ಅಫ್ಘಾನಿಸ್ತಾನದಲ್ಲಿ ಭೂಕಂಪ: ಕನಿಷ್ಠ 255 ಮಂದಿ ಮೃತ್ಯು

Update: 2022-06-22 06:35 GMT
ಸಾಂದರ್ಭಿಕ ಚಿತ್ರ

ಕಾಬೂಲ್:‌ ಅಫ್ಘಾನಿಸ್ತಾನದಲ್ಲಿ ಇಂದು 6.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 250 ಮಂದಿ ಮೃತಪಟ್ಟಿದ್ದಾರೆ ಎಂದು Reuters ಮತ್ತು Tolonews ವರದಿ ಮಾಡಿದೆ. ಮೃತಪಟ್ಟವರಲ್ಲಿ ಬಹುತೇಕರು ಪಕ್ತಿಕಾ ಪ್ರಾಂತ್ಯಕ್ಕೆ ಸೇರಿದವರಾಗಿದ್ದಾರೆ ಎಂದು ವರದಿ ತಿಳಿಸಿದೆ.

ಪಕ್ತಿಕಾ ಪ್ರಾಂತ್ಯ ಸಹಿತ ಹಲವೆಡೆಗಳಲ್ಲಿ 255ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಆಡಳಿತದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ ಮುಹಮ್ಮದ್ ನಾಸಿಮ್ ಹಕ್ಕಾನಿ ಹೇಳಿದ್ದಾರೆ. ನಂಗರ್‌ಹಾರ್ ಪ್ರಾಂತ್ಯದಲ್ಲಿ ಇಪ್ಪತ್ತೈದು ಮತ್ತು ಖೋಸ್ಟ್‌ನಲ್ಲಿ ಐದು ಸಾವುಗಳು ವರದಿಯಾಗಿವೆ.

ತಾಲಿಬಾನ್ ಸರ್ಕಾರದ ಉಪ ವಕ್ತಾರ ಬಿಲಾಲ್ ಕರೀಮಿ, ಭೂಕಂಪವು ಈ ಪ್ರದೇಶದಲ್ಲಿ ಹಲವಾರು ಮನೆಗಳನ್ನು ನಾಶಪಡಿಸಿದೆ ಎಂದು ಹೇಳಿದ್ದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. "ಹೆಚ್ಚಿನ ದುರಂತವನ್ನು ತಡೆಗಟ್ಟಲು ಪ್ರದೇಶಕ್ಕೆ ತಂಡಗಳನ್ನು ತಕ್ಷಣವೇ ಕಳುಹಿಸಲು ನಾವು ಎಲ್ಲಾ ಸಹಾಯ ಸಂಸ್ಥೆಗಳನ್ನು ಒತ್ತಾಯಿಸುತ್ತೇವೆ" ಎಂದು ಅವರು ಹೇಳಿದರು.

ಆಗ್ನೇಯ ಅಫ್ಘಾನಿಸ್ತಾನದ ಖೋಸ್ಟ್ ನಗರದಿಂದ ಸುಮಾರು 44 ಕಿ.ಮೀ ದೂರದಲ್ಲಿ 51 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ.

ರಾಯಿಟರ್ಸ್ ಪ್ರಕಾರ, ನೆರೆಯ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಮತ್ತು ದೇಶದ ಪೂರ್ವ ಪಂಜಾಬ್ ಪ್ರಾಂತ್ಯದಲ್ಲೂ ಕಂಪನಗಳು ಸಂಭವಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News