​ಯಾವುದೇ ನಿರ್ಧಾರಕ್ಕೆ ಮುನ್ನ ನಮ್ಮ ವಾದವನ್ನು ಆಲಿಸಿ:ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಆಗ್ರಹ

Update: 2022-06-21 17:41 GMT

ಹೊಸದಿಲ್ಲಿ,ಜೂ.21: ‘ಅಗ್ನಿಪಥ್’ ಸೇನಾ ನೇಮಕಾತಿ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ನ್ಯಾಯಾಲಯವು ತನ್ನ ವಾದವನ್ನು ಆಲಿಸಲೇಬೇಕು ಎಂದು ಆಗ್ರಹಿಸಿ ಕೇಂದ್ರವು ಸರ್ವೋಚ್ಚ ನ್ಯಾಯಾಲಯದಲ್ಲಿ ಕೇವಿಯಟ್ ಸಲ್ಲಿಸಿದೆ.ಯೋಜನೆಯನ್ನು ಪ್ರಶ್ನಿಸಿ ಈವರೆಗೆ ಮೂರು ಅರ್ಜಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿವೆ. ಆದರೆ ಕೇವಿಯಟ್ನಲ್ಲಿ ಯಾವುದೇ ಅರ್ಜಿಯನ್ನು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿಲ್ಲ.

ತನ್ನ ಅಗ್ನಿಪಥ ಯೋಜನೆಯನ್ನು ಪುನರ್ಪರಿಶೀಲಿಸುವಂತೆ ಕೇಂದ್ರಕ್ಕೆ ನಿರ್ದೇಶನ ಕೋರಿ ವಕೀಲ ಹರ್ಷ ಅಜಯ ಸಿಂಗ್ ಅವರು ಸೋಮವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಯೋಜನೆಯ ಪ್ರಕಟಣೆಯು ದೇಶದ ಹಲವಾರು ಭಾಗಗಳಲ್ಲಿ ಪ್ರತಿಭಟನೆಗಳಿಗೆ ಕಾರಣವಾಗಿದೆ ಎಂದೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.ಇದಕ್ಕೂ ಮುನ್ನ ವಕೀಲರಾದ ಎಂ.ಎಲ್.ಶರ್ಮಾ ಮತ್ತು ವಿಶಾಲ ತಿವಾರಿ ಅವರು ಯೋಜನೆಯ ವಿರುದ್ಧ ಎರಡು ಪ್ರತ್ಯೇಕ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಶತಮಾನಗಳಷ್ಟು ಹಳೆಯದಾದ,ಸಶಸ್ತ್ರ ಪಡೆಗಳಿಗೆ ಆಯ್ಕೆ ಕಾರ್ಯವಿಧಾನವನ್ನು ಸರಕಾರವು ರದ್ದುಗೊಳಿಸಿದೆ. ಇದು ಸಂವಿಧಾನದ ನಿಯಮಗಳಿಗೆ ವಿರುದ್ಧವಾಗಿದೆ ಮತ್ತು ಇದಕ್ಕಾಗಿ ಸಂಸದೀಯ ಅನುಮೋದನೆಯನ್ನು ಪಡೆಯಲಾಗಿಲ್ಲ ಎಂದು ಶರ್ಮಾ ತನ್ನ ಅರ್ಜಿಯಲ್ಲಿ ಆರೋಪಿಸಿದ್ದಾರೆ.
 ಯೋಜನೆಯನ್ನು ಮತ್ತು ರಾಷ್ಟ್ರೀಯ ಭದ್ರತೆ ಹಾಗೂ ಸೇನೆಯ ಮೇಲೆ ಅದರ ಪರಿಣಾಮವನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸುವಂತೆ ಕಳೆದ ವಾರ ಸಲ್ಲಿಸಿರುವ ತನ್ನ ಅರ್ಜಿಯಲ್ಲಿ ವಿಶಾಲ ತಿವಾರಿ ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದ್ದಾರೆ. ಸಾರ್ವಜನಿಕ ಆಸ್ತಿಗಳ ನಾಶಕ್ಕೆ ಕಾರಣವಾದ ಯೋಜನೆಯ ವಿರುದ್ಧದ ಭಾರೀ ಪ್ರಮಾಣದ ಹಿಂಸಾಚಾರಗಳ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡದ ರಚನೆಗೆ ನಿರ್ದೇಶನವನ್ನೂ ಅರ್ಜಿಯು ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News