ಉಪಕುಲಪತಿ ಅಧ್ಯಕ್ಷತೆಯಲ್ಲಿ ಚಕ್ರತೀರ್ಥ ಸನ್ಮಾನ ರದ್ದು ಪಡಿಸಿ : ಮುನೀರ್ ಕಾಟಿಪಳ್ಳ

Update: 2022-06-23 13:48 GMT

ಮಂಗಳೂರು: ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿ ಈಗಾಗಲೇ ವಿವಾದಕ್ಕೆ ಗುರಿಯಾಗಿ ರಾಜ್ಯಾದ್ಯಂತ ಪ್ರಜ್ಞಾವಂತರ ಆಕ್ರೋಶಕ್ಕೆ ಗುರಿಯಾಗಿರುವ ರೋಹಿತ್ ಚಕ್ರತೀರ್ಥಗೆ ಮಂಗಳೂರಿನಲ್ಲಿ ಸೇವಾಂಜಲಿ ಚಾರಿಟೆಬಲ್ ಟ್ರಸ್ಟ್ ಸಹಕಾರದಲ್ಲಿ ಜೂ.25ರಂದು ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸುವುದು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಜ್ಞಾವಂತರ ಕೆಂಗಣ್ಣಿಗೆ ಗುರಿಯಾಗಿದೆ.

ಉಪಕುಲಪತಿ ಅಧ್ಯಕ್ಷತೆಯಲ್ಲಿ ಚಕ್ರತೀರ್ಥ ಸನ್ಮಾನ ರದ್ದುಪಡಿಸಿ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.

ನಾಡಿನ ಖ್ಯಾತನಾಮರು, ಮಹಾನ್ ಚೇತನಗಳಿಗೆ ಅವಮಾನ ಎಸಗಿರುವ, ನಾಡಗೀತೆಗೆ ಅಪಮಾನ ಎಸಗಿರುವ,  ರಾಜ್ಯದಲ್ಲಿ ಸಾರ್ವತ್ರಿಕ ಆಕ್ರೋಶಕ್ಕೆ ಗುರಿಯಾಗಿರುವ ರೋಹಿತ್ ಚಕ್ರತೀರ್ಥ ಗೆ ಮಂಗಳೂರಿನ ಬಲಪಂಥೀಯ ವೇದಿಕೆಯೊಂದು ಶನಿವಾರ ನಾಗರಿಕ ಸನ್ಮಾನ ನಡೆಸುತ್ತಿದೆ ಎಂಬ ಮಾಹಿತಿ ತಿಳಿದು ಆಘಾತವಾಯಿತು. ಇಡೀ ಕರ್ನಾಟಕ ಈ ವ್ಯಕ್ತಿಯ ವಿರುದ್ಧ ಆಕ್ರೋಶಗೊಂಡಿರುವಾಗ, ಬಸವಣ್ಣ, ಕುವೆಂಪು, ನಾರಾಯಣ ಗುರುಗಳ ಅನುಯಾಯಿಗಳು ಪ್ರತಿಭಟನೆ ನಿರತರಾಗಿರುವ ಸಂದರ್ಭದಲ್ಲಿ ಮಂಗಳೂರಿನಲ್ಲಿ ಇದು ನಡೆಯುತ್ತಿರುವುದು, ಅದರಲ್ಲಿಯೂ ನಾಗರಿಕ ಸನ್ಮಾನದ ಸಭಾಧ್ಯಕ್ಷತೆಯನ್ನು ಮಂಗಳೂರು ವಿವಿಯ ಕುಲಪತಿಗಳಾದ ಮಾನ್ಯ ಯಡಪಡಿತ್ತಾಯರು ವಹಿಸಲಿರುವುದು ಕಂಡು ಮನಸ್ಸಿಗೆ ನೋವಾಗಿದೆ ಎಂದು ಮುನೀರ್ ಕಾಟಿಪಳ್ಳ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುವೆಂಪು, ಅಂಬೆಡ್ಕರ್ ರಂತಹ ಮಹಾ ಚೇತನಗಳನ್ನು ಅವಮಾನಿಸುವ,  ಅತ್ಯಂತ ಕೊಳಕು ಪದಗಳಿಂದ ನಾಡಿನ ಸಾಹಿತಿ  ಬರಹಗಾರರನ್ನು ಟ್ರೋಲ್ ಮಾಡುವುದರಲ್ಲಿ ಕುಖ್ಯಾತಗೊಂಡಿರುವ ವ್ಯಕ್ತಿಯೊಬ್ಬನಿಗೆ ಸನ್ಮಾನ ಮಾಡುವ ಸಭೆಯ ಅಧ್ಯಕ್ಷತೆಯನ್ನು ವಿವಿಯ ಕುಲಪತಿಗಳು ವಹಿಸುತ್ತಾರೆ ಅಂತಾದರೆ ಕನಿಷ್ಟಪಕ್ಷ ಸಾರ್ವಜನಿಕ ಲಜ್ಜೆಯೂ ಈ ನಾಡಿನಲ್ಲಿ ಇಲ್ಲದಾಯಿತೇ ಎಂದು ಚಡಪಡಿಸುವಂತಾಗುತ್ತಿದೆ. ಇದು ಸರಿಯಲ್ಲ. ಮಂಗಳೂರಿನಲ್ಲಿ ಇಂತಹ ಕಾರ್ಯಕ್ರಮ ನಡೆಯುವುದು ಇಡೀ ರಾಜ್ಯದಲ್ಲಿ ನಮ್ಮ ನಗರದ ಘನತೆಗೆ ಕುಂದು ತರುತ್ತದೆ. ಆಯೋಜಕರು ಕಾರ್ಯಕ್ರಮ ಕೈ ಬಿಡಬೇಕು. ಕುಲಪತಿಗಳಾದ ಡಾ. ಯಡಪಡಿತ್ತಾಯ ಅವರು ಈ ಕಾರ್ಯಕ್ರದಲ್ಲಿ ನಾನಿಲ್ಲ ಎಂದು ಹೇಳಬೇಕು. ಅದಾಗಲಿಲ್ಲ ಅಂತಾದರೆ ಮಂಗಳೂರಿನ ಪ್ರಜ್ಞಾವಂತರು, ನಾಗರಿಕ ಸಂಘಟನೆಗಳು ಕಾರ್ಯಕ್ರಮದ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಬೇಕು ಎಂದು ಅವರು ಹೇಳಿದ್ದಾರೆ.

