×
Ad

ಉಳ್ಳಾಲ ಸಮೀಪದ ಸಮುದ್ರದಲ್ಲಿ ಸಿಲುಕಿದ್ದ ಹಡಗು; ಸಿರಿಯಾದ 15 ಪ್ರಜೆಗಳು ಪಣಂಬೂರು ಠಾಣೆಗೆ ಹಾಜರು

Update: 2022-06-22 19:46 IST

ಮಂಗಳೂರು: ಉಳ್ಳಾಲ ಸಮುದ್ರ ತೀರದಿಂದ 5.2 ನಾಟಿಕಲ್ ಮೈಲ್ ದೂರದಲ್ಲಿ ಮಂಗಳವಾರ ಅಪಾಯಕ್ಕೆ ಸಿಲುಕಿದ್ದ ಪ್ರಿನ್ಸಸ್ ಮಿರಾಲ್ ಕಾರ್ಗೋ ಹಡಗಿನಲ್ಲಿದ್ದ ಸಿರಿಯಾ ದೇಶದ 15 ಮಂದಿ ಪ್ರಜೆಗಳನ್ನು ವಲಸೆ ವಿಭಾಗದ ಅಧಿಕಾರಿಗಳು ಪಣಂಬೂರು ಠಾಣೆಗೆ ಹಾಜರುಪಡಿಸಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಸುಮಾರು 8 ಸಾವಿರ ಟನ್ ಸ್ಟೀಲ್ ಕಾಯಿಲ್‌ಗಳನ್ನು ಮಲೇಷ್ಯಾದಿಂದ ಲೆಬನಾನ್‌ಗೆ ಸಾಗಿಸುತ್ತಿದ್ದ ಈ ಹಡಗು ಮಂಗಳವಾರ ಅರಬ್ಬೀ ಸಮುದ್ರದ ಮಧ್ಯೆ ಅಪಾಯಕ್ಕೆ ಸಿಲುಕಿತ್ತು. ಅಂದರೆ ಹಡಗಿನ ತಳಭಾಗದಲ್ಲಿ ರಂಧ್ರ ಉಂಟಾಗಿ ನೀರು ಒಳಪ್ರವೇಶಿಸುತ್ತಿತ್ತು. ಇದರಿಂದ ಹಡಗು ಮುಳುಗಡೆ ಭೀತಿ ಎದುರಿಸುತ್ತಿತ್ತು. ಅಪಾಯದ ಮುನ್ಸೂಚನೆ ಅರಿತ ಹಡಗಿನ ಕ್ಯಾಪ್ಟನ್ ಕೋಸ್ಟ್ ಗಾರ್ಡ್‌ಗೆ ಸಂದೇಶ ರವಾನಿಸಿ ನೆರವು ಕೋರಿದ್ದರು.

ಈ ಹಡಗು ತುಂಬಾ ಹಳೆಯದಾದ ಕಾರಣ ನವ ಮಂಗಳೂರು ಬಂದರು ಪ್ರವೇಶಕ್ಕೆ ಅನುಮತಿ ಸಿಕ್ಕಿರಲಿಲ್ಲ. ಹಾಗಾಗಿ ಸಮುದ್ರಕ್ಕೆ ತೆರಳಿ ಕೋಸ್ಟ್‌ಗಾರ್ಡ್ ಸಿಬ್ಬಂದಿ ಅಪಾಯದಲ್ಲಿ ಸಿಲುಕಿದ್ದ 15 ಮಂದಿಯನ್ನು ರಕ್ಷಿಸಿದ್ದರು.

ಹಡಗು ದುರಸ್ತಿಗೆ ಪ್ರಯತ್ನ: ಸಮುದ್ರದಲ್ಲಿ ಮುಳುಗಡೆ ಭೀತಿ ಎದುರಿಸುತ್ತಿರುವ ಪ್ರಿನ್ಸಸ್ ಮಿರಾಲ್ ಕಾರ್ಗೋ ಹಡಗಿನ ತಳಭಾಗದ ರಂಧ್ರವನ್ನು ಮುಚ್ಚುವ ಬಗ್ಗೆ ಹಡಗಿನ ಏಜೆನ್ಸಿ ಚಿಂತನೆ ನಡೆಸುತ್ತಿದೆ. ಈ ಹಡಗಿನ ಮಾಲಕ ಟರ್ಕಿ ಮೂಲದವರಾಗಿದ್ದು, ಇದರ ಉಸ್ತುವಾರಿ ನೋಡಿಕೊಳ್ಳುತ್ತಿರುವುದು ಮಾರ್ಕಾನ್ ಶಿಪ್ಪಿಂಗ್ ಏಜೆನ್ಸಿಯಾಗಿದೆ. ಈ ಏಜೆನ್ಸಿಯ ಪ್ರತಿನಿಧಿ ಮಂಗಳೂರಿನಲ್ಲಿದ್ದು, ಬಂದರು ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಮುಂಬೈನ ಸ್ಮಿತ್ ಸಾವ್ಲೇಜ್ ಕಂಪನಿಯ ತಜ್ಞರು ಮಂಗಳೂರಿಗೆ ಆಗಮಿಸಿ ಸಮುದ್ರದಲ್ಲಿ ಸಿಲುಕಿರುವ ಹಡಗಿನ ಬಳಿ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಈ ಮಧ್ಯೆ ಸಮುದ್ರ ವಿಕೋಪಕ್ಕೆ ತಿರುಗಿದರೆ ನೌಕೆ ಮುಳುಗಡೆಯಾಗುವುದನ್ನೂ ತಳ್ಳಿ ಹಾಕುವಂತಿಲ್ಲ ಎಂದು ಬಂದರು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಪೊಲೀಸ್ ಠಾಣೆಗೆ ಹಾಜರು: ಕೋಸ್ಟ್‌ಗಾರ್ಡ್‌ನಿಂದ ರಕ್ಷಿಸಲ್ಪಟ್ಟ 15 ಮಂದಿ ಸಿರಿಯಾ ಪ್ರಜೆಗಳನ್ನು ಬುಧವಾರ ಇಮಿಗ್ರೆಷನ್ ವಿಭಾಗದ ಅಧಿಕಾರಿಗಳು ಪಣಂಬೂರು ಪೊಲೀಸ್ ಠಾಣೆಗೆ ಹಾಜರುಪಡಿಸಿದರು.

ಜಿಲ್ಲಾಡಳಿತವು ಸಿರಿಯಾ ಪ್ರಜೆಗಳಿಗೆ ವಾಸ್ತವ್ಯದ ವ್ಯವಸ್ಥೆ ಮಾಡಲಿದೆ. ಅವರನ್ನು ಮರಳಿ ಸಿರಿಯಾಕ್ಕೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಿಲಿದೆ ಎಂದು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಬಂದರು ಅಧಿಕಾರಿಗಳು, ಕೋಸ್ಟ್‌ಗಾರ್ಡ್ ಹಾಗೂ ಕರಾವಳಿ ಕಾವಲು ಪೊಲೀಸರು ಉಳ್ಳಾಲ ಕಡಲ ತೀರದಲ್ಲಿ ಬೀಡುಬಿಟ್ಟಿದ್ದಾರೆ. ಅಲ್ಲಿಂದಲೇ ಮುಳುಗಡೆ ಭೀತಿಯಲ್ಲಿರುವ ಹಡಗಿನತ್ತ ಕಣ್ಗಾವಲು ಇರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News