ಚೀನಾದ ಗಣಿಗಾರಿಕೆಯಿಂದ ಅಫ್ಘಾನ್ ನ ಪ್ರಾಚೀನ ಬೌದ್ಧನಗರಕ್ಕೆ ಸಂಕಷ್ಟ

Update: 2022-06-22 17:31 GMT
PHOTO CREDIT: Wakil KOHSAR AFP

ಕಾಬೂಲ್, ಜೂ.22: ಚೀನಾ ನಡೆಸುತ್ತಿರುವ ತಾಮ್ರದ ಗಣಿಗಾರಿಕೆಯಿಂದ ಅಫ್ಘಾನ್ ರಾಜಧಾನಿ ಕಾಬೂಲ್ ಬಳಿ ಉನ್ನತ ಶಿಖರಗಳಿಂದ ಕೆತ್ತಿ ರೂಪಿಸಲಾದ ಪ್ರಾಚೀನ ಬೌದ್ಧನಗರ ಈಗ ಶಾಶ್ವತವಾಗಿ ಕಣ್ಮರೆಯಾಗುವ ಅಪಾಯ ಎದುರಿಸುತ್ತಿದೆ ಎಂದು ವರದಿಯಾಗಿದೆ.

  ಗ್ರೀಕ್ ಮತ್ತು ಭಾರತೀಯ ಸಂಸ್ಕೃತಿಗಳ ಸಂಗಮಸ್ಥಳದಲ್ಲಿರುವ ಮೆಸ್ ಅಯಾಂಕ್ ಎಂದು ಕರೆಯಲಾಗುವ ಈ ನಗರದಲ್ಲಿ ಸುಮಾರು 2 ಸಾವಿರ ವರ್ಷ ಪುರಾತನ ಬೌದ್ಧಮಠ, ಸ್ತೂಪಗಳು, ಕೋಟೆಗಳು, ಆಡಳಿತಾತ್ಮಕ ಕಟ್ಟಡಗಳು ಮತ್ತು ವಾಸಸ್ಥಾನಗಳನ್ನು ಪುರಾತತ್ವ ತಜ್ಞರು ಪತ್ತೆಹಚ್ಚಿದ್ದಾರೆ. ನೂರಾರು ಪ್ರತಿಮೆಗಳು, ಹಸಿಚಿತ್ರಗಳು, ಪಿಂಗಾಣಿಗಳು, ನಾಣ್ಯಗಳು ಮತ್ತು ಹಸ್ತಪ್ರತಿಗಳೂ ಇಲ್ಲಿ ಪತ್ತೆಯಾಗಿವೆ. ಮೆಸ್ ಅಯಾಂಕ್ ವಿಶ್ವದ ಅತ್ಯಂತ ಸುಂದರ ಪುರಾತತ್ವ ತಾಣಗಳಲ್ಲಿ ಒಂದು ಎಂದು ಫ್ರಾನ್ಸ್‌ನ ಪುರಾತತ್ವ ತಜ್ಞ ಬಾಸ್ಟಿನ್ ವೆರೊಟ್ಸಿಕೊಸ್ ವರ್ಣಿಸಿದ್ದಾರೆ. ಇಲ್ಲಿ ಪತ್ತೆಯಾಗಿರುವ ಕೆಲವು ವಸ್ತುಗಳು , ಬೌದ್ಧಧರ್ಮದ ಜನನಕ್ಕೂ ಮೊದಲಿನ ಕಂಚಿನ ಯುಗಕ್ಕೆ ಸಂಬಂಧಿಸಿವೆ. ಶತಮಾನಗಳಿಂದ ಕಣ್ಮರೆಯಾಗಿದ್ದ ಈ ನಗರವನ್ನು 1960ರಲ್ಲಿ ಫ್ರಾನ್ಸ್‌ನ  ಭೂವಿಜ್ಞಾನಿ ಅನ್ವೇಷಿಸಿದ್ದ.

ಲೊಗಾರ್ ಪ್ರಾಂತದಲ್ಲಿರುವ ಮೆಸ್ಅಯಾಂಕ್ ನಗರವನ್ನು ಗಾತ್ರ ಮತ್ತು ಮಹತ್ವದಲ್ಲಿ ಮಚು ಪಿಚ್ಚು ಮತ್ತು ಪಾಂಪೈಗೆ ಹೋಲಿಸಬಹುದಾಗಿದೆ. ಸುಮಾರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಈ ನಗರವು ಬೃಹತ್ ಪರ್ವತದ ತಪ್ಪಲಿನಲ್ಲಿದೆ. ಇದರ ಕಂದು ಬಣ್ಣವು ತಾಮ್ರದ ಉಪಸ್ಥಿತಿಯನ್ನು ಸಂಕೇತಿಸಿದೆ. 2007ರಲ್ಲಿ ಈ ಪರ್ವತದಲ್ಲಿ ತಾಮ್ರದ ಗಣಿಗಾರಿಕೆಗೆ ಚೀನಾದ ‘ಮೆಟಲರ್ಜಿಕಲ್ ಗ್ರೂಪ್ ಕಾರ್ಪೊರೇಶನ್(ಎಂಸಿಸಿ) ಇಲ್ಲಿ 30 ವರ್ಷ ಗಣಿಗಾರಿಕೆ ನಡೆಸುವ 3 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ. ಆದರೆ ಹಲವು ಕಾರಣಗಳಿಂದ ಈ ಒಪ್ಪಂದ ಕಾರ್ಯಗತವಾಗಿರಲಿಲ್ಲ. ಆದರೆ 15 ವರ್ಷದ ಬಳಿಕ ಈ ಒಪ್ಪಂದವನ್ನು ಜಾರಿಗೊಳಿಸಲು ಉಭಯ ದೇಶಗಳೂ ಮುಂದಾಗಿವೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಅಧಿಕಾರಕ್ಕೆ ಬಂದಿದ್ದ ತಾಲಿಬಾನ್ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಒಪ್ಪಂದ ಜಾರಿಯ ಮೂಲಕ ಆದಾಯ ಗಳಿಸುವ ಇರಾದೆಯಲ್ಲಿದೆ. ಇದರಿಂದ ಈ ಐತಿಹಾಸಿಕ ನಗರದ ಅಸ್ತಿತ್ವಕ್ಕೆ ಅಪಾಯ ಎದುರಾಗಲಿದೆ ಎಂದು ಪುರಾತತ್ವಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News