×
Ad

ಜನಪ್ರತಿನಿಧಿಗಳು- ಅಧಿಕಾರಿಗಳು ತಂಡವಾಗಿ ಕೆಲಸ ಮಾಡಬೇಕು: ಶಾಸಕ ರಘುಪತಿ ಭಟ್

Update: 2022-06-18 21:27 IST

ಉಡುಪಿ : ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಂದು ತಂಡವಾಗಿ ಕೆಲಸ ನಿರ್ವಹಿಸಿದರೆ ಸಾರ್ವಜನಿಕರ ಎಲ್ಲಾ ಸಮಸ್ಯೆಗಳಿಗೆ ಶೀಘ್ರದಲ್ಲಿ ನ್ಯಾಯಯುತ ಪರಿಹಾರ ಒದಗಿಸಲು ಸಾಧ್ಯವಾಗಲಿದೆ ಎಂದು ಶಾಸಕ ಕೆ. ರಘುಪತಿ ಭಟ್ ಅಭಿಪ್ರಾಯ ಪಟ್ಟಿದ್ದಾರೆ. 

ಶನಿವಾರ ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮ ವ್ಯಾಪ್ತಿಯ ಪೇತ್ರಿ ಯುವಕ ಮಂಡಲ ವಠಾರದಲ್ಲಿ, ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. 

ಸಾರ್ವಜನಿಕರು ತಮ್ಮ ಹತ್ತು ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಬಳಿ ಬರುತ್ತಾರೆ. ಈ ಸಮಸ್ಯೆಗಳ ಪರಿಹಾರದ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಂದು ತಂಡದ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಸಾರ್ವಜನಿಕರಿಗೆ ಸೂಕ್ತ ಸೇವೆ ಒದಗಿಸಲು ಸಾಧ್ಯವಿದೆ. ಜನರ ಸಮಸ್ಯೆಗಳಿಗೆ ಸಕಾಲದಲ್ಲಿ ಪರಿಹಾರ ದೊರೆತರೆ ಮಾತ್ರ ಸರಕಾರ ಮತ್ತು ಆಡಳಿತ ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂದವರು ಹೇಳಿದರು.

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮೂಲಕ ಸರಕಾರವು ದೂರದ ಗ್ರಾಮೀಣ ಪ್ರದೇಶದ ಜನರ ಬಳಿ ತೆರಳಿ ಅವರ ಸಮಸ್ಯೆಗಳ ಅಹವಾಲುಗಳನ್ನು ಸ್ವೀಕರಿಸುವುದರಿಂದ ಜನರಿಗೆ ತುಂಬಾ ಅನುಕೂಲವಾಗಿದೆ. ಜಿಲ್ಲಾಧಿಕಾರಿಗಳು ನೇರವಾಗಿ ಜನರನ್ನು ಭೇಟಿ ಮಾಡುವುದರಿಂದ ಅವರ ಸಮಸ್ಯೆಗಳ ಬಗ್ಗೆ ಮುಕ್ತ ವಾಗಿ ಚರ್ಚಿಸಿ, ಉಪಯುಕ್ತ ಮಾಹಿತಿ ನೀಡುವುದರಿಂದ ಜನರ ಸಮಸ್ಯೆಗಳನ್ನು ಬೇಗನೇ ಸರಿಪಡಿಸಬಹುದು ಎಂದರು.

ಪರಿಶಿಷ್ಟ ವರ್ಗದ ಜನರು ಅಧಿಕವಾಗಿರುವ ಚೇರ್ಕಾಡಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಅಗತ್ಯ ದಾಖಲೆ ಪತ್ರಗಳನ್ನು ಪಡೆಯಲು ತೊಂದರೆಗಳಿದ್ದು, ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಬೇಕು. ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಇರುವ ಗಡಿರೇಖೆಯ ನಿಯಮಗಳು ಅವೈಜ್ಞಾನಿಕವಾಗಿದ್ದು, ಈ ಸಮಸ್ಯೆಗೆ  ಶಾಶ್ವತ ಪರಿಹಾರ ಒದಗಿಸಬೇಕು. ಈ ಬಗ್ಗೆ  ಇರುವ ನಿಯಮಗಳ ಕುರಿತು  ಅಧಿಕಾರಿಗಳು ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಮೂಲಕ ನಿರ್ದೇಶನಗಳನ್ನು ಪಡೆದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಅನುಷ್ಠಾನಗೊಳಿಸಬೇಕು ಎಂದರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಸಾರ್ವಜನಿಕರ ಸಮಸ್ಯೆ ಗಳಿಗೆ ತುರ್ತಾಗಿ ಸ್ಪಂದಿಸಿದರೆ ಸಾರ್ವಜನಿಕರಿಗೆ ಅಧಿಕಾರಿಗಳ ಮೇಲೆ ವಿಶ್ವಾಸ ಹಾಗೂ ಒಳ್ಳೆಯ ಭಾವನೆ ಮೂಡುತ್ತದೆ. ಜನತೆಗೆ ಉತ್ತಮ ಸೇವೆ ಒದಗಿಸುವ ಬಗ್ಗೆ ಅಧಿಕಾರಿಗಳು ಸಂಕಲ್ಪ ಮಾಡಬೇಕು. ಚೇರ್ಕಾಡಿ ಭಾಗದಲ್ಲಿ ಹಲವು ವರ್ಷಗಳಿಂದ ಬಾಕಿ ಇರುವ ಹಕ್ಕುಪತ್ರಗಳಲ್ಲಿನ ಬದಲಾವಣೆ, ೧೧ಇ ನಕ್ಷೆ ತಿದ್ದುಪಡಿ ಹಾಗೂ ಪೌತಿ ಖಾತೆಗಳನ್ನು ಸರಿಪಡಿಸಲು, ಜನನ ಮರಣ ಪ್ರಮಾಣ ಪತ್ರ ವಿತರಿಸಲು ವಿಶೇಷ ಅಭಿಯಾನ ನಡೆಸಿ, ಸಮಸ್ಯೆಗಳನ್ನು ಬಗೆಹರಿಸುವಂತೆ ಇಂದಿನ ಕಾರ್ಯಕ್ರಮದಲ್ಲಿಯೇ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಚೇರ್ಕಾಡಿ ಗ್ರಾಪಂ ಅಧ್ಯಕ್ಷೆ ರೇಖಾ ಭಟ್, ಉಪಾಧ್ಯಕ್ಷ ಕಿಟ್ಟಪ್ಪ ಅಮೀನ್, ಕುಂದಾಪುರ ಡಿ.ಎಫ್.ಓ ಆಶೀಶ್ ರೆಡ್ಡಿ, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ, ಭೂ ದಾಖಲೆ ಇಲಾಖೆಯ ಉಪನಿರ್ದೇಶಕ ರವೀಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗೋವಿಂದ ಮಡಿವಾಳ, ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ.ಶಂಕರ್ ಶೆಟ್ಟಿ, ಬ್ರಹ್ಮಾವರ ತಾಪಂ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಇಬ್ರಾಹಿಂಪೂರ್, ಆಹಾರ ಇಲಾಖೆ ಉಪ ನಿರ್ದೇಶಕ ಮೊಹಮದ್ ಇಸಾಕ್, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಟಿ ನಾಯಕ್ ಉಪಸ್ಥಿತರಿದ್ದರು. ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿ ಸ್ವಾಗತಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News