ಅಗ್ನಿಪಥ್ ವಿರುದ್ಧ ಪ್ರತಿಭಟನೆ: ಹರ್ಯಾಣದ ವಿವಿಧ ಭಾಗಗಳಲ್ಲಿ ರಸ್ತೆ ತಡೆ

Update: 2022-06-20 17:28 GMT

ಚಂಡಿಗಢ, ಜೂ. ೨೦: ಕೇಂದ್ರ ಸರಕಾರದ ‘ಅಗ್ನಿಪಥ್’ ಯೋಜನೆ ವಿರುದ್ಧ ಹರ್ಯಾಣದ ವಿವಿಧ ಭಾಗಗಳಲ್ಲಿ ಸೋಮವಾರ ಕೂಡ ಪ್ರತಿಭಟನೆ ಮುಂದುವರಿದಿದೆ. ಶಸಸ್ತ್ರ ಪಡೆಗಳ ಉದ್ಯೋಗಾಕಾಂಕ್ಷಿಗಳು ಯೋಜನೆ ಹಿಂಪಡೆಯುವಂತೆ ಆಗ್ರಹಿಸಿ ರಸ್ತೆ ತಡೆ ನಡೆಸಿದ್ದಾರೆ.  

ಫತೇಹ್‌ಬಾದ್‌ನ ಲಾಲ್ ಬಟ್ಟಿ ಚೌಕದಲ್ಲಿ ಯುವಕರ ಗುಂಪೊಂದು ರಸ್ತೆ ತಡೆ ನಡೆಸಿತು. ರೋಹ್ಟಕ್ ಜಿಲ್ಲೆಯ ರಸ್ತೆಗಳಲ್ಲಿ ಹಲವರು ಪ್ರತಿಭಟನೆ ನಡೆಸಿದರು. 

ಸೇನಾಪಡೆ, ನೌಕಾ ಪಡೆ ಹಾಗೂ ವಾಯು ಪಡೆಗಳಿಗೆ ನಾಲ್ಕು ವರ್ಷಗಳ ಅವಧಿಗೆ ಯೋಧರನ್ನು ನೇಮಕ ಮಾಡುವ ಯೋಜನೆ ವಿರುದ್ಧ ಹರ್ಯಾಣ  ಹಾಗೂ ಪಂಜಾಬ್‌ನಲ್ಲಿ ಪ್ರತಿಭಟನೆ ಮುಂದುವರಿದಿರುವ ನಡುವೆ ಎರಡು ರಾಜ್ಯಗಳ ಪ್ರಮುಖ ಸ್ಥಳಗಳಲ್ಲಿ ಬಿಗಿ  ಭದ್ರತೆ ಏರ್ಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಹರ್ಯಾಣದ ಅಂಬಾಲ, ರೆವಾರಿ, ಸೋನಿಪತ್ ಹಾಗೂ ಪಂಜಾಬ್‌ನ ಲುಧಿಯಾನ, ಜಲಂಧರ್ ಹಾಗೂ ಅಮೃತಸರ್ ಸೇರಿದಂತೆ ಹಲವು ರೈಲು ನಿಲ್ದಾಣಗಳಲ್ಲಿ ಭಾರಿ ಭದ್ರತೆ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 
ಎಲ್ಲ ಪೊಲೀಸ್ ಆಯುಕ್ತರು ಹಾಗೂ ಹಿರಿಯ ಪೊಲೀಸ್ ಅಧೀಕ್ಷಕರೊಂದಿಗೆ ಪಂಜಾಬ್‌ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಹಾಗೂ ಸುವ್ಯವಸ್ಥೆ) ಸಂವಹನ ನಡೆಸಿದ್ದಾರೆ. ಕೇಂದ್ರ ಸರಕಾರದ ಇಲಾಖೆಗಳು ಹಾಗೂ ಕಚೇರಿಗಳಿಗೆ ಬಿಗಿ ಭದ್ರತೆ ಒದಗಿಸುವಂತೆ ಅವರು ಸೂಚಿಸಿದ್ದಾರೆ.

ಸಾಮಾಜಿಕ ಜಾಲ ತಾಣಗಳ ಮೂಲಕ ಪ್ರತಿಭಟನೆ ಹಾಗೂ ಭಾರತ್ ಬಂದ್‌ಗೆ ಕರೆ ನೀಡಿರುವುದನ್ನು ಉಲ್ಲೇಖಿಸಿರುವ ಎಡಿಜಿಪಿ, ಸಕ್ರಿಯ ಬದ್ದ ಸಾಮಾಜಿಕ ಮಾಧ್ಯಮದ ಘಟಕಗಳ ಅಗತ್ಯತೆ ಇದೆ. ಅಲ್ಲದೆ, ಅವರ ಚಟುವಟಿಕೆಗಳು ಹಾಗೂ ಸಂವಹನಗಳ ಬಗ್ಗೆ ನಿಗಾ ವಹಿಸುವ ಅಗತ್ಯತೆ ಇದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News