ಎಲ್ಲರಿಗೂ ಸಲ್ಲುವ ಸ್ನೇಹಜೀವಿ ರಘುಪತಿ

Update: 2022-06-19 05:13 GMT

‘ನಮ್ಮ ಅರಸು’ ಪುಸ್ತಕ ಸಿದ್ಧವಾಗಿ, ಗೌರವ ಪ್ರತಿ ಕೊಡಲು ಹೋದಾಗ, ರಘುಪತಿಯವರ ಆರೋಗ್ಯ ಇನ್ನಷ್ಟು ಕೆಟ್ಟಿತ್ತು. ಆದರೂ ಅರಸು ಎಂದಾಕ್ಷಣ ಎದ್ದುಬಂದು, ಪುಸ್ತಕ ನೋಡಿ, ‘ಅರಸುಗೆ ನಿಜವಾದ ಗೌರವ’ ಎಂದು ಖುಷಿಗೊಂಡಿದ್ದರು. ಅದಾದ ಒಂದು ವಾರಕ್ಕೆ ಫೋನಾಯಿಸಿದ ರಘುಪತಿಯವರು, ‘‘ನಿಮ್ಮೆಂದಿಗೆ ಮಾತನಾಡುವುದಿದೆ, ಬನ್ನಿ’’ ಎಂದು ಕರೆದಿದ್ದರು. ಮನೆಗೆ ಹೋದಾಗ, ‘‘ನನ್ನ ಬದುಕು ಚದುರಿದ ಚಿತ್ರಗಳಂತೆ ಹರಿದು ಹಂಚಿಹೋಗಿದೆ. ಈಗ ಅದು ಯಾರಿಗೂ ಬೇಕಾಗಿಲ್ಲ. ಅದೇನೋ, ಈ ಪುಸ್ತಕ ನೋಡಿದ ಮೇಲೆ, ನನಗೂ ಆಸೆಯಾಗಿದೆ, ನನ್ನದೂ ಒಂದು ಮಾಡಬಹುದಾ..’’. ಎಂದರು. ನನಗೆ ಅವರ ಸ್ಥಿತಿ ನೋಡಿ ಪಿಚ್ಚೆನ್ನಿಸಿತು.

70 ಮತ್ತು 80ರ ದಶಕದ ಕರ್ನಾಟಕದ ರಾಜಕೀಯ ರಂಗದಲ್ಲಿ ವರ್ಣರಂಜಿತ ವ್ಯಕ್ತಿ ಎಂದೇ ಹೆಸರಾಗಿದ್ದ ಎಂ.ರಘುಪತಿ ಇಂದು, ತಮ್ಮ 89ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ವಿದ್ಯಾರ್ಥಿ ನಾಯಕ, ಉತ್ತಮ ಸಂಘಟಕ, ಎಲ್ಲ ಕ್ಷೇತ್ರಗಳ ಹಿರಿಯರೊಂದಿಗೂ ಒಡನಾಟ, ಚಿತ್ರರಂಗದೊಂದಿಗೂ ಸ್ನೇಹ, ರಾಜ್ಯ-ಭಾಷೆಗಳ ಸಮನ್ವಯಕಾರ, ನಗುಮೊಗದ ಸ್ನೇಹಜೀವಿ- ಅದು ರಘುಪತಿ. ಕಪ್ಪಗಿದ್ದು ಎತ್ತರದ ನಿಲುವುಳ್ಳ ಪೈಲ್ವಾನನಂತಿದ್ದರು. ಮಲ್ಲೇಶ್ವರಂನಲ್ಲಿ ಮನೆ. ಮನೆಭಾಷೆ ತೆಲುಗು. ಬೀದಿ ಭಾಷೆ ಕನ್ನಡ. ಸಂಪರ್ಕಕ್ಕಾಗಿ ಇಂಗ್ಲಿಷ್, ಹಿಂದಿ ಮತ್ತು ತಮಿಳು ಭಾಷೆಗಳನ್ನೂ ಬಲ್ಲವರಾಗಿದ್ದರು. 1933ರಲ್ಲಿ, ಬೆಂಗಳೂರು ನಗರದಲ್ಲಿ ಹುಟ್ಟಿ ಬೆಳೆದ ಎಂ.ರಘುಪತಿ ವಿದ್ಯಾರ್ಥಿ ಸಂಘಟನೆ, ಪ್ರತಿಭಟನೆ, ಹೋರಾಟಗಳ ಮೂಲಕ ನಾಯಕನಾಗಿ ರೂಪುಗೊಂಡವರು. 60 ಮತ್ತು 70ರ ದಶಕದಲ್ಲಿ ಬೆಂಗಳೂರಿನ ಶಾಲಾ ಕಾಲೇಜುಗಳ ವಿದ್ಯಾರ್ಥಿ ಸಂಘ, ಚುನಾವಣೆ, ಪದಾಧಿಕಾರಿಗಳ ಆಯ್ಕೆಗೆ ರಘುಪತಿಯವರದೇ ಮುಂದಾಳತ್ವ.

