ಮಂಗಳೂರು| ಸ್ಮಾರ್ಟ್ ಸಿಟಿ, ಗೇಲ್ ಇಂಡಿಯಾ ಕಾಮಗಾರಿಯಿಂದ ಅಲ್ಲಲಿ ಗುಂಡಿ; ಜನರಿಗೆ ಪ್ರಾಣ ಸಂಕಟ

Update: 2022-06-22 17:11 GMT

ಮಂಗಳೂರು: ನಗರದ ವಿವಿಧೆಡೆ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ ಅಲ್ಲಲ್ಲಿ ಅಪಘಾತಗಳಿಗೆ ಕಾರಣವಾಗುತ್ತಿದೆ. ಮಳೆಗಾಲ ಶುರುವಾದ ಮೇಲೆ ಈ ಸಮಸ್ಯೆ ತೀವ್ರಗೊಂಡಿದೆ. ವಿಶೇಷವಾಗಿ ಬೈಕ್ ಸವಾರರು ಅಲ್ಲಲ್ಲಿ ಬಿದ್ದು ಗಾಯಗೊಳ್ಳುವುದು, ಬೈಕ್ ಜಖಂ ಆಗುವುದು ಸಾಮಾನ್ಯವಾಗಿಬಿಟ್ಟಿದೆ.  ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇದ್ದರೆ  ಈ ಅಪಘಾತಗಳು ಜನರ ಬಳಿ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಜನರು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಕಳೆದ ಕೆಲವು ತಿಂಗಳುಗಳಿಂದ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಾಗೂ ಗೇಲ್ ಇಂಡಿಯಾ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ವೇಗ ಪಡೆದುಕೊಂಡಿದ್ದರಿಂದ ವಾಹನ ಸವಾರರು  ವರದಿಯಾಗದ, ಸಣ್ಣಪುಟ್ಟ ಅಪಘಾತಗಳಿಗೆ ಈಡಾಗುವುದು ಹಾಗೂ ರಸ್ತೆಯ ಮಾರಣಾಂತಿಕ ಗುಂಡಿಗೆ ಸಿಲುಕಿ ವಾಹನಗಳಿಗೆ ಹಾನಿಯಾಗುವ ಘಟನೆಗಳು ಮಾಮೂಲಿಯಾಗಿವೆ. ಆದರೆ ಕಾಮಗಾರಿಯಿಂದಾಗಿ ಸೃಷ್ಟಿಯಾಗಿರುವ  ಈ  ಮಾರಣಾಂತಿಕ ಗುಂಡಿಗಳಿರುವಲ್ಲಿ ಸುರಕ್ಷತಾ ಕ್ರಮಕ್ಕೆ  ಅಧಿಕಾರಿಗಳು ಇನ್ನೂ ಮುಂದಾಗಿಲ್ಲ.   

ನಗರದ ವಿವಿಧ ಪ್ರಮುಖ ಜಂಕ್ಷನ್‌ಗಳು ಮತ್ತು ರಸ್ತೆಗಳಲ್ಲಿ ಸ್ಮಾರ್ಟ್ ಸಿಟಿ ಮತ್ತು ಗೇಲ್ ಇಂಡಿಯಾ ಪೈಪ್‌ಲೈನ್ ಕಾಮಗಾರಿಯ ಅಂಗವಾಗಿ ಅಗೆದಿರುವ ಗುಂಡಿಗಳಿವೆ. ಕಾಮಗಾರಿ ಮುಗಿದ ನಂತರ ಅವುಗಳನ್ನು ಮುಚ್ಚದೇ ಬಿಡಲಾಗುತ್ತದೆ. ಕನಿಷ್ಟ, ಆ ಪ್ರದೇಶದ ಸುತ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಕಾಮಗಾರಿಯನ್ನು ಅಪೂರ್ಣವಾಗಿ ಬಿಡಲಾಗಿದೆ.

ಕಾಮಗಾರಿ ಪೂರ್ಣಗೊಂಡ ಸ್ಥಳಗಳಲ್ಲಿ  ಗುಂಡಿಗಳನ್ನು ಕೇವಲ ಮಣ್ಣಿನಿಂದ ಮುಚ್ಚಲಾಗಿದ್ದು, ಮಳೆಗಾಲದಲ್ಲಿ ಅದು ಇಡೀ ರಸ್ತೆಯನ್ನು ಕೊಚ್ಚೆಯಾಗಿಸುತ್ತವೆ. 

ಅಂಬೇಡ್ಕರ್ (ಜ್ಯೋತಿ) ವೃತ್ತ, ಬಲ್ಮಟ್ಟ ಜಂಕ್ಷನ್, ಬೆಂದೂರೆವೆಲ್, ಅತ್ತಾವರ, ಫಳ್ನೀರ್, ಬೋಳಾರ್ ಸೇರಿದಂತೆ ಹಲವೆಡೆ ಇಂತಹ  ಗುಂಡಿಗಳಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಮಳೆಗಾಲದಲ್ಲಿ ಇದು ಇನ್ನಷ್ಟು ಬಿಗಡಾಯಿಸಿದೆ. . ವಿಶೇಷವಾಗಿ ರಾತ್ರಿ ಸಮಯದಲ್ಲಿ ನೀರು ತುಂಬಿದ ಗುಂಡಿಗಳು ಗಮನಕ್ಕೆ ಬರುವುದಿಲ್ಲವಾದ್ದರಿಂದ ಭಾರೀ ಅಪಾಯ ಕಾದಿದೆ. 

