ಪರಮಾಣು ಶಸ್ತ್ರಕ್ಕಾಗಿ 2021ರಲ್ಲಿ ಪ್ರತೀ ನಿಮಿಷಕ್ಕಾದ ಜಾಗತಿಕ ವೆಚ್ಚ ರೂ. 1.22 ಕೋಟಿ!

Update: 2022-06-18 10:16 GMT

ಯಾರ್ಯಾರ ಖರ್ಚು ಎಷ್ಟೆಷ್ಟು?

2021ರಲ್ಲಿ ಪರಮಾಣು ಶಸ್ತ್ರಗಳಿಗಾಗಿ ಅತಿ ಹೆಚ್ಚು ಖರ್ಚು ಮಾಡಿದ ದೇಶ ಅಮೆರಿಕವಾಗಿದೆ. ಅದು 44.2 ಬಿಲಿಯ ಡಾಲರ್ (ಸುಮಾರು 3.45 ಲಕ್ಷ ಕೋಟಿ ರೂಪಾಯಿ) ಮೊತ್ತವನ್ನು ಈ ಉದ್ದೇಶಕ್ಕಾಗಿ ಖರ್ಚು ಮಾಡಿದೆ. ಇದು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಬರುವ ದೇಶ (ಚೀನಾ)ಕ್ಕಿಂತ ನಾಲ್ಕು ಪಟ್ಟು ಅಧಿಕವಾಗಿದೆ.

ಚೀನಾವು ತನ್ನ ಪರಮಾಣು ಶಸ್ತ್ರಾಸ್ತ್ರಗಳಿಗಾಗಿ ಈ ಅವಧಿಯಲ್ಲಿ 11.7 ಬಿಲಿಯ ಡಾಲರ್ (ಸುಮಾರು 91,350 ಕೋಟಿ ರೂಪಾಯಿ) ವೆಚ್ಚ ಮಾಡಿದೆ.

ಮೂರನೇ ಸ್ಥಾನದಲ್ಲಿ ರಶ್ಯವಿದ್ದು, ಅದು 8.6 ಬಿಲಿಯ ಡಾಲರ್ (ಸುಮಾರು 67,140 ಕೋಟಿ ರೂಪಾಯಿ) ಖರ್ಚು ಮಾಡಿದೆ.

ಬ್ರಿಟನ್ 6.8 ಬಿಲಿಯ ಡಾಲರ್ (ಸುಮಾರು 53,090 ಕೋಟಿ ರೂಪಾಯಿ) ಖರ್ಚು ಮಾಡಿದರೆ, ಫ್ರಾನ್ಸ್ 5.9 ಬಿಲಿಯ ಡಾಲರ್ (ಸುಮಾರು 46,060 ಕೋಟಿ ರೂಪಾಯಿ) ವೆಚ್ಚ ಮಾಡಿದೆ.

ಅದೇ ವೇಳೆ, ಭಾರತ, ಇಸ್ರೇಲ್ ಮತ್ತು ಪಾಕಿಸ್ತಾನಗಳು 2021ರಲ್ಲಿ ಪರಮಾಣು ಶಸ್ತ್ರಗಳಿಗಾಗಿ ಒಂದು ಬಿಲಿಯ ಡಾಲರ್ (ಸುಮಾರು 7,800 ಕೋಟಿ ರೂಪಾಯಿ)ಗಿಂತ ಸ್ವಲ್ಪ ಹೆಚ್ಚಿನ ಹಣವನ್ನು ವ್ಯಯಿಸಿವೆ.ಪಟ್ಟಿಯ ಕೊನೆಯ ಸ್ಥಾನದಲ್ಲಿ ಉತ್ತರ ಕೊರಿಯವಿದ್ದು, ಅದು 642 ಮಿಲಿಯ ಡಾಲರ್ (ಸುಮಾರು 5,000 ಕೋಟಿ ರೂಪಾಯಿ) ವೆಚ್ಚ ಮಾಡಿದೆ.

