‘ಪಶ್ಚಿಮಘಟ್ಟಗಳ ಹಸಿರು ಹೊದಿಕೆ’ ಪರಿಸರ ಜಾಗೃತಿ ಕಾರ್ಯಕ್ರಮ

Update: 2022-06-19 13:15 GMT

ಹೆಬ್ರಿ, ಜೂ.೧೯: ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ, ಉಡುಪಿ ವಕೀಲರ ಸಂಘ, ನ್ಯಾಶನಲ್ ಎನ್‌ರ್ವರ್ ಮೆಂಟ್ ಕೇರ್ ಫೆಡರೇಶನ್(ಎನ್‌ಇಸಿಎಫ್), ಅರಣ್ಯ ಇಲಾಖೆ ಸಹಯೋಗ ದೊಂದಿಗೆ ಗಿಡ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸುವ ‘ಪಶ್ಚಿಮ ಘಟ್ಟಗಳ ಹಸಿರು ಹೊದಿಕೆ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಪೆರ್ಡೂರಿನ ಬಾಳೆಬೈಲುವಿನಲ್ಲಿ ರವಿವಾರ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ನ್ಯಾಯಾಧೀಶರು, ವಕೀಲರು, ವಿದ್ಯಾರ್ಥಿಗಳ ಸಹಿತ ನೂರಾರು ಪರಿಸರ ಪ್ರೇಮಿಗಳು ಪಾಲ್ಗೊಂಡಿದ್ದರು. ಪರಿಸರಾಸಕ್ತರಿಗೆ ಮತ್ತು ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುವುದ ರೊಂದಿಗೆ ೫೦೦ ಹಣ್ಣಿನ ಗಿಡಗಳನ್ನು ನೆಡಲಾಯಿತು. ಮುಂದಿನ ತಲೆಮಾರಿಗೆ ಪರಿಸರವನ್ನು ಉಳಿಸಿ ಬೆಳೆಸುವ ಕುರಿತು ಪಣ ತೊಡಲಾಯಿತು.

ಎನ್‌ಇಸಿಎಫ್ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಮಾತನಾಡಿ, ನಮ್ಮ ಸಂಸ್ಥೆ ಅರಣ್ಯ ಇಲಾಖೆ ಜೊತೆ ಸೇರಿಕೊಂಡು ೨೦೦೨ರಿಂದ ಜೂನ್ ಮತ್ತು ಜುಲೈ ತಿಂಗಳ ಪ್ರತಿ ರವಿವಾರ ಹಣ್ಣು ಬಿಡುವ ಗಿಡಗಳನ್ನು ಪಶ್ಚಿಮ ಘಟ್ಟಗಳ ಅರಣ್ಯ ದಲ್ಲಿ ನೆಡವು ಕಾರ್ಯಕ್ರಮ ಮಾಡಿಕೊಂಡು ಬಂದಿದ್ದೇವೆ. ಈ ವರ್ಷ ಮುಂದಿನ ೧೦ ರವಿವಾರ ನಿರಂತರವಾಗಿ ಉಡುಪಿ ಮತ್ತು ಮಂಗಳೂರು ಜಿಲ್ಲೆಯ ೧೦ ಅರಣ್ಯ ವಲಯಗಳಲ್ಲಿ ನಡೆಯಲಿವೆ. ಇದರಲ್ಲಿ ಸ್ಥಳೀಯ ನ್ಯಾಯಾಧೀಶರು, ವಕೀಲರು, ಪೊಲೀಸರನ್ನು ಕೂಡ ಸಹಭಾಗಿಗಳನ್ನಾಗಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಲಾ ಎಸ್. ಮಾತನಾಡಿ, ಪರಿಸರ ವನ್ನು ಉಳಿಸುವ ಉದ್ದೇಶದೊಂದಿಗೆ ಪರಿಸರ ಉಳಿಸುವ ಬಗ್ಗೆ ಪ್ರಜ್ಞವಂತರಾದ ನಾವೆಲ್ಲ ಜಾಗೃತಿ ಮೂಡಿಸಬೇಕಾಗಿದೆ. ಪರಿಸರವನ್ನು ಆರಾಧಿಸುವ ಸಂಸ್ಕೃತಿ ಯನ್ನು ಮರೆತು ಪರಿಸರವನ್ನು ನಾಶ ಮಾಡಲಾಗುತ್ತಿದೆ. ಪರಿಸರ ಬೆಳೆಸುವುದ ರಿಂದ ನಮಗೆ ಉತ್ತಮ ಗಾಳಿ, ಮಳೆ ದೊರೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್, ಬಾಲನ್ಯಾಯ ಮಂಡಳಿಯ ಸದಸ್ಯೆ ಅಮೃತಾ ಕಲಾ, ವಕೀಲರಾದ ರವೀಂದ್ರ, ಆದಿತ್ಯ, ಪ್ರಸಾದ್, ಉಡುಪಿ ವೈಕುಂಠ ಬಾಳಿಗ ಕಾನೂನು ಕಾಲೇಜು ಮತ್ತು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News