×
Ad

‘ಗಾಂಪನ ಪುರಾಣ’ ಮತ್ತು ‘ರಬೀಂದ್ರ ಕಬಿತೆಲು’ ಪುಸ್ತಕ ಬಿಡುಗಡೆ

Update: 2022-06-22 18:39 IST

ಮಂಗಳೂರು: ಇತರ ದ್ರಾವಿಡ ಭಾಷೆಗಳಂತೆ ತುಳುವಿನಲ್ಲೂ ಇತ್ತೀಚೆಗೆ ಸಾಕಷ್ಟು ಮೌಲಿಕ ಪುಸ್ತಕಗಳು ಪ್ರಕಟವಾಗುತ್ತಿವೆ. ಸಾಹಿತ್ಯದ ಮೂಲಕ ಭಾಷೆ-ಸಂಸ್ಕೃತಿಯ ಪ್ರಸರಣದ ಜೊತೆಗೆ ಸಮಾಜದಲ್ಲಿ ಭಾವೈಕ್ಯ ಮೂಡಿಸುವ ಕೆಲಸಗಳು ಆಗಬೇಕಿದೆ. ಅಂತಹ ಬರಹಗಾರರನ್ನು ಅಕಾಡಮಿ ಪ್ರೋತ್ಸಾಹಿಸಬೇಕಿದೆ. ತುಳುನಾಡಿನ ವಿವಿಧ ಜಾತಿ-ಧರ್ಮಗಳ ಹಬ್ಬ ಹರಿದಿನ ಮತ್ತು ಆಚಾರ ವಿಚಾರಗಳನ್ನು ‘ಗಾಂಪನ ಪುರಾಣ’ ಕೃತಿಯಲ್ಲಿ ಸೊಗಸಾಗಿ ಚಿತ್ರಿಸಲಾಗಿದೆ’ ಎಂದು ಹಿರಿಯ ಜಾನಪದ ವಿದ್ವಾಂಸ ಮತ್ತು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಹೇಳಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಪ್ರಕಟಿಸಿದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರ ‘ಗಾಂಪನ ಪುರಾಣ’  ಪರಪೋಕುದ ಪಟ್ಟಾಂಗ ಮತ್ತು ಡಾ.ವಸಂತಕುಮಾರ್ ಪೆರ್ಲ ಅವರ ‘ರಬೀಂದ್ರ ಕಬಿತೆಲು’ ಕೃತಿಗಳನ್ನು ತುಳು ಭವನದ ಸಿರಿ ಚಾವಡಿಯಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕಲಬುರ್ಗಿ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲ, ಉದ್ಯಮಿ ಎ.ಕೆ.ಜಯರಾಮಶೇಖ ಮುಖ್ಯ ಅತಿಥಿಗಳಾಗಿದ್ದರು.

ತುಳು ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃತಿಕರ್ತರಾದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಡಾ.ವಸಂತ ಕುಮಾರ್ ಪೆರ್ಲ ಅವರನ್ನು ಅಕಾಡಮಿಯ ವತಿಯಿಂದ ಸನ್ಮಾನಿಸಲಾಯಿತು.

ಪಣಿಯಾಡಿ ಕಾದಂಬರಿ ಪ್ರಶಸ್ತಿ ಪುರಸ್ಕೃತೆ ಹಾಗೂ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಿಕೆ ಅಕ್ಷಯ ಆರ್.ಶೆಟ್ಟಿ ಮತ್ತು ಕೇರಳ ತುಳು ಅಕಾಡಮಿಯ ಸದಸ್ಯ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಕೃತಿ ಪರಿಚಯ ಮಾಡಿದರು. ಗಾಯಕ ತೋನ್ಸೆ ಪುಷ್ಕಳ ಕುಮಾರ್  ಗಾಂಪನ ಪುರಾಣದಿಂದ ಆಯ್ದ ಕವಿತೆಯನ್ನು ಹಾಡಿದರು.

ಅಕಾಡಮಿಯ ಸದಸ್ಯರಾದ ಡಾ.ಆಕಾಶ್‌ರಾಜ್ ಜೈನ್, ನಾಗೇಶ್ ಕುಲಾಲ್, ರವಿ ಮಡಿಕೇರಿ, ಸಂತೋಷ್ ಪೂಜಾರಿ, ಚೇತಕ್ ಪೂಜಾರಿ, ವಿಜಯಲಕ್ಷ್ಮಿ ಪಿ.ರೈ ಉಪಸ್ಥಿತರಿದ್ದರು.

ತುಳು ಅಕಾಡಮಿಯ ಸದಸ್ಯ ನರೇಂದ್ರ ಕೆರೆಕಾಡು ಸ್ವಾಗತಿಸಿದರು. ಗಾಯಕಿ ಕಲಾವತಿ ದಯಾನಂದ ಪ್ರಾರ್ಥಿಸಿದರು. ಕಡಬ ದಿನೇಶ್ ರೈ ಕಾರ್ಯಕ್ರಮ ನಿರೂಪಿಸಿದರು. ಸದಸ್ಯೆ ಕಾಂತಿ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News