2021ರಲ್ಲಿ ಜಾಗತಿಕ ಮಟ್ಟದಲ್ಲಿ ಪರಮಾಣು ಶಸ್ತ್ರಗಳಿಗಾಗಿ ಖರ್ಚು ಮಾಡಿರುವ ಮೊತ್ತದಲ್ಲಿ ಗಣನೀಯ ಏರಿಕೆಯಾಗಿದೆ ಎಂದು ‘ಅಂತರ್‌ರಾಷ್ಟೀಯ ಪರಮಾಣು ಶಸ್ತ್ರಾಸ್ತ್ರಗಳ ನಿರ್ಮೂಲನೆ ಅಭಿಯಾನ (ಐಸಿಎಎನ್)’ದ ನೂತನ ವರದಿ ಹೇಳಿದೆ. ವರದಿಯು ಮಂಗಳವಾರ ಬಿಡುಗಡೆಯಾಗಿದೆ.

ಒಂದು ವರ್ಷದಲ್ಲಿ ಒಂಭತ್ತು ಪರಮಾಣು ಶಕ್ತ ದೇಶಗಳಾದ ಅಮೆರಿಕ, ಚೀನಾ, ರಶ್ಯ, ಫ್ರಾನ್ಸ್, ಭಾರತ, ಇಸ್ರೇಲ್, ಉತ್ತರ ಕೊರಿಯ, ಪಾಕಿಸ್ತಾನ ಮತ್ತು ಬ್ರಿಟನ್‌ಗಳು ತಮ್ಮ ಸುಮಾರು 13,000 ಪರಮಾಣು ಅಸ್ತ್ರಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಅವುಗಳ ನಿರ್ವಹಣೆಗೆ ಒಟ್ಟು 82.4 ಬಿಲಿಯ ಡಾಲರ್ (ಸುಮಾರು 6,43,300 ಕೋಟಿ ರೂಪಾಯಿ) ಖರ್ಚು ಮಾಡಿವೆ. ಇದು ಹಿಂದಿನ ವರ್ಷ ಖರ್ಚು ಮಾಡಿದ ಮೊತ್ತಕ್ಕಿಂತ ಶೇ. 9 ಹೆಚ್ಚಾಗಿದೆ ಎಂದು ಐಸಿಎಎನ್ ವರದಿ ಅಂದಾಜಿಸಿದೆ.

("Squandered: 2021 Global Nuclear Weapons Spending')ಎಂಬ ತಲೆಬರಹದ ವರದಿಯು (https://assets.nationbuilder.com/ican/pages/2873/attachments/original/1655145777/Spending_Report_2022_web.pdf?1655145777) , ಜಗತ್ತು 2021ರ ಪ್ರತಿ ಒಂದು ನಿಮಿಷದಲ್ಲಿ ಸಾಮೂಹಿಕ ವಿನಾಶಕ ಶಸ್ತ್ರಗಳಿಗಾಗಿ 1,56,842 ಡಾಲರ್ (ಸುಮಾರು 1.22 ಕೋಟಿ ರೂಪಾಯಿ) ಖರ್ಚು ಮಾಡಿದೆ ಎಂದು ಹೇಳಿದೆ. ಕೊರೋನ ವೈರಸ್ ಸಾಂಕ್ರಾಮಿಕದ ದಾಳಿ ಮತ್ತು ಹೆಚ್ಚುತ್ತಿರುವ ಜಾಗತಿಕ ಆಹಾರ ಅಭದ್ರತೆಯ ನಡುವೆಯೇ ಇಷ್ಟೊಂದು ಪ್ರಮಾಣದ ಹಣವನ್ನು ಪರಮಾಣು ಅಸ್ತ್ರಗಳಿಗಾಗಿ ಖರ್ಚು ಮಾಡಲಾಗಿದೆ.

ಈ ಒಂಭತ್ತು ದೇಶಗಳ ಪೈಕಿ ಪ್ರತಿಯೊಂದು ಪರಮಾಣು ಶಸ್ತ್ರಗಳಿಗಾಗಿ ಎಷ್ಟು ಖರ್ಚು ಮಾಡಿದೆ ಎನ್ನುವುದರ ವಿವರವನ್ನು ಐಸಿಎಎನ್ ವರದಿ ನೀಡಿದೆ. ಇದರಿಂದ ಲಾಭ ಮಾಡಿರುವ ಕಂಪೆನಿಗಳು ಯಾವುವು ಮತ್ತು ಪರಮಾಣು ಅಸ್ತ್ರಗಳ ವ್ಯಾಪಾರವನ್ನು ಚಾಲ್ತಿಯಲ್ಲಿಡುವುದಕ್ಕಾಗಿ ಯಾವ ಲಾಬಿಗಾರರ ಸೇವೆಗಳನ್ನು ಪಡೆದುಕೊಳ್ಳಲಾಗಿದೆ ಎಂಬ ವಿವರಗಳನ್ನೂ ವರದಿಯು ಒಳಗೊಂಡಿದೆ.

 ಇಷ್ಟೊಂದು ವೆಚ್ಚ ಯಾಕೆ?

ಆಹಾರ ಮತ್ತು ಇಂಧನ ಕೊರತೆಯಂತಹ ಹಲವಾರು ಗಂಭೀರ ಸಮಸ್ಯೆಗಳನ್ನು ಜಗತ್ತು ಎದುರಿಸುತ್ತಿರುವಾಗ, ಈ ದೇಶಗಳು ಪರಮಾಣು ಶಸ್ತ್ರಗಳ ಮೇಲೆ ಇಷ್ಟೊಂದು ಹಣವನ್ನು ಯಾಕೆ ಮತ್ತು ಹೇಗೆ ವ್ಯಯಿಸಿವೆ ಎಂದು ವರದಿ ಪ್ರಶ್ನಿಸಿದೆ. ಹಾಗೂ, ಪರಮಾಣು ಶಸ್ತ್ರಗಳ ಮೇಲೆ ಇಷ್ಟೊಂದು ಅಗಾಧ ಹಣವನ್ನು ವ್ಯಯಿಸಲು ಭದ್ರತಾ ಕಳವಳಗಳು ಕಾರಣವಲ್ಲ, ಇದರಲ್ಲಿ ವ್ಯಾಪಾರಿ ಹಿತಾಸಕ್ತಿಯಿದೆ ಎಂಬ ನಿರ್ಧಾರಕ್ಕೆ ಅದು ಬಂದಿದೆ.

 ಅಮೆರಿಕದ ಸೇನಾ ಗುತ್ತಿಗೆದಾರರಿಂದ ಸಂಪತ್ತು ಗಳಿಕೆ

ಅಮೆರಿಕದ ಕೆಲವು ಸೇನಾ ಗುತ್ತಿಗೆದಾರರು ಪರಮಾಣು ಶಸ್ತ್ರಾಸ್ತ್ರ ಸಂಬಂಧಿ ಗುತ್ತಿಗೆಗಳಿಂದ ಅಗಾಧ ಸಂಪತ್ತು ಕಲೆ ಹಾಕಿದ್ದಾರೆ ಎಂದು ಐಸಿಎಎನ್ ವರದಿ ಹೇಳಿದೆ. ಈ ಗುತ್ತಿಗೆ ಕಂಪೆನಿಗಳು ತಮ್ಮ ಸಂಪತ್ತಿನ ಒಂದು ದೊಡ್ಡ ಭಾಗವನ್ನು ಲಾಬಿಗಾರರು ಮತ್ತು ಚಿಂತಕರ ಮೇಲೆ ಸುರಿಯುತ್ತವೆ. ಈ ಲಾಬಿಗಾರರು ಮತ್ತು ಚಿಂತಕರು, ಸಮೂಹನಾಶಕ ಅಸ್ತ್ರಗಳ ಮೇಲೆ ಇನ್ನೂ ಹೆಚ್ಚಿನ ಹಣವನ್ನು ವ್ಯಯಿಸುವಂತೆ ರಾಜಕಾರಣಿಗಳ ಮೇಲೆ ಪ್ರಭಾವ ಬೀರುತ್ತಾರೆ ಎಂದು ವರದಿ ಹೇಳುತ್ತದೆ.

