×
Ad

ಹಿಟ್ಲರ್ ಮಾದರಿಯ ಖಾಸಗಿ ಸೇನೆ ಕಟ್ಟುವ ಯೋಜನೆ ಅಗ್ನಿಪಥ್: ಮುನೀರ್ ಕಾಟಿಪಳ್ಳ ಆರೋಪ

Update: 2022-06-20 22:44 IST

ಮಂಗಳೂರು: ಯುವಜನರ ಉದ್ಯೋಗದ ಹಕ್ಕನ್ನು ಕಸಿಯಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಗ್ನಿಪಥ್ ಯೋಜನೆಯ ಮೂಲಕ ಆರೆಸ್ಸೆಸ್ ಕಾರ್ಯಕರ್ತರಿಗೆ ಮಿಲಿಟರಿ ತರಬೇತಿ ಕೊಡಿಸಿ ಹಿಟ್ಲರ್ ಮಾದರಿಯಲ್ಲಿ ಖಾಸಗಿ ಸೇನೆ ಕಟ್ಟುವ ಹುನ್ನಾರವಾಗಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಸೇನೆಗೆ ಗುತ್ತಿಗೆಯಾಧಾರದಲ್ಲಿ ನೇಮಕ ಮಾಡುವ ಅಗ್ನಿಪಥ್ ಯೋಜನೆ ವಿರೋಧಿಸಿ ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಮಿನಿ ವಿಧಾನದ ಸೌಧದ ಎದುರು ನಡೆದ ಸಾಂಕೇತಿಕ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಈಗಾಗಾಲೇ ಆರ್‌ಎಸ್‌ಎಸ್‌ನಿಂದ ಯುವಕರಿಗೆ ಬಂದೂಕು ಸೇರಿದಂತೆ ಅರೆಬರೆ ಮಿಲಿಟರಿ ತರಬೇತುಗೊಳಿಸುವ ಕಾರ್ಯವನ್ನು ನಡೆಸುತ್ತಿದೆ. ಇದೀಗ ಅಧಿಕೃತವಾಗಿ ಖಾಸಗಿ ಮಿಲಿಟರಿ ಕಟ್ಟಲು, ಯುವಕರನ್ನು ಫ್ಯಾಸಿಸಂಗೆ ತಳ್ಳುವ ಹುನ್ನಾರ ಇದಾಗಿದ್ದು, ಪ್ರಜ್ಞಾವಂತ ಯುವಕರು ಎಚ್ಚೆಕೊಳ್ಳಬೇಕಾಗಿದೆ ಎಂದರು.

ಅಗ್ನಿಪಥ್ ಯೋಜನೆಗೆ ಈಗಾಗಲೇ ದೇಶಾದ್ಯಂತ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದೆ. ಆದರೆ ಅದನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ಈ ನಡುವೆ ಪ್ರತಿಭಟನೆ ನಡೆಸುವವರಿಗೆ ಅರ್ಜಿ ಹಾಕಲು ಹಕ್ಕಿಲ್ಲ ಎಂಬಂತಹ ಹೇಳಿಕೆಯನ್ನು ಕೇಂದ್ರದ ಜನಪ್ರತಿನಿಧಿಗಳು ನೀಡುತ್ತಿರುವುದು ಬಿಜೆಪಿ ಸರಕಾರದ ನಿರ್ಲಜ್ಜತೆಯನ್ನು ತೋರ್ಪಡಿಸುತ್ತಿದೆ. ಈ ದೇಶದ ಮಿಲಿಟರಿ, ಭದ್ರತೆ, ರಾಷ್ಟ್ರೀಯತೆಯ ಹೆಸರಿನಲ್ಲಿ ದೇಶಭಕ್ತರು ಎಂಬ ನಕಲಿ ಇಮೇಜ್‌ನಲ್ಲಿ ಅಧಿಕಾರಕ್ಕೆ ಬಂದ ಸರಕಾರ ಹಾಗೂ ಆರ್‌ಎಸ್‌ಎಸ್‌ನ ದೇಶಭಕ್ತಿ ಯ ಟೊಳ್ಳುತನ ಸಾಬೀತುಗೊಂಡಿದೆ. ದೇಶದ ಭದ್ರತೆಯ ಬಾಗವಾದ ಸೇನಯನ್ನು ಕೇಂದ್ರ ಸರಕಾರ  ಲಾಭದ ದೃಷ್ಟಿಯಿಂದ ನೋಡುತ್ತಿರುವುದು ವಿಷಾದನೀಯ. ಸೇನೆಯ ಜವಾನರಿಗೆ ನೀಡಲಾಗುವ ವಿವಿಧ ರೀತಿಯ ಪಿಂಚಣಿ, ಸೌಲಭ್ಯ ಗಳನ್ನು ಉಳಿಸಿ ಸೇನೆಯನ್ನೂ ಖಾಸಗೀಕರಣಗೊಳಿಸಿ ಕಾರ್ಪೊರೇಟ್ ಲಾಬಿಗಳ ಹಿತಾಸಕ್ತಿಗೆ ಮಿಲಿಟರಿಯನ್ನು ಬಲಿ ಪಡೆಯುವ ಕುತಂತ್ರ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಶಿಕ್ಷಣ ಪಡೆದು ಯುವಕರು ಉದ್ಯೋಗ ಪಡೆಯುವ ಹಕ್ಕನ್ನು ಹೊಂದಿದ್ದು, ನಿರುದ್ಯೋಗಿ ಯುವಜನರ ಹೋರಾಟ ವನ್ನು ಡಿವೈಎಫ್‌ಐ ಇನ್ನಷ್ಟು ತೀವ್ರಗೊಳಿಸಲಿದೆ ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಮುಖಂಡರಾದ ದಯಾನಂದ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News