ಆ ಕಾಲಕ್ಕೆ ವಿದ್ಯಾರ್ಥಿ ಸಂಘಟನೆ ನ್ಯಾಯದ ಪರವಾಗಿತ್ತು, ಪ್ರಬಲವಾಗಿತ್ತು; ಸರಕಾರವನ್ನು, ಅಧಿಕಾರಸ್ಥರನ್ನು ಅಂಕೆಯಲ್ಲಿಟ್ಟಿತ್ತು. ನಿಜಲಿಂಗಪ್ಪನವರ ಸಚಿವ ಸಂಪುಟದಲ್ಲಿ ಡಿ.ದೇವರಾಜ ಅರಸು ಸಾರಿಗೆ ಸಚಿವರಾಗಿದ್ದರು. ಆಗ ಬಸ್ ಪ್ರಯಾಣ ದರ ಏರಿಕೆಯಾಗಿತ್ತು. ಅದನ್ನು ಖಂಡಿಸಿ, ಸರಕಾರದ ವಿರುದ್ಧ ವಿದ್ಯಾರ್ಥಿಗಳನ್ನು ಸಂಘಟಿಸಿ, ಹೋರಾಟ ಮಾಡಿದ್ದ ವಿದ್ಯಾರ್ಥಿ ನಾಯಕ ರಘುಪತಿಯವರನ್ನು ಸಾರಿಗೆ ಸಚಿವರಾದ ದೇವರಾಜ ಅರಸು ಮಾತುಕತೆಗೆ ಕರೆದು, ಸಮಸ್ಯೆ ಬಗೆಹರಿಸಿದ್ದರು. ವಿದ್ಯಾರ್ಥಿ ದೆಸೆಯಲ್ಲಿಯೇ ರಘುಪತಿ, ರಾಮಮನೋಹರ ಲೋಹಿಯಾ ಅವರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ‘ಮ್ಯಾನ್ ಕೈಂಡ್’ ಪತ್ರಿಕೆಯ ಸಂಪಾದಕೀಯ ಬಳಗದಲ್ಲೊಬ್ಬರಾಗಿದ್ದರು. ಆ ನೆಪದಲ್ಲಿ ವಿದ್ಯಾರ್ಥಿ ಸಂಘಟನೆಯ ಸಮಾರಂಭಕ್ಕೆ ಲೋಹಿಯಾರನ್ನು ಬೆಂಗಳೂರಿಗೆ ಕರೆಸಿದ ಕೀರ್ತಿಯೂ ರಘುಪತಿಯವರದಾಗಿತ್ತು.

