×
Ad

ಉದ್ಯಮ ನೋಂದಣಿ ಸಪ್ತಾಹ

Update: 2022-06-19 20:07 IST

ಉಡುಪಿ : ಉತ್ಪಾದನೆ ಮತ್ತು ಸೇವಾ ಚಟುವಟಿಕೆಗಳಲ್ಲಿ ತೊಡಗಿರುವ ಉದ್ಯಮಗಳು ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಮಂತ್ರಾಲಯದ ಉದ್ಯಮ ನೋಂದಣಿ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯವಾಗಿದ್ದು, ಆನ್‌ಲೈನ್ ಮೂಲಕ ಇ-ಪ್ರಮಾಣ ಪತ್ರವನ್ನು -www.udyamregistration.gov.in-ನಲ್ಲಿ ಉಚಿತವಾಗಿ ಪಡೆದುಕೊಳ್ಳ ಬಹುದು.

ಈಗಾಗಲೇ ಕೈಗಾರಿಕೆ ಇಲಾಖೆಯಿಂದ ಖಾಯಂ ನೊಂದಣಿ ಪ್ರಮಾಣ ಪತ್ರ ಅಥವಾ ಐಇಎಂ ಪಾರ್ಟ್-೨ ಅಥವಾ ಉದ್ಯೋಗ್ ಆಧಾರ್ ಮೆಮೋರೆಂಡಮ್ (ಯುಎಎಂ) ಪ್ರಮಾಣ ಪತ್ರ ಪಡೆದಿರುವ ಘಟಕಗಳು ಸಹ ಈ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯವಾಗಿದೆ.

ಜಿಲ್ಲೆಯ ಎಲ್ಲಾ ಕೈಗಾರಿಕೆಗಳಿಗೆ ಉದ್ಯಮ ನೋಂದಣಿ ಪ್ರಕ್ರಿಯೆ ಬಗ್ಗೆ ಅರಿವು ಮೂಡಿಸಲು ಮತ್ತು ಪ್ರಮಾಣ ಪತ್ರ ಪಡೆಯಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಜೂನ್ ೨೭ರವರೆಗೆ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾ ಗಿದ್ದು, ಜೂನ್ ೨೨ರಂದು ಕುಂದಾಪುರ ತಾಲೂಕು ಪಂಚಾಯತ್, ಜೂ. ೨೪ರಂದು ಕಾರ್ಕಳ ತಾಲೂಕು ಪಂಚಾಯತ್ ಹಾಗೂ ಉಳಿದ ದಿನಗಳಲ್ಲಿ ಉಡುಪಿಯ ಜಿಲ್ಲಾ ಕೈಗಾರಿಕಾ ಕೇಂದ್ರ ಕಛೇರಿಯಲ್ಲಿ ಉದ್ಯಮ ನೋಂದಣಿಯನ್ನು ಹಮ್ಮಿಕೊಳ್ಳಲಾಗಿದೆ. 

ಉದ್ಯಮ ನೋಂದಣಿ ಪ್ರಮಾಣ ಪತ್ರವನ್ನು ಪಡೆಯಲು ಇಚ್ಛಿಸುವವರು ಆಧಾರ್ ಕಾರ್ಡ್, ಪಾನ್‌ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, ಈ ಹಿಂದೆ ಕೈಗಾರಿಕೆ ಇಲಾಖೆಯಿಂದ ಖಾಯಂ ನೊಂದಣಿ ಪ್ರಮಾಣ ಪತ್ರ ಅಥವಾ ಐಇಎಂ ಪಾರ್ಟ್-೨ ಅಥವಾ ಉದ್ಯೋಗ್ ಆಧಾರ್ ಮೆಮೋರೆಂಡಮ್ (ಯುಎಎಂ) ಪ್ರಮಾಣ ಪತ್ರ ಪಡೆದಿದ್ದಲ್ಲಿ, ಸದ್ರಿ ಪ್ರಮಾಣ ಪತ್ರದ ಪ್ರತಿಯನ್ನು ತಪ್ಪದೇ ಹಾಜರುಪಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಛೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಮಣಿಪಾಲ ದೂರವಾಣಿ ಸಂಖ್ಯೆ: ೦೮೨೦-೨೫೭೫೬೫೦/೨೫೭೫೬೫೫ ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News