ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಗೇಮ್ಸ್; ದ.ಕ.ಜಿಲ್ಲೆಯಲ್ಲಿ ಮೊಬೈಲ್ ಡಿ ಅಡಿಕ್ಷನ್ ಸೆಂಟರ್ ಆರಂಭಕ್ಕೆ ಸೂಚನೆ
ಮಂಗಳೂರು: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಶಿಕ್ಷಣದಿಂದ ಮಕ್ಕಳು ಮೊಬೈಲ್ ಗೇಮ್ಸ್‌ನ ಚಟಕ್ಕೆ ಒಳಗಾಗಿದ್ದಾರೆ. ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತರಲು ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳೇ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಗಮನ ಸೆಳೆದಿರುವ ಪ್ರಸಂಗ ಇಂದು ನಡೆದಿದೆ.
ನಗರದ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಶುಕ್ರವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದ.ಕ. ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಕ್ಷಣ ಇಲಾಖೆ, ಮಕ್ಕಳ ರಕ್ಷಣಾ ಘಟಕ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಕ್ಕಳೊಂದಿಗೆ ನಡೆದ ಸಂವಾದ ಕಾರ್ಯಕ್ರಮ ನಡೆಯಿತು.
ಸಂವಾದದ ವೇಳೆ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡ ವಿದ್ಯಾರ್ಥಿಯಲ್ಲೊಬ್ಬರು ಮಕ್ಕಳ ಮೊಬೈಲ್ ಗೇಮ್ಸ್ ಚಟದ ಬಗ್ಗೆ ಪ್ರಸ್ತಾಪಿಸಿದರು.
ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಈ ಬಗ್ಗೆ ಪ್ರತಿಕ್ರಿಯಿಸಿದ ಆಯೋಗದ ಸದಸ್ಯ ಶಂಕರಪ್ಪ, ಜಿಲ್ಲೆಯಲ್ಲಿ ಮೊಬೈಲ್ ಡಿ ಅಡಿಕ್ಷನ್ ಸೆಂಟರ್ ಆರಂಭ ಸಹಿತ, ಮಕ್ಕಳ ಕುರಿತಾದ ಸಮಸ್ಯೆಗಳು, ಬೇಡಿಕೆಗಳ ಕುರಿತಂತೆ ಅಂಕಿ ಅಂಶಗಳನ್ನು ಆಯೋಗಕ್ಕೆ ಸಲ್ಲಿಸುವಂತೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಿಗೆ ಸೂಚಿಸಿದರು.
ಶಾಲೆಗಳಿಗೆ ಪಠ್ಯಪುಸ್ತಕ ಬಂದಿಲ್ಲ, ಕಬ್ಬಿಣಾಂಶದ ಮಾತ್ರೆ ವಿತರಣೆ ಆಗುತ್ತಿಲ್ಲ, ಶಾಲೆ, ವಸತಿ ನಿಲಯದ ಆವರಣ ಗೋಡೆ ಎತ್ತರಿಸಬೇಕು, ಸ್ಯಾನಿಟರ್ ಪ್ಯಾಡ್ ಪೂರೈಕೆ ಸ್ಥಗಿತ ಮುಂತಾದ ಸಮಸ್ಯೆಗಳನ್ನು ಮಕ್ಕಳು ಆಯೋಗದ ಗಮನಕ್ಕೆ ತಂದಾಗ, ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಆಯೋಗದ ಸದಸ್ಯ ಡಿ. ಶಂಕರಪ್ಪ ನೀಡಿದರು.
ಉಚಿತ ಬಸ್‌ಪಾಸ್ ಹಿಡಿದು ಬಸ್ ಹತ್ತಿದರೆ ಬಸ್ ನಿರ್ವಾಹಕರು ನಿಂದಿಸುತ್ತಾರೆ, ಕೆಲವೊಮ್ಮೆ ಬಸ್‌ನಿಂದ ಇಳಿಸುತ್ತಾರೆ ಎಂದು ಕುತ್ತಾರು ಬಾಲಸಂರಕ್ಷಣಾ ಕೇಂದ್ರದ ಬಾಲಕಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಸಂಬಂಧಪಟ್ಟವರಿಗೆ ಸೂಚನೆ ನೀಡಿ ಮುಂದೆ ಹೀಗಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ದಿನೇಶ್‌ಕುಮಾರ್ ಭರವಸೆ ನೀಡಿದರು.
ಆಯೋಗದ ಸದಸ್ಯ ಪರಶುರಾಮ, ಡಿಡಿಪಿಐ ಸುಧಾಕರ್, ಡಿಎಚ್‌ಒ ಡಾ. ಕಿಶೋರ್‌ಕುಮಾರ್, ಎಂಡೋಸಲ್ಫಾನ್ ಪೀಡಿತರ ಪುನರ್ವಸತಿ ನೋಡೆಲ್ ಅಧಿಕಾರಿ ಡಾ. ನವೀನ್‌ಚಂದ್ರ ಕುಲಾಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಾಪ ಬೋವಿ, ಪುತ್ತೂರು ಡಿವೈಎಸ್‌ಪಿ ಗಾನಾ ಪಿ.ಕುಮಾರ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜ, ಮೈಸೂರು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಕೆ.ವಿ., ಶಾಂತಿ ಸಂದೇಶ ಟ್ರಸ್ಟ್ ನಿರ್ದೇಶಕಿ ದುಲ್ಸಿನ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಯಮುನಾ ಉಪಸ್ಥಿತರಿದ್ದರು.
ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಜವಾಬ್ದಾರಿ: ನ್ಯಾ. ಶೋಭಾ ಬಿ.ಜಿ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದ.ಕ. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ., ಮಕ್ಕಳು ಡ್ರಗ್ಸ್ ಚಟಕ್ಕೆ ಒಳಗಾಗುತ್ತಿರುವ ಪ್ರಕರಣ ಹೆಚ್ಚುತ್ತಿದ್ದು, ಈ ಬಗ್ಗೆ ಎಚ್ಚರ ವಹಿಸಿ ಮಕ್ಕಳು ಮಾದಕ ದ್ರವ್ಯ ವ್ಯಸನಿಗಳಾಗದಂತೆ ನೋಡಿಕೊಳ್ಳ ಬೇಕಿದೆ. ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಜವಾಬ್ದಾರಿ ಎಂದರು.
ಬಾಲ್ಯದ ನೆನಪುಗಳು ಯಾವತ್ತೂ ಸಿಹಿಯಾಗಿರಬೇಕು. ಅದಕ್ಕಾಗಿ ಸರಕಾರ ಶಿಕ್ಷಣ, ಪೌಷ್ಠಿಕ ಆಹಾರ ಸಹಿತ ಅನೇಕ ಯೋಜನೆಗಳನ್ನು ರೂಪಿಸಿ, ಜಾರಿಗೊಳಿಸಿದೆ. ಆದರೂ, ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ನಡೆಯುತ್ತಿವೆ. ಜೀವನಕ್ಕೆ ಸಂಬಂಧಿಸಿ ಮಕ್ಕಳ ಇಚ್ಛೆಗೆ ವಿರುದ್ಧವಾಗಿ ವರ್ತಿಸುವುದೂ ಮಕ್ಕಳ ಶೋಷಣೆಯಾಗು ತ್ತದೆ. ಮಕ್ಕಳ ಜೀವನ, ಶಿಕ್ಷಣ, ಬೆಳವಣಿಗೆ, ರಕ್ಷಣೆ, ಆಟ, ದುಡಿಮೆಯಿಂದ ಹೊರಗಿರುವುದು ಅವರ ಹಕ್ಕುಗಳಾಗಿವೆ. ಈ ಎಲ್ಲ ಹಕ್ಕುಗಳನ್ನು ಮಕ್ಕಳಿಗೆ ಖಾತ್ರಿಪಡಿಸಬೇಕು ಎಂದರು.
ಆಯೋಗದ ಬಳ್ಳಾರಿ ವಲಯದ ಸದಸ್ಯ ಎಚ್.ಸಿ. ರಾಘವೇಂದ್ರ ಮಾತನಾಡಿ, ಕೋವಿಡ್ ಸಂದರ್ಭ ದೇಶದಲ್ಲಿ ಮೂರು ಕೋಟಿಗೂ ಅಧಿಕ ಮಕ್ಕಳು ಶಾಲೆ ತೊರೆದಿದ್ದಾರೆ. ವಸತಿ ವಂಚಿತರಾಗಿದ್ದಾರೆ, ಬಾಲ್ಯ ಕಳೆದು ಕೊಂಡಿದ್ದಾರೆ. ವಿವಾಹಗಳ ಶೇ. ೨೧ ಭಾಗ ಬಾಲ್ಯವಿವಾಹವಾಗಿದೆ. ಕೋವಿಡ್ ಅವಧಿಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸಮಸ್ಯೆ, ಅವರು ಎದುರಿಸುತ್ತಿರುವ ತೊಂದರ ಬಗ್ಗೆ ಮಕ್ಕಳಿಂದಲೇ ಮಾಹಿತಿ ಪಡೆಯಲು ಸಂವಾದ ಆಯೋಜಿಸಲಾಗಿದೆ ಎಂದರು.
"ಮಕ್ಕಳ ತಪ್ಪುಗಳನ್ನು ವಿಚಾರಣೆ ನಡೆಸುವ ಪೊಲೀಸರು, ವಕೀಲರು, ನ್ಯಾಯಾಧೀಶರು, ಕೋರ್ಟ್ ಮಕ್ಕಳಿಗೆ ಪೂರಕವಾಗಿರುತ್ತಾರೆ. ಮಕ್ಕಳ ಸ್ನೇಹಿ ವ್ಯವಸ್ಥೆಯ ಜಾರಿಗಾಗಿ ಆಯೋಗ ಕೆಲಸ ಮಾಡುತ್ತಿದೆ".
-ಡಿ. ಶಂಕರಪ್ಪ, ಸದಸ್ಯರು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ.