ಬಳ್ಕುಂಜೆ: ಸರ್ವೇಗೆ ಬಂದ ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಹಿಂದೆ ಕಳುಹಿಸಿದ ಗ್ರಾಮಸ್ಥರು

Update: 2022-06-20 16:58 GMT

ಮಂಗಳೂರು : ಬಳ್ಕುಂಜೆ ಕೈಗಾರಿಕಾ ವಲಯ ಸ್ಥಾಪನೆ ಸಂಬಂಧಪಟ್ಟಂತೆ ಸರ್ವೆ ಮಾಡಲು ಬಂದಿದ್ದ ಕೆಐಎಡಿಬಿ ಅಧಿಕಾರಿಗಳನ್ನು ಗ್ರಾಮಸ್ಥರು ತಡೆದು ಹಿಂದೆ ಕಳುಹಿಸಿರುವ ಘಟನೆ ಸೋಮವಾರ ವರದಿಯಾಗಿದೆ.

ಕೆಐಎಡಿಬಿ ವತಿಯಿಂದ ಅಧಿಕಾರಿಗಳು ಜಮೀನನ್ನು ಸರ್ವೆ ನಡೆಸಲು ಬಂದಿದ್ದು, ಈ ವೇಳೆ ಅಧಿಕಾರಿಗಳಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು ವಿಚಾರಿಸಿದ್ದಾರೆ. " ಭೂಸ್ವಾಧೀನ ಪಡಿಸುವ ಜಮೀನಿನಲ್ಲಿ ಏನೆಲ್ಲಾ ಇದೆ ಎಂಬ ಬಗ್ಗೆ ಮೇಲಾಧಿಕಾರಿಗೆ ಮಾಹಿತಿ ನೀಡುವ ಕುರಿತು ಸರ್ವೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, "ಭೂ ಸ್ವಾಧೀನ ಸಂಬಂಧ ಅಧಿ‌ಸೂಚನೆ‌ ಮಾತ್ರ ಹೊರಡಿಸಲಾಗಿದೆ. ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಎಲ್ಲರೂ ಆಕ್ಷೇಪಣೆಗಳನ್ನು ಸಲ್ಲಿಸುತ್ತಿದ್ದಾರೆ. ಕೆಲವರ ಆಕ್ಷೇಪಣೆಗಳ ವಿಚಾರಣೆ ನಡೆಯುತ್ತಿದೆ.

ಅಧಿಸೂಚನೆ 28ರಲ್ಲಿ 3 ವಿಚಾರಣೆ ನಡೆಸುವುದು, ಅಧಿಸೂಚನೆ‌ 28ರಲ್ಲಿ 4ರಂತೆ ಯಾವ‌ ಜಮೀನುಗಳನ್ನು ವಶಕ್ಕೆ ಪಡೆದು ಕೊಳ್ಳಬೇಕು, ಯಾವ ಜಮೀನುದಾರರು ಆಕ್ಷೇಪಣೆಗಳಿಲ್ಲ ಎಂಬ ಕುರಿತು ಕಾರ್ಯವಿಧಾನಗಳು ನಡೆಯಬೇಕಿದೆ. ಆ ಬಳಿಕವಷ್ಟೇ ವಶಕ್ಕೆ ಪಡೆದು ಕೊಳ್ಳಲು ಅಂತಿಮ‌ ಜಮೀನುಗಳನ್ನು ಸರ್ವೇ ಮಾಡಲು ಅವಕಾಶವಿದೆ. ಆದ್ದರಿಂದ‌ ಜಮೀನುಗಳ‌ ಸರ್ವೇಗೆ ಗ್ರಾಮಸ್ಥರು ಅವಕಾಶ ನೀಡುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಕುರಿತು‌ ಸಮಜಾಯಿಶಿ ನೀಡಿದ ಅಧಿಕಾರಿಗೆ ಕಾನೂನು ಪಾಠ ಮಾಡಿದ ಗ್ರಾಮಸ್ಥರು, ಇದು ನಮ್ಮ‌ ಜಮೀನು ಇದರಲ್ಲಿ ಯಾರಿಗೂ ಸರ್ವೇ ಮಾಡಲು ಅವಕಾಶ ನೀಡುವುದಿಲ್ಲ. ಬೇಕಿದ್ದರೆ ಸರಕಾರಿ ಜಮೀನುಗಳನ್ನು ಸರ್ವೇ ಮಾಡುವುದಾದರೆ ನಮ್ಮ ಅಭ್ಯಂತರವಿಲ್ಲ ಎಂದು ಅಧಿಕಾರಿಗಳಿಗೆ ಸೂಚನೆ‌ ನೀಡಿದರು. ಅಲ್ಲದೆ, ಸರಕಾರದ ಅಂತಿಮ ಸೂಚನೆ ಬರುವ ಮೊದಲೇ ಅಧಿಕಾರಿಗಳು ಸರ್ವೇಗೆ ಬಂದರೆ ಪ್ರತಿಭಟಿಸಿ ಹಿಂದೆ ಕಳುಹಿಸಲಾಗುವುದು. ಇದು ಕೇವಲ ಎಚ್ಚರಿಕೆ ಎಂದು ಅಧಿಕಾರಿಗಳಿಗೆ ಸ್ಥಳೀಯರು ಸೂಚಿಸಿರುವುದಾಗಿ ತಿಳಿದುಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News