2021ರಲ್ಲಿ ಹನಿವೆಲ್ ಇಂಟರ್‌ನ್ಯಾಶನಲ್ ಎಂಬ ಕಂಪೆನಿಯು ಪರಮಾಣು ಸಂಬಂಧಿ ಟೆಂಡರ್‌ಗಳಿಂದ 6.2 ಬಿಲಿಯ ಡಾಲರ್ (ಸುಮಾರು 48,400 ಕೋಟಿ ರೂಪಾಯಿ) ಆದಾಯ ಗಳಿಸಿತು. ಈ ಅವಧಿಯಲ್ಲಿ ಅದು ಲಾಬಿಗಾರಿಕೆಗಾಗಿ 7 ಮಿಲಿಯ ಡಾಲರ್ (ಸುಮಾರು 55 ಕೋಟಿ ರೂಪಾಯಿ) ವೆಚ್ಚ ಮಾಡಿತು.

ನಾರ್ತ್‌ರಾಪ್ ಗ್ರಮ್ಮನ್ (ಎನ್‌ಜಿ) ಕಂಪೆನಿಯು 5 ಬಿಲಿಯ ಡಾಲರ್ (ಸುಮಾರು 39,000 ಕೋಟಿ ರೂಪಾಯಿ) ಗಳಿಸಿತು ಮತ್ತು ಲಾಬಿಗಾರಿಕೆಗಾಗಿ 11.6 ಮಿಲಿಯ ಡಾಲರ್ (ಸುಮಾರು 90 ಕೋಟಿ ರೂಪಾಯಿ) ಖರ್ಚು ಮಾಡಿತು. ಲಾಕ್‌ಹೀಡ್ ಮಾರ್ಟಿನ್ (ಎಲ್‌ಎಮ್) ಕಂಪೆನಿಯು ಪರಮಾಣು ಅಸ್ತ್ರ ಸಂಬಂಧಿ ವ್ಯವಹಾರಗಳಿಂದ 1.9 ಬಿಲಿಯ ಡಾಲರ್ (14,830 ಕೋಟಿ ರೂಪಾಯಿ) ಗಳಿಸಿತು ಮತ್ತು ಲಾಬಿಗಾರಿಕೆಗಾಗಿ 16.9 ಮಿಲಿಯ ಡಾಲರ್ (ಸುಮಾರು 132 ಕೋಟಿ ರೂಪಾಯಿ) ಖರ್ಚು ಮಾಡಿತು.

ಸಾವಿರಾರು ಗುತ್ತಿಗೆಗಳು, ವರದಿಗಳು ಮತ್ತು ಬಹಿರಂಗಗೊಂಡ ಲಾಬಿಗಾರಿಕೆ ವಿವರಗಳನ್ನು ಪರಿಶೀಲಿಸಿದ ಬಳಿಕ, 2021ರಲ್ಲಿ ಪರಮಾಣು ಶಸತ್ಸಾಸ್ತ್ರಗಳಿಗೆ ಸಂಬಂಧಿಸಿದ ಗುತ್ತಿಗೆಗಳಿಂದ 12ಕ್ಕೂ ಅಧಿಕ ಖಾಸಗಿ ಕಂಪೆನಿಗಳು ಒಟ್ಟು 30.2 ಬಿಲಿಯ ಡಾಲರ್ (ಸುಮಾರು 2.36 ಲಕ್ಷ ಕೋಟಿ ರೂಪಾಯಿ) ವರಮಾನವನ್ನು ಗಳಿಸಿವೆ ಎಂಬುದಾಗಿ ಅಂದಾಜಿಸಲಾಗಿದೆ ಎಂದು ವರದಿಯ ಲೇಖಕರು ಬರೆದಿದ್ದಾರೆ.