ಆನಂತರ, ಎಕ್ಸ್‌ಪೋ-70. ಕರ್ನಾಟಕದ ಆಯ್ದ ಯುವಕರನ್ನು ಸರಕಾರದ ವತಿಯಿಂದ ಜಪಾನ್‌ನ ಎಕ್ಸ್‌ಪೋ-70 ಕಾರ್ಯಕ್ರಮಕ್ಕೆ ಕಳುಹಿಸುವಾಗ, ಅಂದಿನ ಅಧಿಕಾರಸ್ಥ ರಾಜಕಾರಣಿಗಳ ಮತ್ತು ಅಧಿಕಾರಿಗಳ ಮಕ್ಕಳನ್ನು ಆಯ್ಕೆ ಮಾಡಲಾಗಿತ್ತು. ಆಯ್ಕೆಯಲ್ಲಿ ಸ್ವಜನಪಕ್ಷಪಾತವಾಗಿದೆ, ಅಧಿಕಾರ ದುರುಪಯೋಗವಾಗಿದೆ ಎಂದು ವಿದ್ಯಾರ್ಥಿ ಸಂಘಟನೆ ರಘುಪತಿಯವರ ನೇತೃತ್ವದಲ್ಲಿ ಹೋರಾಟ ಕೈಗೊಂಡಿತ್ತು. ರಘುಪತಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತು ಹೋರಾಟ ವಿಕೋಪಕ್ಕೆ ತಿರುಗಿ, ಪೊಲೀಸರಿಂದ ಲಾಠಿಚಾರ್ಜ್ ಕೂಡ ನಡೆದಿತ್ತು. ಆ ಹೋರಾಟದ ನಂತರ ಉಭಯ ಸದನಗಳಲ್ಲಿ ಚರ್ಚೆಯಾಗಿ ದೊಡ್ಡ ಸುದ್ದಿಯಾಗಿತ್ತು. ಅದು ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.

1969ರಲ್ಲಿ ಕಾಂಗ್ರೆಸ್‌ನ ಹಿರಿಯರು-ನಿಜಲಿಂಗಪ್ಪ, ಕಾಮರಾಜ್, ಎಸ್.ಆರ್.ಪಾಟೀಲ್, ಅತ್ಯುಲ್ಯ ಘೋಷ್- ರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿನ ಇಂದಿರಾ ಗಾಂಧಿಯವರ ರಾಜಕೀಯ ನಡೆಯನ್ನು ವಿರೋಧಿಸಿ ಪಕ್ಷದಿಂದ ಅವರನ್ನು ಅಮಾನತು ಮಾಡಿದರು. ಕಾಂಗ್ರೆಸ್ ಇಬ್ಭಾಗವಾಯಿತು. ಇಂದಿರಾ ಗಾಂಧಿಯವರೊಂದಿಗೆ ಬಿ.ಡಿ.ಜತ್ತಿ, ಅರಸು ಗುರುತಿಸಿಕೊಂಡರು. ಇಂದಿರಾ ಗಾಂಧಿ ಅಮಾನತು ಮಾಡಿದ್ದನ್ನು ವಿರೋಧಿಸಿ ರಘುಪತಿ ಮುಂದಾಳತ್ವದಲ್ಲಿ ವಿದ್ಯಾರ್ಥಿ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸಿದವು. ಇದು ವಿದ್ಯಾರ್ಥಿ ನಾಯಕನಾಗಿದ್ದ ರಘುಪತಿ ರಾಜಕೀಯಕ್ಕೆ ಧುಮುಕಲು ಸಂಪರ್ಕ ಸೇತುವೆಯಾಯಿತು. ರಾಜಕೀಯ ನಾಯಕನಾಗಿ ರೂಪುಗೊಳ್ಳಲು ಅನುಕೂಲಕರ ವಾತಾವರಣ ಸೃಷ್ಟಿಸಿತು. ಆ ದಿಸೆಯಲ್ಲಿ ಹಿರಿಯ ರಾಜಕೀಯ ನಾಯಕರ ಸಂಪರ್ಕ ಸಾಧ್ಯವಾಯಿತು. ಮೊದಲಿಗೆ ಆಲ್ ಇಂಡಿಯಾ ಸ್ಟೂಡೆಂಟ್ಸ್ ಕಾಂಗ್ರೆಸ್ ಅಧ್ಯಕ್ಷರಾಗಿ ರಘುಪತಿ ನೇಮಕಗೊಂಡರು. ರಾಜ್ಯದಲ್ಲಿ ದೇವರಾಜ ಅರಸು, ಗುಂಡೂರಾವ್‌ರ ಆಪ್ತ ಬಳಗದಲ್ಲಿ ಗುರುತಿಸಿಕೊಂಡರು. 1971ರ ನಗರಪಾಲಿಕೆ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಮೇಲುಗೈ ಸಾಧಿಸಿತು.

