ಜೋ ಬೈಡನ್ ವೈಜ್ಞಾನಿಕ ಸಲಹೆಗಾರರಾಗಿ ಭಾರತೀಯ ಮೂಲದ ಡಾ. ಆರತಿ

Update: 2022-06-22 02:43 GMT
ಡಾ.ಆರತಿ ಪ್ರಭಾಕರ್

ವಾಷಿಂಗ್ಟನ್: ಭಾರತ ಮೂಲದ ವಿಜ್ಞಾನಿ ಡಾ.ಆರತಿ ಪ್ರಭಾಕರ್ ಅವರನ್ನು ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಕಚೇರಿಯ (ಓಎಸ್‍ಟಿಪಿ) ನಿರ್ದೇಶಕರನ್ನಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮಂಗಳವಾರ ನೇಮಕ ಮಾಡಿದ್ದಾರೆ.

ಈ ನೇಮಕವನ್ನು ಸೆನೆಟ್ ದೃಢಪಡಿಸಿದರೆ, ಡಾ.ಆರತಿಯವರು ಓಎಸ್‍ಟಿಪಿಯ ಅತ್ಯುನ್ನತ ಹುದ್ದೆಗೆ ಏರಿದ ಮೊಟ್ಟಮೊದಲ ವಲಸೆ ಮಹಿಳೆ ಎನಿಸಿಕೊಳ್ಳಲಿದ್ದಾರೆ.

"ಡಾ. ಅರತಿ ಪ್ರಭಾಕರ್ ಅವರು ಪ್ರತಿಭಾವಂತೆ ಹಾಗೂ ಘನತೆ ಹೊಂದಿರುವ ಎಂಜಿನಿಯರ್, ಅನ್ವಯಿಕ ಭೌತವಿಜ್ಞಾನಿಯಾಗಿದ್ದು, ಇವರು ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಕಚೇರಿಯನ್ನು ಮುನ್ನಡೆಸಲಿದ್ದಾರೆ" ಎಂದು ಬೈಡನ್ ಹೇಳಿದ್ದಾರೆ.

ನಮ್ಮ ಸಾಧ್ಯತೆಗಳನ್ನು ವಿಸ್ತರಿಸಲು, ಕಠಿಣ ಸವಾಲುಗಳನ್ನು ಬಗೆಹರಿಸಲು ಮತ್ತು ಅಸಾಧ್ಯವಾದುದನ್ನು ಸಾಧ್ಯವಾಗಿಸಲು ವಿಜ್ಞಾನ, ತಂತ್ರಜ್ಞಾನ ಮತ್ತು ಅನುಶೋಧನೆಯ ಪ್ರಯೋಜನ ಪಡೆಯುವ ನಿಟ್ಟಿನಲ್ಲಿ ಡಾ.ಆರತಿ ಅವರನ್ನು ನೇಮಕ ಮಾಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ನೇಮಕವನ್ನು ಸೆನೆಟ್ ದೃಢಪಡಿಸಿದ ಬಳಿಕ ಡಾ.ಆರತಿಯವರು ಓಎಸ್‍ಟಿಪಿ ನಿರ್ದೇಶಕರಾಗಿ, ಅಧ್ಯಕ್ಷರ ಮುಖ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಲಹೆಗಾರರಾಗಲಿದ್ದಾರೆ ಮತ್ತು ಅಧ್ಯಕ್ಷರ ವಿಜ್ಞಾನ ಮತ್ತು ತಂತ್ರಜ್ಞಾನ ಸಲಹಾ ಮಂಡಳಿಯ ಸಹ ಮುಖ್ಯಸ್ಥರಾಗುವರು. ಜತೆಗೆ ಅಧ್ಯಕ್ಷರ ಸಂಪುಟದ ಸದಸ್ಯರೂ ಆಗಲಿದ್ದಾರೆ.

ಡಾ.ಆರತಿಯವರು ಮೂರು ವರ್ಷದವರಾಗಿದ್ದಾಗ ಅವರ ಕುಟುಂಬ ಭಾರತದಿಂದ ಅಮೆರಿಕಕ್ಕೆ ವಲಸೆ ಬಂದಿತ್ತು. ಮೊದಲು ಚಿಕಾಗೋ ಬಳಿಕ ಲುಬೊಕೊ, ಟೆಕ್ಸಸ್‍ಗೆ ವಲಸೆ ಹೋಗಿತ್ತು. ಡಾ.ಆರತಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಷಯದಲ್ಲಿ ಟೆಕ್ಸಸ್ ತಾಂತ್ರಿಕ ವಿವಿಯಲ್ಲಿ ಪದವಿ ಪಡೆದಿದ್ದಾರೆ. ಬಳಿಕ ಕ್ಯಾಲಿಫೋರ್ನಿಯಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಅನ್ವಯಿಕ ಭೌತಶಾಸ್ತ್ರದಲ್ಲಿ ಪಿಎಚ್‍ಡಿ ಪಡೆದ ಮೊದಲ ಮಹಿಳೆ ಎನಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News