‘‘ಈ ಕಂಪೆನಿಗಳು ಬಳಿಕ, ರಕ್ಷಣೆಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡುವಂತೆ ರಾಜಕಾರಣಿಗಳ ಮೇಲೆ ಪ್ರಭಾವ ಬೀರುವುದಕ್ಕಾಗಿ ಲಾಬಿಗಾರರ ಮೇಲೆ 117 ಮಿಲಿಯ ಡಾಲರ್ (ಸುಮಾರು 913 ಕೋಟಿ ರೂಪಾಯಿ) ಹಣವನ್ನು ಖರ್ಚು ಮಾಡಿವೆ. ಅದೂ ಅಲ್ಲದೆ, ಪರಮಾಣು ಅಸ್ತ್ರ ನೀತಿ ಕುರಿತು ತಮ್ಮ ಅಭಿಪ್ರಾಯಗಳನ್ನು ಬರೆಯುವ ಚಿಂತಕರಿಗೆ 10 ಮಿಲಿಯ ಡಾಲರ್ (ಸುಮಾರು 78 ಕೋಟಿ ರೂಪಾಯಿ) ಪಾವತಿಸಿದೆ’’ ಎಂದು ಐಸಿಎಎನ್ ಬರೆದಿದೆ.

ಇಷ್ಟು ಹಣವನ್ನು ಖರ್ಚು ಮಾಡಲಾಗಿದೆಯಾದರೂ, ಯಾವುದೇ ರೀತಿಯ ಪರಮಾಣು ಸಂಘರ್ಷವನ್ನು ತಡೆಯುವುದಕ್ಕಾಗಿ ಏನನ್ನೂ ಮಾಡಲಾಗಿಲ್ಲ ಎಂದು ವರದಿ ಹೇಳುತ್ತದೆ. ಅದೂ ಅಲ್ಲದೆ, ಯುರೋಪ್‌ನಲ್ಲಿನ ಇತ್ತೀಚಿನ ಭೌಗೋಳಿಕ-ರಾಜಕೀಯ ಘಟನೆಗಳನ್ನು ಗಮನಿಸಿದರೆ ಪರಮಾಣು ಶಸ್ತ್ರ ಉದ್ದಿಮೆಯಲ್ಲಿ ತೊಡಗಿರುವವರ ಜೇಬುಗಳು ಇನ್ನಷ್ಟು ದಪ್ಪವಾಗುವುದರಲ್ಲಿ ಸಂಶಯವಿಲ್ಲ ಎಂದಿದೆ.

ವರದಿ ಹೇಳುತ್ತದೆ: ‘‘ಜಗತ್ತನ್ನು ಹಲವು ಬಾರಿ ನಾಶಪಡಿಸಬಲ್ಲ ಸಾಮರ್ಥ್ಯವಿರುವ ಸಾವಿರಾರು ಸಮೂಹನಾಶಕ ಅಸ್ತ್ರಗಳ ಮೇಲೆ ಬಿಲಿಯಗಟ್ಟಲೆ ಡಾಲರ್ ಸುರಿಯಲಾಗಿದೆ. ಈ ಹಣವು ಯುರೋಪ್‌ನಲ್ಲಿ ಶಾಂತಿಗಾಗಿ ಖರ್ಚು ಮಾಡಬೇಕಾದ ಹಣವಾಗಿದೆ. ಆದರೆ, ಆ ಅಗಾಧ ಪ್ರಮಾಣದ ಹಣವು ಸಮೂಹನಾಶಕ ಅಸ್ತ್ರಗಳನ್ನು ನಿರ್ಮಿಸುವುದರಿಂದ ಲಾಭ ಪಡೆಯುವ ಪ್ರಭಾವಿ ವ್ಯಕ್ತಿಗಳ ಜೇಬು ಸೇರಿದೆ’’.

‘‘ಪರಮಾಣು ಶಸ್ತ್ರಗಳಿಂದ ಪ್ರಯೋಜನವಿಲ್ಲ. ಯುರೋಪ್‌ನಲ್ಲಿ ಸಂಘರ್ಷವನ್ನು ತಡೆಯುವಲ್ಲಿ ಅವು ವಿಫಲವಾಗಿವೆ’’ ಎನ್ನುವುದನ್ನು ವರದಿ ಪ್ರತಿಪಾದಿಸುತ್ತದೆ ಎಂದು ಐಸಿಎಎನ್ ಹೇಳುತ್ತದೆ.