1972ರ ವಿಧಾನಸಭಾ ಚುನಾವಣೆಗೂ ಮುಂಚೆ ಅರಸು ಅವರೊಂದಿಗೆ ಕರ್ನಾಟಕವನ್ನು ಸುತ್ತಿ, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅದರ ಫಲವಾಗಿ ದೇವರಾಜ ಅರಸು ಮುಖ್ಯಮಂತ್ರಿಯಾದರೆ, ರಘುಪತಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಭಡ್ತಿ ಪಡೆದರು. ರಘುಪತಿಯವರು ರಾಜಕೀಯ ವಲಯದಲ್ಲಿ ಸಮನ್ವಯಕಾರ, ಸಂಧಾನಕಾರನ ಪಾತ್ರ ನಿರ್ವಹಿಸುವಲ್ಲಿ ನಿಪುಣರಾಗಿದ್ದರು. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ, ಕೆ.ಕೆ.ಮೂರ್ತಿ ಮಾಡಿದ ಅವಘಡದಿಂದಾಗಿ, ಮೈಸೂರು ದಸರಾದ ನೃತ್ಯ ಕಾರ್ಯಕ್ರಮದಲ್ಲಿ ಜಯಲಲಿತಾಗೆ ಅವಮಾನವಾಗಿತ್ತು. ಅವರು ಕಾರ್ಯಕ್ರಮ ನೀಡದೆ ನಿರ್ಗಮಿಸಿ ಅದು ತಮಿಳುನಾಡು-ಕರ್ನಾಟಕ ರಾಜ್ಯಗಳ ನಡುವಿನ ಸ್ನೇಹ ಸಂಬಂಧಕ್ಕೆ ಧಕ್ಕೆ ತಂದು ಬಿಗುವಿನ ವಾತಾವರಣ ಏರ್ಪಟ್ಟಿತ್ತು.ಆಗ ಕನ್ನಡ ಬಾರದ ಎಂಜಿಆರ್‌ಗೆ ಹಾಗೂ ತಮಿಳು ಬಾರದ ದೇವರಾಜ ಅರಸುಗೆ ಸಮನ್ವಯಕಾರನಾಗಿ ಸಮಸ್ಯೆಯನ್ನು ಬಗೆಹರಿಸಿದ್ದೇ ಈ ನಮ್ಮ ರಘುಪತಿ. ಇದು ಇಷ್ಟಕ್ಕೇ ಮುಗಿಯುವುದಿಲ್ಲ. ಅರಸು ಮತ್ತು ಗುಂಡೂರಾವ್, ಸಂಜಯ್ ಗಾಂಧಿ ಮತ್ತು ಅರಸು, ಇಂದಿರಾ ಗಾಂಧಿ ಮತ್ತು ಅರಸು, ದೇವೇಗೌಡ ಮತ್ತು ಜೆ.ಎಚ್.ಪಟೇಲ್, ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರಂತಹ ಘಟಾನುಘಟಿ ನಾಯಕರ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವಲ್ಲೂ ರಘುಪತಿ ಪಾತ್ರ ಪ್ರಧಾನವಾಗಿತ್ತು. ಹಾಗೆಯೇ ಅವರ ಸ್ನೇಹವಲಯ ಬಹು ವಿಸ್ತಾರವಾಗಿತ್ತು. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯಿಂದ ಹಿಡಿದು ಸಂಜಯ್ ಗಾಂಧಿ, ರಾಜೀವ್ ಗಾಂಧಿ, ವಿ.ಪಿ.ಸಿಂಗ್, ಚಂದ್ರಶೇಖರ್, ಜಾರ್ಜ್ ಫೆರ್ನಾಂಡಿಸ್‌ವರೆಗೆ ಎಲ್ಲರ ಪರಿಚಯವಿತ್ತು. ಲೋಹಿಯಾ, ಆಂಧ್ರದ ಮೇರುನಟ, ತೆಲುಗುದೇಶಂ ನಾಯಕ ಎನ್.ಟಿ. ರಾಮರಾವ್, ತಮಿಳುನಾಡಿನ ಎಂಜಿಆರ್ ಅವರೊಂದಿಗೆ ಆತ್ಮೀಯ ಒಡನಾಟವಿತ್ತು. ಅಷ್ಟೇ ಅಲ್ಲ, ರಘುಪತಿಯವರಿಗೆ ಸಿನೆಮಾ ಕ್ಷೇತ್ರದೊಂದಿಗಿನ ಸ್ನೇಹ ಸ್ವಲ್ಪಹೆಚ್ಚಾಗಿಯೇ ಇತ್ತು.

