×
Ad

ಸ್ಥಳೀಯರ ಬದುಕಿಗೆ ಮಾರಕವಾಗುತ್ತಿರುವ ಕಂಪೆನಿಗಳನ್ನು ದ.ಕ. ಜಿಲ್ಲೆಯಿಂದ ಗಡಿಪಾರು ಮಾಡಬೇಕು: ಮುನೀರ್ ಕಾಟಿಪಳ್ಳ

Update: 2022-06-20 15:10 IST

ಮಂಗಳೂರು, ಜೂ. 20; "ಉದ್ಯೋಗ ಸೃಷ್ಟಿಯ ಭರವಸೆ ನೀಡಿ ತುಳುನಾಡಿನ ಅಪಾರ ಜಮೀನು ಕಬಳಿಸಿರುವ ಬೃಹತ್ ಕೈಗಾರಿಕೆಗಳು ಪರಿಸರವನ್ನು ಎಗ್ಗಿಲ್ಲದೆ ನಾಶಪಡಿಸಿವೆ, ಇಂತಹ ಕೈಗಾರಿಕೆಗಳು, ಕಂಪೆನಿಗಳನ್ನು ದ.ಕ. ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು.

ಅವರು ಕೂಳೂರು ಜೋಕಟ್ಟೆ ಎಸ್ಇಝಡ್ ಸಂಪರ್ಕದ ಎಮ್ಆರ್ ಪಿಎಲ್ ಕಂಪೆನಿಯ ಸುಪರ್ದಿಯಲ್ಲಿರುವ ಕಾರಿಡಾರ್ ರಸ್ತೆಯ ಹೊಂಡ ಗುಂಡಿ ಮುಚ್ಚಲು, ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ರುಚಿಗೋಲ್ಡ್ ಕಂಪೆನಿ ಮುಂಭಾಗ "ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ" ಹಮ್ಮಿಕೊಂಡಿದ್ದ ರಸ್ತೆ ತಡೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು‌.

ಸ್ಥಳೀಯರ ವಿರೋಧಿ ನೀತಿಗಳಿಗೆ ಎಮ್ಆರ್ ಪಿಎಲ್ ನಾಯಕತ್ವ ನೀಡುತ್ತಿದೆ. ಕಂಪೆನಿ ತ‌ನ್ನ ತಪ್ಪುಗಳನ್ನು ಸರಿಪಡಿಸದಿದ್ದಲ್ಲಿ ಎಮ್ಆರ್ ಪಿಎಲ್ ಅನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕು. ಕೂಳೂರು, ಎಸ್ಇಝಡ್ ರಸ್ತೆ ಈಗ ಎಮ್ಆರ್ ಪಿಎಲ್ ಅಧೀನದಲ್ಲಿ ಇದೆ. ಎಸ್ಇಝಡ್, ಅನಘ, ರುಚಿಗೋಲ್ಡ್, ಅದಾನಿ ವಿಲ್ಮಾ ಸಹಿತ ಹಲವು ಕೈಗಾರಿಕೆಗಳು ಈ ರಸ್ತೆಯನ್ನು ಬಳಸುತ್ತಿವೆ. ಆದರೆ ರಸ್ತೆ ಪೂರ್ತಿ ಹೊಂಡಮಯ ಆಗಿದ್ದರೂ ಕಂಪೆನಿಗಳಾಗಲಿ, ಜಿಲ್ಲಾಡಳಿತವಾಗಲಿ ಯಾವುದೆ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ‌. ಇಲ್ಲಿಯ ಚರಂಡಿಗಳನ್ನು ಕಂಪೆನಿಗಳು ಅಕ್ರಮಿಸಿ ಮಣ್ಣು ತುಂಬಿಸಿದ್ದರೂ ಕೇಳುವವರಿಲ್ಲ. ಅದರಿಂದ ಕಂಪೆನಿಗಳ ಮಲಿನ ನೀರು ಆಳೆತ್ತರಕ್ಕೆ ನಿಂತು ರೋಗರೋಜಿನಗಳು ವ್ಯಾಪಕವಾಗಿ ಹರಡುತ್ತಿದೆ. ಸಣ್ಣ ವಾಹನಗಳಲ್ಲಿ ಪ್ರಯಾಣಿಸುವ ಜನತೆ ರಸ್ತೆ ಹೊಂಡಕ್ಕೆ ಬಿದ್ದು ಕೈಕಾಲು ಮುರಿಸಿಕೊಳ್ಳುತ್ತಿದ್ದಾರೆ. ಹೊಂಡ ಗುಂಡಿ ಮುಚ್ಚಲು ಜಿಲ್ಲಾಡಳಿತ ತಕ್ಷಣ ಸರಿಯಾದ ಕ್ರಮ ಕೈಗೊಳ್ಳದಿದ್ದಲ್ಲಿ ಸ್ಥಳೀಯ ಕಂಪೆನಿಗಳಿಗೆ ಘೆರಾವ್ ಮಾಡುವುದಾಗಿ ಎಚ್ಚರಿಸಿದರು. 

ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಬಿ ಎಸ್ ಬಶೀರ್, ತೋಕೂರು  ಗ್ರಾಮ ಪಂಚಾಯತ್ ಅಧ್ಯಕ್ಷ ಕೆವಿನ್, ಹೋರಾಟ ಸಮಿತಿಯ ಸಂಚಾಲಕ, ಗ್ರಾಮ ಪಂಚಾಯತ್ ಸದಸ್ಯರಾದ ಅಬೂಬಕ್ಕರ್ ಬಾವ, ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರೆಸಿಲ್ಲಾ ಮೊಂತೆರೊ, ಮಾಜಿ ಉಪಾಧ್ಯಕ್ಷ ಸಂಸು ಇದ್ದಿನಬ್ಬ, ಹೋರಾಟ ಸಮಿತಿಯ ಪ್ರಮುಖರಾದ ಹನೀಫ್ ಜೋಕಟ್ಟೆ, ಲಾನ್ಸಿ ಜೋಕಟ್ಟೆ, ಫಾರೂಕ್ ಕೆ ಬಿ ಎಸ್, ಇಕ್ಬಾಲ್ ಜೋಕಟ್ಟೆ, ಹಮೀದ್, ಶಂಸುದ್ದಿನ್ ಅರಿಕೆರೆ, ಇಸ್ಮಾಯಿಲ್ ಅಜಾದ್ ಮತ್ತಿತರರು ನಾಯಕತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News