‘‘ಹಾಗಾಗಿ, ಇಂದು ನಮಗೆ ಬಹುಪಕ್ಷೀಯ ನಿಶ್ಶಸ್ತ್ರೀಕರಣ ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪರಮಾಣು ಶಸ್ತ್ರಗಳ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿರುವ ದೇಶಗಳ ಮೊದಲ ಸಭೆ ವಿಯೆನ್ನಾದಲ್ಲಿ ಜೂನ್ 21ರಿಂದ 23ರವರೆಗೆ ನಡೆಯಲಿದೆ. ಈ ಸಭೆಯು ಅತ್ಯಂತ ಸೂಕ್ತ ಸಮಯದಲ್ಲಿ ನಡೆಯುತ್ತಿದೆ’’ ಎಂದು ಐಸಿಎಎನ್ ನೀತಿ ಮತ್ತು ಸಂಶೋಧನೆ ಸಮನ್ವಯಕಾರಿಣಿ ಅಲಿಶಿಯಾ ಸ್ಯಾಂಡರ್ಸ್-ಝಾಕರ್ ಹೇಳಿದರು.

ಐಸಿಎಎನ್ ಜಿನೀವಾದಲ್ಲಿರುವ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಅಂತರ್‌ರಾಷ್ಟ್ರೀಯ ಮಿತ್ರಕೂಟವಾಗಿದೆ. ಪರಮಾಣು ಅಸ್ತ್ರಗಳ ನಿಷೇಧ ಒಪ್ಪಂದವನ್ನು ಗೌರವಿಸಿ ಅದನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕೆಂದು ಅದು ಸಕ್ರಿಯವಾಗಿ ಅಭಿಯಾನ ನಡೆಸುತ್ತಿದೆ. ಈ ಒಪ್ಪಂದವು 2017ರಲ್ಲಿ ವಿಶ್ವಸಂಸ್ಥೆಯಲ್ಲಿ ಅಂಗೀಕಾರಗೊಳ್ಳುವ ನಿಟ್ಟಿನಲ್ಲಿ ಐಸಿಎಎನ್ ನೆರವು ನೀಡಿದೆ. ಒಪ್ಪಂದವನ್ನು ಈವರೆಗೆ ಜಗತ್ತಿನಾದ್ಯಂತದ 59 ದೇಶಗಳು ಅನುಮೋದಿಸಿವೆ. ಆದರೆ, ಯಾವುದೇ ಪರಮಾಣು ಶಕ್ತ ದೇಶ ಅದಕ್ಕೆ ಈವರೆಗೆ ಸಹಿ ಹಾಕಿಲ್ಲ.

 ಪರಮಾಣು ಶಸ್ತ್ರಗಳಲ್ಲಿ ಹೆಚ್ಚಳ

ಜಗತ್ತಿನಲ್ಲಿ ಪರಮಾಣು ಅಸ್ತ್ರಗಳ ಸಂಗ್ರಹವು ಮುಂದಿನ ವರ್ಷಗಳಲ್ಲಿ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದು ಸ್ವೀಡನ್‌ನ ಶಸ್ತ್ರಾಸ್ತ್ರಗಳ ಮೇಲಿನ ನಿಗಾ ಸಂಸ್ಥೆ ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಪ್ರಿ) ಹೇಳಿದೆ. ಇದರೊಂದಿಗೆ, ಶೀತಲ ಸಮರದ ಅಂತ್ಯದ ಬಳಿಕ ಪರಮಾಣು ಶಸ್ತ್ರಗಳಲ್ಲಿ ಆಗಿರುವ ಇಳಿಕೆಯು ಕೊನೆಗೊಳ್ಳಲಿದೆ.

ಶೀತಲ ಸಮರದ ಬಳಿಕ ಮೊದಲ ಬಾರಿಗೆ ಪರಮಾಣು ಸಿಡಿತಲೆಗಳ ಸಂಖ್ಯೆ ಹೆಚ್ಚಾಗಲಿದೆ. ಅದಕ್ಕಿಂತಲೂ ಹೆಚ್ಚಿನ ಕಳವಳದ ಸಂಗತಿಯೆಂದರೆ, ಈ ಶಸ್ತ್ರಗಳನ್ನು ಬಳಸುವ ಅಪಾಯವು ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿದೆ.