ಎರಡು ಬಾರಿ ಎಂಎಲ್‌ಸಿಯಾಗಿದ್ದ ಅವರು, ಜನತಾ ದಳ ಸೇರಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ರಾಮಕೃಷ್ಣ ಹೆಗಡೆಯವರ ಸಚಿವ ಸಂಪುಟದಲ್ಲಿ ಪ್ರವಾಸೋದ್ಯಮ, ಕಾರ್ಮಿಕ ಮತ್ತು ಶಿಕ್ಷಣ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಇದೇ ಸಂದರ್ಭದಲ್ಲಿ ಚಿತ್ರನಟಿ ಆರತಿಯವರನ್ನು ಎಂಎಲ್‌ಸಿ ಮಾಡಲು ರಾಮಕೃಷ್ಣ ಹೆಗಡೆಯವರ ಮೇಲೆ ಒತ್ತಡ ಹಾಕಿದ್ದರು. ಎಲ್ಲರ ವಿರೋಧದ ನಡುವೆಯೂ ಆರತಿಯವರನ್ನು ಮೇಲ್ಮನೆ ಸದಸ್ಯೆಯನ್ನಾಗಿಸುವಲ್ಲಿ ಸಫಲರಾಗಿದ್ದರು. ಆಗ ಆರತಿ ಮತ್ತು ರಘುಪತಿ ಒಟ್ಟೊಟ್ಟಿಗೆ ಓಡಾಡುವುದು ಹೆಚ್ಚಾಗಿತ್ತು. ಮದುವೆಯಾಗಿದ್ದಾರೆ ಎಂಬ ಪುಕಾರು ಹಬ್ಬಿತ್ತು. ಜೆ.ಪಿ.ನಗರದಲ್ಲೊಂದು ಬಂಗಲೆ ಖರೀದಿಸಿ ಕೊಟ್ಟಿದ್ದಾರೆ ಎಂಬುದು ಭಾರೀ ಸುದ್ದಿಯಾಗಿತ್ತು. ಆದರೆ ಅವರಿಬ್ಬರ ನಡುವೆ ಏನು ನಡೆಯಿತೋ, ಸ್ವಲ್ಪ ದಿನಗಳಲ್ಲಿಯೇ ಅವರು ಬೇರೆ ಬೇರೆಯಾಗಿದ್ದರು. ಆರತಿ ವಿದೇಶಕ್ಕೆ ಹಾರಿದರೆ, ರಘುಪತಿಯವರು ರಾಜಕೀಯ ವನವಾಸಕ್ಕೆ ಜಾರಿದ್ದರು. ಯಾರನ್ನೂ ಮದುವೆಯಾಗದೆ ಒಬ್ಬಂಟಿಯಾಗಿಯೇ ಉಳಿದರು. ದೀರ್ಘ ಕಾಲದ ವನವಾಸದ ನಂತರ ರಘುಪತಿಯವರು ಮತ್ತೆ ಸಾರ್ವಜನಿಕ ಬದುಕಿಗೆ ಬಂದದ್ದು ದೇವೇಗೌಡರ ಜೆಡಿಎಸ್ ಸೇರುವ ಮೂಲಕ. ಆದರೆ ಅಲ್ಲೂ ಯಾವುದೇ ಅಧಿಕಾರ ಸ್ಥಾನಗಳನ್ನು ಅಲಂಕರಿಸಲಾಗದೆ, ಚುನಾವಣೆಗಳನ್ನು ಗೆಲ್ಲಲಾಗದೆ, ಪ್ರಸ್ತುತ ರಾಜಕಾರಣದಿಂದ ಭ್ರಮನಿರಸನಗೊಂಡು ಮತ್ತೆ ಮನೆ ಸೇರಿದರು. ಅಷ್ಟೊತ್ತಿಗಾಗಲೇ ಆರೋಗ್ಯ ಕೈ ಕೊಡುತ್ತಿತ್ತು.