ಈ ಹಿಂದೆ ನಗರದಾದ್ಯಂತ ಜನರು ಗೇಲ್ ಇಂಡಿಯಾ ಪೈಪ್‌ಲೈನ್ ಅಳವಡಿಕೆ ಕಾಮಗಾರಿಯಿಂದ ಉಂಟಾದ ಅನಾನುಕೂಲಗಳ ಬಗ್ಗೆ ದೂರು ನೀಡಿದ್ದರು. ಅಲ್ಲದೆ ಅದರ ಅಗೆಯುವಿಕೆ ಕಾರ್ಯಾಚರಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಬೈಕಂಪಾಡಿ ಸೇರಿದಂತೆ ಹಲವಾರು ಸ್ಥಳಗಳು ಮತ್ತು ಇತರ ಪ್ರದೇಶಗಳು ಪೈಪ್‌ಲೈನ್ ಅಳವಡಿಕೆ ಕಾರ್ಯದಿಂದ ತೀವ್ರ ತೊಂದರೆಗೀಡಾಗಿವೆ.

ನಗರದಾದ್ಯಂತ ಹಲವಾರು ಪೊಲೀಸ್ ಬ್ಯಾರಿಕೇಡ್‌ಗಳು ಬಳಕೆಯಾಗದೆ ಬಿದ್ದಿದ್ದರೂ, ಅವುಗಳನ್ನು ನಗರದ ರಸ್ತೆಗಳಲ್ಲಿ ಜನರ ಸುರಕ್ಷತೆಗಾಗಿ ಸಮರ್ಪಕವಾಗಿ ಬಳಸಲು ಪೊಲೀಸ್ ಇಲಾಖೆ ಮತ್ತು ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಅಧಿಕಾರಿಗಳು ವಿಫಲರಾಗಿದ್ದಾರೆ.

ವಾಹನ ಚಾಲಕರು ಜಾಗರೂಕತೆ ವಹಿಸಬೇಕು, ನಿಯಮಗಳನ್ನು ಪಾಲಿಸಬೇಕು.  ಆದರೆಇಂತಹ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ವಾಹನ ಸವಾರರ ಸುರಕ್ಷತೆ ಖಾತರಿ ಪಡಿಸುವುದು ಕೂಡ ಮುಖ್ಯ. ನಗರವನ್ನು ಸ್ಮಾರ್ಟ್ ಸಿಟಿಯಾಗಿಸುವಾಗ ಜನರಿಗೆ ಕೆಲಕಾಲ  ಕೆಲವು  ಅನಾನುಕೂಲತೆ ಆಗುವುದು ಸಹಜ.  ಆದರೆ , ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳದೆ   ಜನರ ಜೀವವನ್ನು ಪಣಕ್ಕಿಡುವುದು ಸ್ಮಾರ್ಟ್ ಹೆಜ್ಜೆ ಅಲ್ಲ ಎಂಬುದು ಜನರ ಅಳಲು. 

ಆದಷ್ಟು ಬೇಗ ಈ ವಿಷಯವನ್ನು ಪರಿಶೀಲಿಸುವುದಾಗಿ ಮತ್ತು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ.   ಸಂಬಂಧಪಟ್ಟ ಏಜೆನ್ಸಿ/ಗುತ್ತಿಗೆದಾರರ ವಿರುದ್ಧ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು
- ಮನಪಾ ಆಯುಕ್ತ, ಅಕ್ಷಯ್ ಶ್ರೀಧರ್  

ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ಕೆಲವು ಗುಂಡಿಗಳು ಸಂಭವಿಸಿವೆ, ಆದರೆ ಹೆಚ್ಚಿನ ಅಪಾಯಕಾರಿ ಮತ್ತು ಆಳವಾಗಿ ಅಗೆಯಲಾದ ಸ್ಥಳಗಳು, ಭೂಗತ ಪೈಪ್‌ಲೈನ್ ಅಳವಡಿಸುತ್ತಿರುವ ಗೇಲ್ ಇಂಡಿಯಾದ ಕಾಮಗಾರಿಯಿಂದ ಸೃಷ್ಟಿಯಾಗಿವೆ.   

- ಅರುಣ್ ಪ್ರಭಾ ಕೆ.ಎಸ್., ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿಯ ಜನರಲ್ ಮ್ಯಾನೇಜರ್

Writer - ಇಸ್ಮಾಯಿಲ್ ಝೋರೇಝ್

contributor

Editor - ಇಸ್ಮಾಯಿಲ್ ಝೋರೇಝ್

contributor

Similar News