×
Ad

ಅನುದಾನಿತ ಶಾಲೆಗಳಿಗೆ ವಾರದೊಳಗೆ ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮ: ಬೋಜೇಗೌಡ

Update: 2022-06-22 19:57 IST

ಉಡುಪಿ : ಶಿಕ್ಷಕರ ಕೊರತೆ ಇರುವ ಅನುದಾನಿತ ಶಾಲೆಗಳಿಗೆ ವಿಶೇಷ ಅನುದಾನದಡಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಒಂದು ವಾರದೊಳಗೆ ಆದೇಶ ಹೊರಡಿಸುವ ನಿಟ್ಟಿ ಕ್ರಮ ತೆಗೆದುಕೊಳ್ಳಲಾಗು ವುದು ಎಂದು ವಿಧಾನ ಪರಿಷತ್ ಸದಸ್ಯ ಭೋಜೆಗೌಡ ಹೇಳಿದ್ದಾರೆ.

ಉಡುಪಿ ಸೈಂಟ್ ಸಿಸಿಲಿಸ್ ಶಾಲಾ ಸಭಾಂಗಣದಲ್ಲಿ ಬುಧವಾರ ನಡೆದ ಶಿಕ್ಷಕರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು. ಮಾನ್ಯತೆ ನವೀಕರಣ ಗೊಂದಲವನ್ನು ಕೂಡಲೇ ನಿವಾರಿಸಲಾಗುವುದು. ಈ ಮಧ್ಯೆ ಅಧಿಕಾರಿಗಳು ಕಿರುಕುಳ ನೀಡಿದರೆ ಕಾನೂನು ಹೋರಾಟಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

ಕಾಯಿದೆಗಳನ್ನು ಜಾರಿ ತರುವಾಗ ಆಯಾ ಜಾಗಗಳಲ್ಲಿ ಚರ್ಚೆ ಆಗಬೇಕು. ಕಾರ್ಯರೂಪಕ್ಕೆ ತರುವ ಮೊದಲು ಸಮಾಜಕ್ಕೆ ಒಪ್ಪಿಸಬೇಕು. ತಜ್ಞರು ಆ ಚರ್ಚೆಯಲ್ಲಿ ಭಾಗವಹಿಸಬೇಕು. ಚರ್ಚೆಯಲ್ಲಿ ಸಾಧಕ ಬಾಧಕವನ್ನು ಅರಿತು ಮತ್ತೊಮ್ಮೆ ಪರಿಶೀಲಿಸಿ ಆ ಕಾಯಿದೆಯನ್ನು ಅನುಷ್ಠಾನಗೊಳಿಸಬೇಕು. ಆಗ ಸಂವಿಧಾನದ ಆಶಯಗಳು ಈಡೇರಿದಂತೆ ಆಗುತ್ತದೆ ಎಂದರು.

ಸರಕಾರ ಆರೋಗ್ಯ ಇಲಾಖೆ, ಪೊಲೀಸರು, ಶಿಕ್ಷಕರನ್ನು ಕೋವಿಡ್ ವಾರಿ ಯರ್ಸ್‌ಗಳಾಗಿ ನೇಮಕ ಮಾಡಿದ್ದು, ಇದರಲ್ಲಿ ಮೃತಪಟ್ಟ ಒಂದೇ ಒಂದು ವ್ಯಕ್ತಿಗೂ ಸರಕಾರ 30ಲಕ್ಷ ರೂ. ಪರಿಹಾರ ನೀಡಿಲ್ಲ. ಒಬ್ಬರಿಗೆ 30ಲಕ್ಷ ರೂ. ಪರಿಹಾರ ನೀಡಿರುವ ಉದಾಹರಣೆ ತೋರಿಸಿದರೆ ನಾನು ನನ್ನ ಶಾಸಕತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಅವರು ಸವಾಲು ಹಾಕಿದರು.

ಅಧಿಕಾರಿಗಳಿಂದ ಹುನ್ನಾರ: ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ಇನ್ನು ಕೇಲವೇ ವರ್ಷಗಳಲ್ಲಿ ಮುಚ್ಚಿಸಲು ಉನ್ನತ ಅಧಿಕಾರಿಗಳು ಹುನ್ನಾರ ನಡೆಸುತ್ತಿದ್ದಾರೆ. ಅದಕ್ಕಾಗಿ ಶಿಕ್ಷಕರ ನೇಮಕಾತಿಯನ್ನು ಮಾಡುತ್ತಿಲ್ಲ. ಎಲ್ಲ ಶಿಕ್ಷಕರು ನಿವೃತ್ತಿಯಾದ ಬಳಿಕ ಸಿಬ್ಬಂದಿಗಳಿಲ್ಲ ಎಂಬ ನೆಪ ಹೇಳಿ ಶಾಲೆಯನ್ನು ಮುಚ್ಚುವಂತೆ ಮಾಡ ಲಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ತಮಿಳುನಾಡು ಶಾಲೆಯಲ್ಲಿ ನಡೆದ ಅಗ್ನಿ ದುರಂತಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಎಲ್ಲ ಶಾಲೆಗಳಲ್ಲಿ ಫೈಯರ್ ಸೇಫ್ಟಿ ನಿಯಮ ಅಳವಡಿಸುವಂತೆ ಆದೇಶ ಹೊರಡಿಸಿತ್ತು. ಆ ಆದೇಶ ಬಂದು ತುಂಬಾ ವರ್ಷಗಳಾಗಿದೆ. ಅದನ್ನು ಪರಿಪಾಲನೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಈ ಸಂಬಂಧ ರಚಿಸಿದ ಸಮಿತಿ ನೀಡಿದ ವರದಿಯನ್ನು ಸರಕಾರ ಅನುಷ್ಠಾನ ಮಾಡಿಲ್ಲ. ಈ ಸಮಿತಿ ಯೊಂದಿಗೆ ಚರ್ಚಿಸದೆ ಹೊಸ ಆದೇಶ ಹೊರಡಿಸಿ ಶಾಲೆಗಳಿಗೆ ತೊಂದರೆ ನೀಡುವ ಕೆಲಸ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗೋವಿಂದ ಮಡಿವಾಳ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅರುಣ್ ಕುಮಾರ್ ಶೆಟ್ಟಿ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಜಯಶೀಲ ಶೆಟ್ಟಿ, ಪ್ರಾಥಮಿಕ ಅನುದಾನಿತ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಡಯಟ್ ಉಪನ್ಯಾಸಕ ಚಂದ್ರ ನಾಯ್ಕ್, ಸೈಂಟ್ ಸಿಸಿಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರೀತಿ ಸಿಸ್ಟರ್ ಉಪಸ್ಥಿತರಿದ್ದರು.

ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕಿರಣ್ ಹೆಗ್ಡೆ ಸ್ವಾಗತಿಸಿದರು. ಜಿಲ್ಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಪ್ರಭಾಕರ್ ಶೆಟ್ಟಿ ಕೊಂಡಾಳಿ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಪ್ರೇಮಾನಂದ ವಂದಿಸಿದರು.

ಮಲತಾಯಿ ಧೋರಣೆ: ಶಿಕ್ಷಕರ ಅಳಲು

ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಅತಿಥಿ ಶಿಕ್ಷಕರನ್ನು ಕೂಡ ನೇಮಕ ಮಾಡುತ್ತಿಲ್ಲ. ಇದರಿಂದ ಒತ್ತಡದಿಂದ ಕೆಲಸ ನಿರ್ವಹಿಸಬೇಕಾಗಿದೆ. ಸರಕಾರಿ, ಅನುದಾನ, ಅನುದಾನ ರಹಿತ ಶಾಲೆಗಳ ನಡುವೆ ಮಲತಾಯಿ ಧೋರಣೆ ತೋರಿಸದೆ ಸಮಾನವಾಗಿ ಕಾಣಬೇಕೆಂದು ಶಿಕ್ಷಕರು ಆಗ್ರಹಿಸಿದರು.,

ಸರಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳ- ಶಿಕ್ಷಕರ ಅನುಪಾತದಲ್ಲಿನ ತಾರತಮ್ಯವನ್ನು ಸರಿಪಡಿಸ ಬೇಕು. ಅನುದಾನಿತ ಶಾಲೆಗಳ ಮಾನ್ಯತೆ ನವೀಕರಣ ಮಾಡಬೇಕು ಮತ್ತು ಅತಿಥಿ ಶಿಕ್ಷಕರನ್ನು ನೇಮಿಸಿ, ಸಮವಸ್ತ್ರ, ಪ್ರಯಾಣ ಭತ್ಯೆ ನೀಡಬೇಕು. ಖಾಸಗಿ ಶಾಲೆಯವರು ಪಠ್ಯಪುಸ್ತಕಕ್ಕೆ ಶೇ.೧೦೦ ಹಣ ಪಾವತಿಸಿ ದರೂ ಶೇ.೬೦ ಮಾತ್ರ ಪಠ್ಯಪುಸ್ತಕ ಪೂರೈಕೆ ಮಾಡ ಲಾಗಿದೆ. ಒಂದು ವರ್ಷ ವಾದರೂ ಪಠ್ಯ ಪುಸ್ತಕ ಬಂದಿಲ್ಲ ಎಂದು ಶಿಕ್ಷಕರು ಸಭೆಯಲ್ಲಿ ತಮ್ಮ ಸಮಸ್ಯೆ ಗಳನ್ನು ಭೋಜೆಗೌಡರೊಂದಿಗೆ ಹೇಳಿಕೊಂಡರು.

"ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಕುವೆಂಪು, ನಾರಾಯಣಗುರುಗಳ ಪಾಠ ಕೈಬಿಡುವ ಮೂಲಕ ರಾಜಕೀಯ ನಡೆಸಲಾಗುತ್ತಿದೆ. ನಮ್ಮಲ್ಲಿರುವ ಶಿಕ್ಷಣ ತಜ್ಞರು, ನಿವೃತ್ತ ಶಿಕ್ಷಕರನ್ನು ಪರಿಷ್ಕರಣಾ ಸಮಿತಿಯಲ್ಲಿ ನೇಮಕ ಮಾಡಿಕೊಳ್ಳುತ್ತಿದ್ದರೆ ಉತ್ತಮ ಪಾಠ ಪುಸ್ತಕ ತಯಾರಿಸಲು ಸಾಧ್ಯವಾಗುತ್ತಿತ್ತು. ಅದರ ಬದಲು ತಲೆ ಒಳಗೆ ಸೆಗಣಿ ತುಂಬಿಸಿಕೊಂಡವರನ್ನು  ನೇಮಕ ಮಾಡಿರುವುದರಿಂದ ಈ ಎಡವಟ್ಟು ಉಂಟಾಗಿದೆ"
-ಭೋಜೆಗೌಡ, ವಿಧಾನ ಪರಿಷತ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News