ವಿಶ್ರಾಂತಿಗಾಗಿ ಮನೆಗಷ್ಟೇ ಸೀಮಿತಗೊಂಡಿದ್ದರು. ಆ ಸಂದರ್ಭದಲ್ಲಿಯೇ ನಾನು ಅವರನ್ನು ದೇವರಾಜ ಅರಸು ಕುರಿತು ಮಾತನಾಡಿಸಲು ಭೇಟಿಯಾಗಿದ್ದೆ. ಇದು ನಾನು ಅರಸು ಕುರಿತು ಭೇಟಿ ಮಾಡಿದ ಎಪ್ಪತ್ತು ಜನರಲ್ಲಿಯೇ ಬಹು ಮಹತ್ವವಾದ ಮಾತುಕತೆಯಾಗಿತ್ತು. ಆಗ ಅವರ ಮಂಡಿ ನೋವು ಅತಿಯಾಗಿ ಕೂರಲು ಕಷ್ಟ ಕೊಡುತ್ತಿತ್ತು. ಕಿವಿ ಕೂಡ ಮಂದವಾಗಿತ್ತು. ಮರೆವು ಮುತ್ತಿಕೊಂಡಿತ್ತು. ಪಟ್ಟುಬಿಡದ ನಾನು ಮತ್ತೆ ಮತ್ತೆ ನೆನಪಿಸುವ, ಆ ಕಾಲಕ್ಕೆ ಕರೆದುಕೊಂಡು ಹೋಗುವ ಕಾಯಕದಲ್ಲಿ ನಿರತನಾಗಿದ್ದೆ. ಆ ಮಾತುಕತೆ ಸುಮಾರು ಒಂದೂವರೆ ತಿಂಗಳುಗಳ ಕಾಲ ನಡೆದಿತ್ತು. ಪ್ರತಿದಿನದ ಭೇಟಿಯಲ್ಲಿ ಅವರೊಂದಿಗೆ ಆತ್ಮೀಯತೆ ಬೆಳೆದಿತ್ತು. ಅರಸು ಅಂದಾಕ್ಷಣ ಹೊಸ ಹುರುಪಿನೊಂದಿಗೆ ಮಾತಿಗಿಳಿಯುತ್ತಿದ್ದರು. ಅಕ್ಕರೆ, ಆತ್ಮೀಯತೆ, ಮುನಿಸು, ಕಣ್ಣೀರು ಎಲ್ಲವೂ ಅವರ ಮಾತಿನ ಮಧ್ಯೆ ವ್ಯಕ್ತವಾಗುತ್ತಿತ್ತು. ಆ ಸುದೀರ್ಘ ಮಾತುಕತೆಯ ಫಲದಿಂದಾಗಿ ದೇವರಾಜ ಅರಸು ಅವರ ವ್ಯಕ್ತಿತ್ವ, ಎಪ್ಪತ್ತರ ದಶಕದ ಕರ್ನಾಟಕದ ರಾಜಕಾರಣ ಸಂಪೂರ್ಣವಾಗಿ ಸಿಕ್ಕಿತ್ತು. ಅದು ಕರ್ನಾಟಕದ ರಾಜಕಾರಣವನ್ನು ಅರಿಯುವವರಿಗೆ ಹಾಗೂ ರಾಜಕೀಯಕ್ಕೆ ಬರಲಿಚ್ಛಿಸುವ ಹೊಸ ತಲೆಮಾರಿನ ಯುವಕ-ಯುವತಿಯರಿಗೆ ಅಧ್ಯಯನಯೋಗ್ಯವೆಂದೇ ನನ್ನ ಅನಿಸಿಕೆ. ‘ನಮ್ಮ ಅರಸು’ ಪುಸ್ತಕ ಸಿದ್ಧವಾಗಿ, ಗೌರವ ಪ್ರತಿ ಕೊಡಲು ಹೋದಾಗ, ರಘುಪತಿಯವರ ಆರೋಗ್ಯ ಇನ್ನಷ್ಟು ಕೆಟ್ಟಿತ್ತು. ಆದರೂ ಅರಸು ಎಂದಾಕ್ಷಣ ಎದ್ದುಬಂದು, ಪುಸ್ತಕ ನೋಡಿ, ‘ಅರಸುಗೆ ನಿಜವಾದ ಗೌರವ’ ಎಂದು ಖುಷಿಗೊಂಡಿದ್ದರು.ಅದಾದ ಒಂದು ವಾರಕ್ಕೆ ಫೋನಾಯಿಸಿದ ರಘುಪತಿಯವರು, ‘‘ನಿಮ್ಮೆಂದಿಗೆ ಮಾತನಾಡುವುದಿದೆ, ಬನ್ನಿ’’ ಎಂದು ಕರೆದಿದ್ದರು. ಮನೆಗೆ ಹೋದಾಗ, ‘‘ನನ್ನ ಬದುಕು ಚದುರಿದ ಚಿತ್ರಗಳಂತೆ ಹರಿದು ಹಂಚಿಹೋಗಿದೆ. ಈಗ ಅದು ಯಾರಿಗೂ ಬೇಕಾಗಿಲ್ಲ. ಅದೇನೋ, ಈ ಪುಸ್ತಕ ನೋಡಿದ ಮೇಲೆ, ನನಗೂ ಆಸೆಯಾಗಿದೆ, ನನ್ನದೂ ಒಂದು ಮಾಡಬಹುದಾ..’’. ಎಂದರು. ನನಗೆ ಅವರ ಸ್ಥಿತಿ ನೋಡಿ ಪಿಚ್ಚೆನ್ನಿಸಿತು. ಎಂತಹ ವರ್ಣರಂಜಿತ ವ್ಯಕ್ತಿತ್ವ. ಅವರ ಹೋರಾಟ, ಸಂಘಟನೆ, ಸೇವೆ, ಸ್ನೇಹ, ರಾಜಕಾರಣ.. ಎಲ್ಲವೂ ಕಣ್ಮುಂದೆ ಬಂದುಹೋದವು.