ಎಲ್ಲ ಒಂಭತ್ತು ಪರಮಣು ಶಕ್ತ ದೇಶಗಳು ತಮ್ಮ ಪರಮಾಣು ಶಸ್ತ್ರಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ ಅಥವಾ ಅವುಗಳನ್ನು ಮೇಲ್ದರ್ಜೆಗೇರಿಸುತ್ತಿವೆ ಎಂದು ಸಿಪ್ರಿ ಹೇಳಿದೆ.

ಜಗತ್ತಿನ ಒಟ್ಟು ಪರಮಾಣು ಬಾಂಬ್‌ಗಳ ಶೇ. 90 ಅಮೆರಿಕ ಮತ್ತು ರಶ್ಯ- ಈ ಎರಡೇ ದೇಶಗಳಲ್ಲಿವೆ. 2021ರಲ್ಲಿ, ವರ್ಷಗಳ ಹಿಂದೆಯೇ ಸೇನಾ ಬಳಕೆಯಿಂದ ಹೊರಬಿದ್ದಿದ್ದ ಬಾಂಬ್‌ಗಳನ್ನು ಈ ದೇಶಗಳ ಶಸ್ತ್ರಾಗಾರಗಳಿಂದ ಹೊರ ಹಾಕಲಾಯಿತು. ಹಾಗಾಗಿ, ಆ ದೇಶಗಳ ಬತ್ತಳಿಕೆಯಲ್ಲಿದ್ದ ಪರಮಾಣು ಬಾಂಬ್‌ಗಳ ಸಂಖ್ಯೆಯಲ್ಲಿ ಕಡಿತ ಉಂಟಾಯಿತು. ಈಗ ಅವುಗಳ ಬಳಕೆಯೋಗ್ಯ ಅಸ್ತ್ರಗಳ ಪ್ರಮಾಣವು ಪರಮಾಣು ಶಸ್ತ್ರಗಳ ಕಡಿತ ಒಪ್ಪಂದದಲ್ಲಿ ನಿಗದಿಪಡಿಸಲಾಗಿರುವ ಮಿತಿಯಲ್ಲೇ ಇದೆ ಎಂದು ಸಿಪ್ರಿ ತಿಳಿಸಿದೆ.

ಇತರ ಪರಮಾಣು ಶಕ್ತ ದೇಶಗಳು- ಬ್ರಿಟನ್, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ, ಇಸ್ರೇಲ್ ಮತ್ತು ಉತ್ತರ ಕೊರಿಯ- ತಮ್ಮ ಪರಮಾಣು ಶಸ್ತ್ರಗಳನ್ನು ಒಂದೋ ಅಭಿವೃದ್ಧಿಪಡಿಸುತ್ತಿವೆ ಅಥವಾ ನೂತನ ಪರಮಾಣು ಬಾಂಬ್‌ಗಳನ್ನು ನಿಯೋಜಿಸುತ್ತಿವೆ ಅಥವಾ ನಿಯೋಜಿಸುವ ಇಂಗಿತವನ್ನು ವ್ಯಕ್ತಪಡಿಸಿವೆ ಎಂದು ಸಿಪ್ರಿ ಹೇಳಿದೆ. ಆದರೆ, ತನ್ನಲ್ಲಿ ಪರಮಾಣು ಶಸ್ತ್ರಗಳು ಇವೆ ಎನ್ನುವುದನ್ನು ಇಸ್ರೇಲ್ ಈವರೆಗೆ ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ.

