ಪ್ರವಾದಿ ಬಗ್ಗೆ ನೂಪುರ್ ಶರ್ಮಾ ಹೇಳಿಕೆಯಿಂದ ಭಾರತದ ಖ್ಯಾತಿಗೆ ಧಕ್ಕೆ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್

Update: 2022-06-21 17:42 GMT

ಹೊಸದಿಲ್ಲಿ: ಬಿಜೆಪಿಯ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರು ಪ್ರವಾದಿ ಮುಹಮ್ಮದ್ ರವರ ಕುರಿತು ಮಾಡಿದ ನಿಂದನಾತ್ಮಕ ಟೀಕೆಗಳ ಸುತ್ತಲಿನ ವಿವಾದವು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಧಕ್ಕೆ ತಂದಿದೆ ಮತ್ತು ಅವರು ದೇಶವನ್ನು ಸತ್ಯಕ್ಕೆ ದೂರವಾದ ರೀತಿಯಲ್ಲಿ ಬಿಂಬಿಸಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಮಂಗಳವಾರ ಹೇಳಿದ್ದಾರೆ.

ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ,  ಪ್ರವಾದಿ ನಿಂದನೆ ವಿವಾದದ ಸುತ್ತಲಿನ ಪ್ರತಿಭಟನೆಗಳು ಭಾರತದ ಪ್ರತಿಷ್ಠೆಗೆ ಧಕ್ಕೆ ತಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ದೋವಲ್‌, “ಇದು (ಭಾರತದ ಪ್ರತಿಷ್ಠೆಯನ್ನು ಹಾಳುಮಾಡಿದೆ), ಅಂದರೆ ಭಾರತವನ್ನು ಪ್ರಕ್ಷೇಪಿಸಲಾಗಿದೆ ಅಥವಾ ಭಾರತದ ವಿರುದ್ಧ ಕೆಲವು ತಪ್ಪು ಮಾಹಿತಿಯನ್ನು ಹರಡಲಾಗಿದೆ, ಅದು ವಾಸ್ತವದಿಂದ ದೂರವಿದೆ. ಬಹುಶಃ ನಾವು ಅವರನ್ನು ತೊಡಗಿಸಿಕೊಳ್ಳುವ ಮತ್ತು ಅವರೊಂದಿಗೆ ಮಾತನಾಡುವ ಮತ್ತು ಅವರಿಗೆ ಮನವರಿಕೆ ಮಾಡುವ ಅವಶ್ಯಕತೆಯಿದೆ. ಮತ್ತು ನಾವು ಎಲ್ಲಿಗೆ ಹೋದೆವೋ, ಎಲ್ಲೆಲ್ಲಿ ನಾವು ಸಂಬಂಧಪಟ್ಟ ಜನರೊಂದಿಗೆ ತೊಡಗಿಸಿಕೊಂಡಿದ್ದೇವೆ, ಅಲ್ಲೆಲ್ಲಾ ಅವರಿಗೆ ಮನವರಿಕೆ ಮಾಡಲು ಸಾಧ್ಯವಾಯಿತು. ಜನರು ಭಾವನಾತ್ಮಕವಾಗಿ ಉದ್ರೇಕಗೊಂಡಾಗ, ಅವರ ನಡವಳಿಕೆಯು ಸ್ವಲ್ಪಮಟ್ಟಿಗೆ ಅಸಮಂಜಸವಾಗಿರುತ್ತದೆ, ” ಎಂದು ಹೇಳಿದ್ದಾರೆ. 