ಈ ವ್ಯಕ್ತಿಯಿಂದ ನಾಡಿಗೇನು ಅನುಕೂಲವಾಗಿದೆ ಎಂಬ ಪ್ರಶ್ನೆ ಕೂಡ ಎದುರಾಯಿತು. ಎಲ್ಲರ ಬದುಕು ಕೂಡ ಮುಖ್ಯ, ಮುಖ್ಯವಲ್ಲ ಎಂಬ ಜಿಜ್ಞಾಸೆಯಲ್ಲಿಯೇ ದಿನದೂಡಿದೆ. ಅವರೂ ಫೋನ್ ಮಾಡುವುದನ್ನು ಬಿಟ್ಟರು. ಎಲ್ಲರಿಗೂ, ಎಲ್ಲಾ ಕಾಲಕ್ಕೂ ಸಲ್ಲುವ ಸ್ನೇಹಜೀವಿಯಾಗಿದ್ದ ರಘುಪತಿಯವರಿಗೆ ಒಂದು ಕೊರಗಿತ್ತು. ಕರ್ನಾಟಕ ಸರಕಾರ ನೀಡುವ ದೇವರಾಜ ಅರಸು ಪ್ರಶಸ್ತಿ ತಮಗೆ ಬರಬೇಕೆಂಬ ಆಸೆ ಇತ್ತು. ಅದು ರಘುಪತಿಯವರ ಆಪ್ತರು, ಸಮಕಾಲೀನರು, ಸ್ನೇಹಿತರು, ಗೊತ್ತಿದ್ದವರೆಲ್ಲ- ದೇವೇಗೌಡ, ಎಸ್.ಎಂ.ಕೃಷ್ಣ, ಧರಂಸಿಂಗ್, ಮಲ್ಲಿಕಾರ್ಜುನ ಖರ್ಗೆ, ರಮೇಶ್ ಕುಮಾರ್, ಎಚ್.ವಿಶ್ವನಾಥ್, ಡಿ.ಬಿ.ಜಯಚಂದ್ರ, ಸಿದ್ದರಾಮಯ್ಯರೆಲ್ಲ ಸರಕಾರದ ಭಾಗವಾಗಿದ್ದರೂ, ನಿರ್ಣಾಯಕ ಸ್ಥಾನದಲ್ಲಿದ್ದರೂ, ಯಾರೊಬ್ಬರೂ ಇವರ ಹೆಸರನ್ನು ಅರಸು ಪ್ರಶಸ್ತಿಗೆ ಸೂಚಿಸಲಿಲ್ಲ. ಸೂಚಿಸಿದರೋ ಇಲ್ಲವೋ ಗೊತ್ತಿಲ್ಲ. ಪ್ರಶಸ್ತಿಯಂತೂ ಬರಲಿಲ್ಲ. ‘‘ಎಲ್ಲರೂ ನನ್ನ ಸ್ನೇಹಿತರೇ, ಯಾರನ್ನು ಕೇಳುವುದು’’ ಎಂದು ನೊಂದುಕೊಂಡಿದ್ದರು. ರಾಜಕಾರಣದಿಂದ ದೂರ ಉಳಿದಿದ್ದರೂ, ಮೈ ಮನಸ್ಸೆಲ್ಲ ರಾಜಕಾರಣವೇ ತುಂಬಿತ್ತು. ಆಗಾಗ ಹಳೆಯ ಗೆಳೆಯರನ್ನು ಭೇಟಿ ಮಾಡಿ, ಹಳೆಯದೆಲ್ಲವನ್ನು ನೆನಪಿಸಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಿದ್ದರು. ಅವರೊಂದಿಗೆ ಫೋಟೊ ತೆಗೆಸಿಕೊಂಡಿದ್ದನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡುತ್ತಿದ್ದರು. ಒಂದು ಕಾಲದಲ್ಲಿ ಎಲ್ಲರಿಗೂ ಬೇಕಾಗಿದ್ದ ವರ್ಣರಂಜಿತ ವ್ಯಕ್ತಿ, ಕಾಲ ಸರಿದಂತೆ ಬೇಡದ ವ್ಯಕ್ತಿಯಾಗುವ, ಮರೆಗೆ ಸರಿಯುವ, ಮರೆತೇಹೋಗುವ ಪರಿ ಅಚ್ಚರಿ ಹುಟ್ಟಿಸುತ್ತದೆ. ಅದು ರಘುಪತಿಯವರ ಬದುಕಿನಲ್ಲಿ ಇನ್ನಷ್ಟು ನಿಚ್ಚಳವಾಗಿ ಕಾಣುತ್ತದೆ.

Writer - ಬಸವರಾಜು ಮೇಗಲಕೇರಿ

contributor

Editor - ಬಸವರಾಜು ಮೇಗಲಕೇರಿ

contributor

Similar News