ಅಗ್ನಿಪಥ್ ಯೋಜನೆ ಮೂಲಕ ಶಸಸ್ತ್ರ ಕಾರ್ಯರ್ತರ ಪಡೆ ರೂಪಿಸಲು ಬಿಜೆಪಿ ಯತ್ನಿಸುತ್ತಿದೆ: ಮಮತಾ ಬ್ಯಾನರ್ಜಿ

Update: 2022-06-20 16:07 GMT

ಕೋಲ್ಕತಾ, ಜೂ. ೨೦: ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ‘ಅಗ್ನಿಪಥ್’ ಯೋಜನೆಯನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿರುವ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನೂತನ ರಕ್ಷಣಾ ನೇಮಕಾತಿ ಯೋಜನೆ ಮೂಲಕ  ತನ್ನದೇ ಆದ ಸಶಸ್ತ್ರ ಕಾರ್ಯಕರ್ತರ ಪಡೆ ರೂಪಿಸಲು ಕೇಸರಿ ಪಡೆ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಯೋಜನೆ ಶಸಸ್ತ್ರ ಪಡೆಗಳಿಗೆ ಅವಮಾನ ಎಂದು ಹೇಳಿರುವ ಮಮತಾ ಬ್ಯಾನರ್ಜಿ, ನಾಲ್ಕು ವರ್ಷಗಳ ಸೇವೆಯ ಬಳಿಕ ಅಗ್ನಿವೀರರನ್ನು ತನ್ನ ಪಕ್ಷದ ಕಚೇರಿಗೆ ಕಾವಲುಗಾರರನ್ನಾಗಿ ನೇಮಕ ಮಾಡಿಕೊಳ್ಳುವ ಬಿಜೆಪಿಯ ಚಿಂತನೆಗೆ  ಅಚ್ಚರಿ ವ್ಯಕ್ತಪಡಿಸಿದರು. 

‘ಈ ಯೋಜನೆ ಮೂಲಕ ಬಿಜೆಪಿ ತನ್ನದೇ ಆದ ಸಶಸ್ತ್ರ ಕಾರ್ಯಕರ್ತರ ಪಡೆ   ರೂಪಿಸಲು ಪ್ರಯತ್ನಿಸುತ್ತಿದೆ. ನಾಲ್ಕು ವರ್ಷಗಳ ಮೇಲೆ ಅವರು ಏನು ಮಾಡುತ್ತಾರೆ ? ಬಿಜೆಪಿ ಯುವಕರ ಕೈಗೆ ಶಸ್ತ್ರಾಸ್ತ್ರ ನೀಡಲು ಬಯಸುತ್ತಿದೆ’’ ಎಂದು ಬ್ಯಾನರ್ಜಿ ವಿಧಾನ ಸಭೆಯಲ್ಲಿ ಹೇಳಿದರು. 

ಇಂತಹ ಯೋಜನೆಗಳನ್ನು ಘೋಷಿಸುವ ಮೂಲಕ ೨೦೨೪ರ ಲೋಕಸಭೆ ಚುನಾವಣೆಗೆ ಮುನ್ನ ಜನ ಸಮೂಹವನ್ನು ಮೂರ್ಖರನ್ನಾಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಬ್ಯಾನರ್ಜಿ ಹೇಳಿದರು. 

‘‘ಪ್ರತಿ ವರ್ಷ ೨ ಕೋಟಿ ಉದ್ಯೋಗ ನೀಡುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ, ಅದು ಇದುವರೆಗೆ ಈಡೇರಿಲ್ಲ. ಈಗ ಅದು ಈ ಯೋಜನೆ ಮೂಲಕ ದೇಶದ ಜನರನ್ನು ಮೂರ್ಖರನ್ನಾಗಿಸುತ್ತಿದೆ’’ ಎಂದು ಅವರು ತಿಳಿಸಿದರು. ಬ್ಯಾನರ್ಜಿ ಅವರ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಶಾಸಕರು ಕಲಾಪ ಬಹಿಷ್ಕರಿಸಿ ಸದನದಿಂದ ಹೊರ ನಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News