ಮಂಗಳೂರು: ಅಖಿಲ ಭಾರತ ಬ್ಯಾರಿ ಪರಿಷತ್‌ನಿಂದ ಸಾಧಕರಿಗೆ ಸನ್ಮಾನ
ಮಂಗಳೂರು : ಡಾಕ್ಟರೇಟ್ ಪದವಿ, ಚಿನ್ನದ ಪದಕ ಪಡೆಯುವುದು ಅಷ್ಟೊಂದು ಸುಲಭವಲ್ಲ. ಮಾಹಿತಿ ತಂತ್ರಜ್ಞಾನ ಯುಗ ಸಾಕಷ್ಟು ಮುಂದುವರಿದಿರುವ ಈ ಕಾಲದಲ್ಲಿ ವಿದ್ಯಾರ್ಥಿಗಳು ಇಂತಹ ಶೈಕ್ಷಣಿಕ ಸಾಧನೆ ಮಾಡುವುದು ಹೆಮ್ಮೆಯ ವಿಚಾರವಾಗಿದೆ. ಸತತ ಕಠಿಣ ಪರಿಶ್ರಮದಿಂದ ಇಂತಹ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಮೂಲಕ ಪ್ರೋತ್ಸಾಹ ನೀಡುವುದು ಸಂಘ ಸಂಸ್ಥೆಗಳ ಕರ್ತವ್ಯವಾಗಿದೆ ಎಂದು ಯೆನೆಪೊಯ ವಿವಿಯ ಇಸ್ಲಾಮಿಕ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಜಾವೆದ್ ಜಮೀಲ್ ಹೇಳಿದರು.
ಅಖಿಲ ಭಾರತ ಬ್ಯಾರಿ ಪರಿಷತ್ (ರಿ) ಇದರ ವತಿಯಿಂದ ನಗರದ ಶ್ರೀನಿವಾಸ ಹೊಟೇಲಿನ ಸಭಾಂಗಣದಲ್ಲಿ ಬುಧವಾರ ನಡೆದ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಅವರು ಸಾಧಕರನ್ನು ಗೌರವಿಸಿದ ಬಳಿಕ ಮಾತನಾಡಿದರು.
ಅಹಿಂದ ದ.ಕ. ಜಿಲ್ಲಾಧ್ಯಕ್ಷ ವಾಸುದೇವ ಬೋಳೂರು ಮಾತನಾಡಿ ಸಿದ್ದರಾಮಯ್ಯ ಅವರ ಅಹಿಂದ ಕ್ಕಿಂತ ಐದು ವರ್ಷ ಮೊದಲೇ ನಾವು ಈ ಸಂಘಟನೆಯನ್ನು ಸ್ಥಾಪನೆ ಮಾಡಿದ್ದೆವು. ದೇಶದಲ್ಲಿ ಈ ಮೂರು ವರ್ಗದವರಲ್ಲಿ ಕೇವಲ ಶೇ 3ರಷ್ಟು ಮಾತ್ರ ಅಧಿಕಾರವಿದೆ. ಹಾಗಾಗಿ ಅಹಿಂದ ವರ್ಗದ ಅಭಿವೃದ್ಧಿಗಾಗಿ ಎಲ್ಲರೂ ಜೊತೆಯಾಗಿ ಹೋರಾಟ ಮಾಡಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಶಾಹುಲ್ ಹಮೀದ್ ಮೆಟ್ರೋ ಕಿರಾಅತ್ ಪಠಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಬ್ಯಾರಿ ಪರಿಷತ್‌ನ ಮಾಜಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭ ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಡಾ.ಧರ್ಮದರ್ಶಿ ಹರಿಕೃಷ್ಣ ಪುನರೂರು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯಿಂದ ಚಿನ್ನದ ಪದಕ ಪಡೆದ ಡಾ.ಲಿಫಾಮ್ ರೋಶನಾರ, ದ.ಕ.ಜಿಲ್ಲಾ ಲಯನ್ಸ್ ಡಿಸಿ ಡಾ.ಸುಮತಿ ಹೆಗ್ಡೆ ಅವರನ್ನು ಗೌರವಿಸಲಾಯಿತು.
ಅಖಿಲ ಭಾರತ ಬ್ಯಾರಿ ಪರಿಷತ್ ಗೌರವ ಅಧ್ಯಕ್ಷ ಯೂಸುಫ್ ವಕ್ತಾರ್, ಕಾರ್ಯದರ್ಶಿ ಹನೀಫ್ ಬಜಾಲ್ ಸನ್ಮಾನ ಪತ್ರ ಸಮರ್ಪಿಸಿದರು. ಬ್ಯಾರಿ ಪರಿಷತ್ ಉಪಾಧ್ಯಕ್ಷ ಇಬ್ರಾಹಿಂ ನಡುಪದವು, ಕಾರ್ಪೊರೇಟರ್ ಅಬ್ದುಲ್ ಲತೀಫ್ ಕಂದಕ್ ಮತ್ತಿತರರು ಉಪಸ್ಥಿತರಿದ್ದರು.
ಬ್ಯಾರಿ ಪರಿಷತ್ ಕೋಶಾಧಿಕಾರಿ ನಿಸಾರ್ ಫಕೀರ್ ಮುಹಮ್ಮದ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಹಕ್ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್ ವಂದಿಸಿದರು.