×
Ad

ಮಂಗಳೂರು; ಕರ್ತವ್ಯ ನಿರತ ಪೊಲೀಸರ ಮೇಲೆ ದಾಳಿ: 3 ಆರೋಪಿಗಳ ಬಂಧನ

Update: 2022-06-20 23:29 IST
ಬಂಧಿತ ಆರೋಪಿಗಳು

ಮಂಗಳೂರು, ಜೂ.21: ನಗರದ ಉರ್ವ ಚಿಲಿಂಬಿಗುಡ್ಡೆ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಬೀಟ್ ಕರ್ತವ್ಯಕ್ಕೆ ತೆರಳಿದ್ದ ಇಬ್ಬರು ಪೊಲೀಸರ ಮೇಲೆ ತಂಡವೊಂದು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ರವಿವಾರ ತಡರಾತ್ರಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.

ಚಿಲಿಂಬಿಗುಡ್ಡೆ ನಿವಾಸಿಗಳಾದ ದುರ್ಗೇಶ್, ಪ್ರಜ್ವಿತ್, ರಕ್ಷಿತ್ ಬಂಧಿತರು. ಆರೋಪಿಗಳು ರಾಮ ಸೇನೆಯ ಕಾರ್ಯಕರ್ತರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್‌ ಸಿಬ್ಬಂದಿ ವೆಂಕಟೇಶ್ ಮತ್ತು ಧನಂಜಯ್ ಘಟನೆಯಲ್ಲಿ ಗಾಯಗೊಂಡವರು.

ಉರ್ವ ಪೊಲೀಸ್ ಠಾಣೆಯ ಸಿಬ್ವಂದಿ ತಡರಾತ್ರಿ 1:30ರ ವೇಳೆಗೆ ಚಿಲಿಂಬಿಗುಡ್ಡೆ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಸಂಘಟನೆಯೊಂದಕ್ಕೆ ಸೇರಿದ ಸುಮಾರು 8 ಮಂದಿ ಯುವಕರ ತಂಡ ರಸ್ತೆ ಬದಿ ಮದ್ಯಪಾನ ಸೇವನೆ ಮಾಡುತ್ತಾ ಹರಟೆ ಹೊಡೆಯುತ್ತಿತ್ತು. ಈ ಸಂದರ್ಭ ಪೊಲೀಸರು ವಿಚಾರಣೆ ನಡೆಸಿದ್ದು, ಇದರಿಂದ ತಗಾದೆ ತೆಗೆದ ಪಾನಮತ್ತ ಯುವಕರ ತಂಡ ಪೊಲೀಸರ ಮೇಲೆ ಎರಗಿದೆ. ಇಬ್ಬರು ಪೊಲೀಸರಿಗೂ ತಂಡ ಹಲ್ಲೆ ಮಾಡಿದ್ದಲ್ಲದೆ, ಒಬ್ಬಾತ ಪೊಲೀಸರ ಮೇಲೆ ಬೈಕ್ ಚಲಾಯಿಸಲು ಯತ್ನಿಸಿದ್ದಾನೆ. ಬಳಿಕ ತಂಡ ಅಲ್ಲಿಂದ ಪರಾರಿಯಾಗಿದೆ. ಗಾಯಾಳು ಪೊಲೀಸರನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜುಲೈ 4ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News