ಯಾರು ಯಾರಿಗೆ ಬೇಕಾದರೂ ಸನ್ಮಾನ, ಅಭಿನಂದನೆ ಮಾಡಬಹುದು. ಅದನ್ನು ಪ್ರಶ್ನೆ, ಪ್ರತಿಭಟನೆ ಮಾಡುವುದು ಸರಿಯಲ್ಲ. ಆದರೆ, ಕಾರ್ಯಕ್ರಮ ಸ್ಥಳೀಯ ಶಾಸಕರ ನೇತೃತ್ವದಲ್ಲಿ ನಡೆಯುತ್ತಿರುವುದು.  ಮಂಗಳೂರು ಕುಲಪತಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು. ಅವರಿಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ವಾತಂತ್ರ್ಯ ಇದೆ. ಆದರೆ ಕುಲಪತಿ ನಿಷ್ಪಕ್ಷಪಾತವಾಗಿರಬೇಕಾದ ಹುದ್ದೆ. ವಿವಿಗಳಲ್ಲಿ ಸೈದ್ಧಾಂತಿಕ ಕಾರ್ಯಕ್ರಮಗಳು ಹಿಂದೆಯೂ ನಡೆದಿದೆ, ನಡೆಯುತ್ತದೆ. ಅದರಲ್ಲೇನೂ ವಿಶೇಷ ಇಲ್ಲ.

