×
Ad

ಮಂಗಳೂರು: ಬಾಲಕಿಯ ಅತ್ಯಾಚಾರ ಪ್ರಕರಣ; ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

Update: 2022-06-22 18:23 IST

ಮಂಗಳೂರು: ಬಟ್ಟೆ ಅಂಗಡಿಯೊಂದಕ್ಕೆ ಕೆಲಸಕ್ಕೆ ಬಂದಿದ್ದ ಬಾಲಕಿಯನ್ನು ಅತ್ಯಾಚಾರ ಎಸಗಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ-೨ ನ್ಯಾಯಾಲಯವು ೧೦ ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ.

ಮಂಗಳೂರು ತಾಲೂಕಿನ ಕಂದಾವರ ಗ್ರಾಮದ ಅಬ್ದುಲ್ ಲತೀಫ್ (45) ಶಿಕ್ಷೆಗೊಳಗಾದ ಆರೋಪಿ.

ತೆಂಕ ಉಳೆಪಾಡಿ ಗ್ರಾಮದ ಕೈಕಂಬದಲ್ಲಿ ಬಟ್ಟೆ ಅಂಗಡಿಯನ್ನು ಅಬ್ದುಲ್ ಲತೀಫ್ ಹೊಂದಿದ್ದ. ಈತನ ಅಂಗಡಿಗೆ ಬಾಲಕಿ ಕೆಲಸಕ್ಕೆ ಸೇರಿದ್ದಳು. 2017ರ ಎಪ್ರಿಲ್‌ನಲ್ಲಿ ಮಧ್ಯಾಹ್ನ ವೇಳೆ ಬಾಲಕಿ ತಲೆನೋವೆಂದು ಹೇಳಿದಾಗ ಔಷಧಿ ತರುವುದಾಗಿ ಹೇಳಿದ ಅಬ್ದುಲ್ ಲತೀಫ್ ಯಾವುದೋ ಒಂದು ಮಾತ್ರೆ ಮತ್ತು ಜ್ಯೂಸ್ ತಂದುಕೊಟ್ಟಿದ್ದ ಎಂದು ಆರೋಪಿಸಲಾಗಿತ್ತು. ಬಾಲಕಿಯು ಆ ಮಾತ್ರೆಯನ್ನು ಸೇವಿಸಿ ಮತ್ತು ಜ್ಯೂಸ್ ಕುಡಿದ ಬಳಿಕ ಪ್ರಜ್ಞೆ ತಪ್ಪಿದ್ದಳು. ಆ ಸಂದರ್ಭ ಆರೋಪಿಯು ಅತ್ಯಾಚಾರ ಎಸಗಿದ್ದ. ಬಳಿಕ ಈ ವಿಚಾರವನ್ನು ಯಾರಿಗೂ ಹೇಳಬಾರದು. ಎಲ್ಲವನ್ನೂ ವೀಡಿಯೋ ಮಾಡಿದ್ದೇನೆ. ಹೇಳಿದರೆ ಅದನ್ನು ವೈರಲ್ ಮಾಡುತ್ತೇನೆ. ನಾನು ಹೇಳಿದಂತೆ ಮುಂದೆಯೂ ಕೇಳಬೇಕು ಎಂದು ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಆ ಬಳಿಕವೂ ಆರೋಪಿ ಬಾಲಕಿಯನ್ನು ಬೆದರಿಸಿ ಅತ್ಯಾಚಾರವೆಸಗಿದ್ದ. ಇದರಿಂದ ಬಾಲಕಿ ಗರ್ಭಿಣಿಯಾಗಿದ್ದಳು. ೨೦೧೭ರ ಆ.೧೧ರಂದು ಬಜ್ಪೆ ಪೊಲೀಸರಿಗೆ ದೂರು ನೀಡಲಾಗಿತ್ತು. ಅನಂತರ ಆಕೆ ಮಗುವಿಗೆ ಜನ್ಮ ನೀಡಿದ್ದಳು. ಪೊಲೀಸರು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದಾಗ ಅಬ್ದುಲ್ ಲತೀಫ್ ಮಗುವಿನ ತಂದೆ ಎಂಬುದು ದೃಢಪಟ್ಟಿತ್ತು. ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ-೨ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಆರೋಪಿಯು ತಪ್ಪಿತಸ್ಥನೆಂದು ತೀರ್ಮಾನಿಸಿದರು.

ನೊಂದ ಬಾಲಕಿ ಮತ್ತು ಆಕೆಯ ಮನೆಯವರು ಪೂರಕ ಸಾಕ್ಷ್ಯ ನುಡಿಯದಿದ್ದರೂ ಕೂಡ ಡಿಎನ್‌ಎ ವರದಿ, ವೈದ್ಯಕೀಯ ಪ್ರಮಾಣಪತ್ರ ಮತ್ತು ತನಿಖಾಧಿಕಾರಿಗಳ ಸಾಕ್ಷ್ಯವನ್ನು ಪರಿಗಣಿಸಿ ಆರೋಪಿ ತಪ್ಪಿತಸ್ಥನೆಂದು ನ್ಯಾಯಾಧೀಶರು ತೀರ್ಪು ನೀಡಿದರು. ಪೊಕ್ಸೋ ಕಾಯ್ದೆಯ ಕಲಂ ೬ರಡಿ ಅತ್ಯಾಚಾರ ಕೃತ್ಯಕ್ಕೆ ೧೦ ವರ್ಷ ಕಠಿನ ಸಜೆ ಮತ್ತು ೫೦,೦೦೦ ರೂ. ದಂಡ ಹಾಗೂ ಐಪಿಸಿ ಸೆಕ್ಷನ್ ೫೦೬ರಡಿ ಬೆದರಿಕೆಗೆ ೧ವರ್ಷ ಸಾದಾ ಸಜೆ ಮತ್ತು ೧೦,೦೦೦ ರೂ. ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ಆರೋಪಿಗೆ ಸಹಕರಿಸಿದ ಆರೋಪದಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವತಿಯ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಆದರೆ ಸಾಕ್ಷ್ಯಾಧಾರದ ಕೊರತೆಯಿಂದ ಆಕೆಯನ್ನು ನ್ಯಾಯಾಧೀಶರು ಪ್ರಕರಣದಿಂದ ಬಿಡುಗಡೆಗೊಳಿಸಿದ್ದಾರೆ.

ಸರಕಾರದ ಪರವಾಗಿ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ-೨ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ಸಿ.ವೆಂಕಟರಣ ಸ್ವಾಮಿ ವಾದಿಸಿದ್ದರು. ಇನ್‌ಸ್ಪೆಕ್ಟರ್‌ಗಳಾದ ಪಿ.ಡಿ.ನಾಗರಾಜ್, ಪರಶಿವ ಮೂರ್ತಿ, ಕೆ.ಆರ್.ನಾಯಕ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News