ಅಫ್ಘಾನಿಸ್ತಾನದ ಸಿಖ್ ದೇಗುಲದ ಮೇಲೆ ಇತ್ತೀಚೆಗೆ ನಡೆದ ಬಾಂಬ್ ದಾಳಿ ದುರದೃಷ್ಟಕರ ಎಂದು ದೋವಲ್ ಬಣ್ಣಿಸಿದ ಅವರು, ಆ ದೇಶದ ಅಲ್ಪಸಂಖ್ಯಾತರಿಗೆ ಎಲ್ಲಾ ಸಹಾಯವನ್ನು ವಿಸ್ತರಿಸಲು ಭಾರತ ಬದ್ಧವಾಗಿದೆ ಎಂದು ಹೇಳಿದ್ದಾರೆ. "ನಾವು ಹೆಚ್ಚಿನ ಸಂಖ್ಯೆಯ ಸಿಖ್ಖರಿಗೆ ವೀಸಾಗಳನ್ನು ನೀಡಿದ್ದೇವೆ. ವಿಮಾನಗಳು ಲಭ್ಯವಾಗುತ್ತಿದ್ದಂತೆ, ಅವರಲ್ಲಿ ಕೆಲವರು ಹಿಂತಿರುಗುತ್ತಾರೆ. ನಾವು ಸಿಖ್ಖರ ಪ್ರಕರಣಗಳನ್ನು ಬಹಳ ಸಹಾನುಭೂತಿಯಿಂದ ನೋಡುತ್ತೇವೆ. ಅದೊಂದು ಅತ್ಯಂತ ದುರದೃಷ್ಟಕರ ಘಟನೆ. ಭಾರತವು ತನ್ನ ಬದ್ಧತೆಗೆ ನಿಲ್ಲುತ್ತದೆ ಎಂದು ನಾವು ಅಲ್ಲಿನ ಸಿಖ್ಖರು ಮತ್ತು ಹಿಂದೂಗಳಿಗೆ ಭರವಸೆ ನೀಡಿದ್ದೇವೆ” ಎಂದು ದೋವಲ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ನಾಗರಿಕರ ನಿರಂತರ ಹತ್ಯೆಯ ಕುರಿತು ಪ್ರಶ್ನಿಸಿದಾಗ, ಸರ್ಕಾರವು ಅದನ್ನು ನಿಭಾಯಿಸುತ್ತಿದೆ ಎಂದು ದೋವಲ್ ಹೇಳಿದ್ದಾರೆ. “2019 ರ ನಂತರ ಜನರ ಮನಸ್ಥಿತಿ ಬದಲಾಗಿದೆ. ಅವರು ಪಾಕಿಸ್ತಾನ ಮತ್ತು ಭಯೋತ್ಪಾದನೆಯ ಪರವಾಗಿಲ್ಲ. ಇಂದು ಹುರಿಯತ್ ಎಲ್ಲಿದೆ? ಎಲ್ಲ ಬಂದ್‌ಗಳು ಎಲ್ಲಿವೆ? ಕೆಲವು ವ್ಯಕ್ತಿಗಳು ದಾರಿತಪ್ಪಿ ಇದರಲ್ಲಿ ತೊಡಗುತ್ತಿದ್ದಾರೆ. ಅವರ ಮನವೊಲಿಸಲು ನಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದೇವೆ. ಅವರ ಕುಟುಂಬದವರು ಪ್ರಯತ್ನ ನಡೆಸುತ್ತಿದ್ದಾರೆ. ಕೆಲವು ತಂಝೀಮ್‌ಗಳು (ಭಯೋತ್ಪಾದಕ ಗುಂಪುಗಳು) ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ. ನಾವು ಸಂಪೂರ್ಣ ಸಂಕಲ್ಪದಿಂದ ಅವರ ವಿರುದ್ಧ ಹೋರಾಡುತ್ತಿದ್ದೇವೆ. ನಾವು ಭಯೋತ್ಪಾದನೆಯೊಂದಿಗೆ ವ್ಯವಹರಿಸುವುದಿಲ್ಲ. ನಾವು ಭಯೋತ್ಪಾದಕನನ್ನು ಎದುರಿಸಬೇಕಾಗಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಬಹುದು ಎಂಬ ಭರವಸೆ ನಮಗಿದೆ” ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News