ಹುದ್ದೆಯಲ್ಲಿರುವ ಕುಲಪತಿಯವರು ನೇರವಾಗಿ ಎಡಪಂಥೀಯ, ಬಲಪಂಥೀಯ ಎಂಬ ಹಿನ್ನೆಲೆಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಚರ್ಚೆ ಇರುವುದು.  ಕುಲಪತಿಯ ಕೈಕೆಳಗಿನ ವಿವಿಗಳು, ಶಿಕ್ಷಕರು, ವಿದ್ಯಾರ್ಥಿಗಳು ವಿವಿಧ ರೀತಿಯ ಚಿಂತನೆಯುಳ್ಳವರಾಗಿರುತ್ತಾರೆ. ಅಂತಹ ಸಂದರ್ಭದಲ್ಲಿ ಕುಲಪತಿಯೊಬ್ಬರು ತಾನು ಇಂತಹ ಸಿದ್ಧಾಂತಕ್ಕೆ ಸೇರಿದವ ಎಂದು ಗುರುತಿಸಿಕೊಳ್ಳುವುದು ವಿಶ್ವವಿದ್ಯಾನಿಲಯದ ಅಸ್ತಿತ್ವ, ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇಂತಹ ಕಾರ್ಯಕ್ರಮದಿಂದ ಕುಲಪತಿ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿತ್ತು ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಹೆಗಡೆ ಅಭಿಪ್ರಾಯಿಸಿದ್ದಾರೆ.

"ರಾಜ್ಯಪಾಲರಿಂದ ನೇಮಕ ಆಗುವ ಕುಲಪತಿ ನಿಷ್ಪಕ್ಷಪಾತವಾಗಿರಬೇಕು. ತಾನು ನಿರ್ದಿಷ್ಟ ಗುಂಪಿಗೆ ಸೇರಿದವ ಎಂದು ನೇರವಾಗಿ ತೋರಿಸಿಕೊಳ್ಳುವುದು ಒಳ್ಳೆಯ ಲಕ್ಷಣ ಅಲ್ಲ. ಇದು ಸರಿಯಲ್ಲ. ಡಾ. ಯಡಪಡಿತ್ತಾಯ ಇದರಿಂದ ಹಿಂದೆ ಸರಿಯಬೇಕು. ಪಠ್ಯ ಪರಿಷ್ಕರಣೆಯ ಸಂದರ್ಭ ಬ್ರಹ್ಮಶ್ರೀ ನಾರಾಯಣಗುರುಗಳಿಗೆ ಅವಮಾನ ಮಾಡಲಾಗಿದೆ. ಈ ಬಗ್ಗೆ ಗುರುಗಳ ಅಭಿಮಾನಿ ಬಳಗದಿಂದ ಪ್ರತಿಭಟನೆ ನಡೆಯಬಹುದು. ಉಪ ಕುಲಪತಿ ಮತ್ತು ಶಾಸಕರು ಭಾಗವಹಿಸುವುದಾದರೆ, ನಾರಾಯಣ ಗುರುಗಳ ಪಠ್ಯವನ್ನು 10ನೆ ತರಗತಿಯಿಂದ ತೆಗೆದು ಐಚ್ಛಿಕವಾಗಿ  ಬೇಕಾದವರು ಮಾತ್ರ ಓದುವಂತೆ ಮಾಡಿರುವ ಬಗ್ಗೆ ಕುಲಪತಿ ಹಾಗೂ ಭಾಗವಹಿಸುವ ಜನಪ್ರತಿನಿಧಿಗಳು ಕರಾವಳಿ ಜನರಿಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಾಗಿದೆ.  ಅದು ವಿಶ್ವವಿದ್ಯಾನಿಲಯದಿಂದ ಮಾಡುವ ಕಾರ್ಯಕ್ರಮ ಅಲ್ಲ. ಯಾರೋ ಮಾಡುವ ಕಾರ್ಯಕ್ರಮದಲ್ಲಿ ಕುಲಪತಿ ಭಾಗವಹಿಸುತ್ತಿರುವುದು. ಆದರೂ  ಇಂತಹ ಏಕಪಕ್ಷೀಯ ಕಾರ್ಯಕ್ರಮದಲ್ಲಿ ಕುಲಪತಿಯ ಹುದ್ದೆಯಲ್ಲಿರುವವರು, ಜನಪ್ರತಿನಿಧಿಗಳು  ನಾರಾಯಣಗುರು, ಬಸವಣ್ಣ, ಕುವೆಂಪು ಬಗ್ಗೆ ತಮ್ಮ ನಿಲುವನ್ನು ವ್ಯಕ್ತಪಡಿಸಬೇಕಾಗುತ್ತದೆ"

-ಎಂ.ಜಿ. ಹೆಗಡೆ, ಮಂಗಳೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯರು, ಸಾಮಾಜಿಕ ಕಾರ್ಯಕರ್ತರು, ಮಂಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News