 ಶೇ. 90 ಶಸ್ತ್ರಗಳು ಅಮೆರಿಕ, ರಶ್ಯದಲ್ಲಿ

 ಜಗತ್ತಿನ ಒಟ್ಟು ಪರಮಾಣು ಬಾಂಬ್‌ಗಳ ಪೈಕಿ, ಬಹುತೇಕ ಶೇ. 90 ಬಾಂಬ್‌ಗಳು ಅಮೆರಿಕ ಮತ್ತು ರಶ್ಯಗಳಲ್ಲಿವೆ. ಅದೂ ಅಲ್ಲದೆ, ಜಗತ್ತಿನಲ್ಲೇ ಅತಿ ಹೆಚ್ಚು ಸಂಖ್ಯೆಯ ಪರಮಾಣು ಬಾಂಬ್‌ಗಳು ರಶ್ಯದಲ್ಲಿವೆ. ಆ ದೇಶದಲ್ಲಿ ಒಟ್ಟು 5,977 ಪರಮಾಣು ಬಾಂಬ್‌ಗಳು ಇರಬೇಕೆಂದು ಭಾವಿಸಲಾಗಿದೆ. ಇದು ಅಮೆರಿಕ ಹೊಂದಿರುವ ಬಾಂಬ್‌ಗಳಿಗಿಂತ 550 ಹೆಚ್ಚಾಗಿದೆ.

ಪರಮಾಣು ಬಾಂಬ್‌ಗಳ ಉತ್ಪಾದನೆಯನ್ನು ಹೆಚ್ಚಿಸುತ್ತಿರುವುದು ಅಮೆರಿಕ ಮತ್ತು ರಶ್ಯ ಮಾತ್ರವಲ್ಲ. ತನ್ನ ಪರಮಾಣು ಬಾಂಬ್‌ಗಳ ಸಂಗ್ರಹ ಮಿತಿಯನ್ನು ಏರಿಸುವ ನಿರ್ಧಾರವನ್ನು ಬ್ರಿಟನ್ ತೆಗೆದುಕೊಂಡಿದೆ. ಚೀನಾ ಕೂಡ ತನ್ನ ಪರಮಾಣು ಅಸ್ತ್ರಗಳ ಸಂಗ್ರಹವನ್ನು ಗಮನಾರ್ಹ ಪ್ರಮಾಣದಲ್ಲಿ ವಿಸ್ತರಿಸುವ ಕೆಲಸವನ್ನು ಆರಂಭಿಸಿದೆ. ಅದು 300ಕ್ಕೂ ಅಧಿಕ ಕ್ಷಿಪಣಿಗಳನ್ನು ನಿರ್ಮಿಸುತ್ತಿರುವುದನ್ನು ಉಪಗ್ರಹ ಚಿತ್ರಗಳು ತೋರಿಸಿವೆ.

ಮೂರನೇ ತಲೆಮಾರಿನ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ರಮವೊಂದನ್ನು ಫ್ರಾನ್ಸ್ ಈಗಾಗಲೇ ಮರುಆರಂಭಿಸಿದೆ. ಭಾರತ ಮತ್ತು ಪಾಕಿಸ್ತಾನಗಳೂ ತಮ್ಮ ಪರಮಾಣು ಶಸ್ತ್ರಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ ಎಂದು ಫೆಡರೇಶನ್ ಆಫ್ ಅಮೆರಿಕನ್ ಸಯಂಟಿಸ್ಟ್ಸ್ (ಎಫ್‌ಎಎಸ್) ಹೇಳಿದೆ.

ಪರಮಾಣುಶಕ್ತ ದೇಶಗಳು ‘‘ತಕ್ಷಣ ಪರಿಣಾಮಕಾರಿ ಕ್ರಮಗಳನ್ನು’’ ತೆಗೆದುಕೊಳ್ಳದಿದ್ದರೆ, ಪರಮಾಣು ಬಾಂಬ್‌ಗಳಿರುವ ಜಾಗತಿಕ ಶಸ್ತ್ರಾಸ್ತ್ರ ಬತ್ತಳಿಕೆಗಳು ಹಿಗ್ಗುತ್ತವೆ ಎಂಬುದಾಗಿ ಸಿಪ್ರಿ ಎಚ್ಚರಿಸಿದೆ.

Writer - ಕೃಪೆ:countercurrents.org

contributor

Editor - ಕೃಪೆ:countercurrents.org

contributor

Similar News