರೀನಾಥ ಕುಲಾಲ್ ಉಪಸ್ಥಿತರಿದ್ದರು.

ಹೋರಾಟಗಾರರು ಹಣ ಪಡೆದಿರುವ ಬಗ್ಗೆ ಸಾಕ್ಷ್ಯ ನೀಡಿ

"ಸುರತ್ಕಲ್ ಟೋಲ್ ಗೇಟ್ ವಿರೋದಿ ಹೋರಾಟಗಾರರು ಹಣ ಪಡೆದಿದ್ದಾರೆ ಎಂದು ಶಾಸಕ ಭರತ್ ಶೆಟ್ಟಿ ಆರೋಪಿಸಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರು ಸಾಕ್ಷ್ಯಸಮೇತ ಆರೋಪ ಮಾಡಲಿ. ಹಣಪಡೆದವರ ಗುರುತು ಬಹಿರಂಗಪಡಿಸಬೇಕು ಇಲ್ಲದಿದ್ದಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಹಣ ಪಡೆದವರ ಮಾಹಿತಿ ಇದ್ದರೆ, ಅವರ ವಿರುದ್ಧ ದೂರು ದಾಖಲಿಸಿ, ಹಣ ಪಡೆದವರನ್ನು ಜೈಲಿಗೆ ಕಳುಹಿಸಲಿ. ಕ್ಷೇತ್ರದ ಶಾಸಕರಿಗೆ ಯಾವುದೇ ಅಭಿವೃದ್ಧಿ ಕೆಲಸ ತರಲು ಸಾಧ್ಯವಾಗಲಿಲ್ಲ. ಟೋಲ್ ಕೇಂದ್ರದ ವಿಷಯ ಪ್ರಸ್ತಾಪಿಸಿದರೆ, ಸಿಡಿಮಿಡಿಗೊಳ್ಳುತ್ತಾರೆ".

ಮುನೀರ್ ಕಾಟಿಪಳ್ಳ, ಸಂಚಾಲಕರು, ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News