"ಸೈಬರ್ ದರೋಡೆಕೋರರ ಜಾಲಕ್ಕೆ ಬೀಳದಿರಿ... ಅಪರಿಚಿತರ ವೀಡಿಯೊ ಕಾಲ್ ಬಂದಾಗ ಇರಲಿ ಎಚ್ಚರ"

Update: 2022-06-23 13:08 GMT
ಸಾಂದರ್ಭಿಕ ಚಿತ್ರ

ಮಂಗಳೂರು: ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ವೀಡಿಯೊ ಕರೆಗಳ ಮೂಲಕ ಬ್ಲ್ಯಾಕ್‌ಮೇಲ್ ಮಾಡಿ ದರೋಡೆ ಮಾಡುವ ಪ್ರವೃತ್ತಿ  ಹೆಚ್ಚುತ್ತಿದ್ದು, ಇದೀಗ ಸೆಕ್ಸ್ ಟಾರ್ಶನ್ (ಲೈಂಗಿಕ ಹಿಂಸೆ) ಮೂಲಕ ಹಣ ಪೀಕಿಸುವ ದಂಧೆಯನ್ನು ಈ ಸೈಬರ್ ದರೋಡೆಕೋರರು ಮಾಡುತ್ತಿದ್ದಾರೆ. ಇಂತಹ ಸೈಬರ್ ಅಪರಾಧ ಜಾಲಕ್ಕೆ ಸುಶಿಕ್ಷಿತರು ಕೂಡಾ ತಮಗರಿವಿಲ್ಲದಂತೆಯೇ ಬಲಿಯಾಗುತ್ತಿರುವುದು ಕಂಡು ಬರುತ್ತಿದೆ. ಈ ಬಗ್ಗೆ ದೂರು ನೀಡಲಾಗದೆ, ನ್ಯಾಯಕ್ಕಾಗಿ ಹೋರಾಟ ನಡೆಸಲೂ ಆಗದೆ ಪರದಾಡುವ ಪರಿಸ್ಥಿತಿಯೂ ಎದುರಾಗುತ್ತಿದೆ.

ಫೇಸ್‌ಬುಕ್‌ನಲ್ಲಿ ಗಣ್ಯರ ಹೆಸರಿನಲ್ಲಿ, ಸಾಮಾಜಿಕವಾಗಿ ಹೆಚ್ಚು ಪ್ರಚಲಿತದಲ್ಲಿರುವ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಹಣ ಕೇಳುವ ದಂಧೆ ಒಂದೆಡೆಯಾದರೆ, ನಕಲಿ ಪ್ರೊಫೈಲ್‌ನೊಂದಿಗೆ ಫೇಸ್‌ಬುಕ್, ಇನ್‌ಸ್ಟ್ರಾಗ್ರಾಂ, ವಾಟ್ಸಾಪ್‌ನಲ್ಲಿ ವೀಡಿಯೋ ಕರೆ ಮಾಡಿ ಬ್ಲ್ಯಾಕ್‌ಮೇಲ್ ಮಾಡುವ ತಂತ್ರ ಹೆಚ್ಚಾಗುತ್ತಿದೆ.

ಈ ವೀಡಿಯೋ ಕರೆಗಳ ಮೂಲಕ ಬ್ಲ್ಯಾಕ್‌ಮೇಲ್ ಮಾಡುವ ದಂಧೆ ಹಲವು ಸಮಯದಿಂದ ನಡೆಯುತ್ತಿದೆ. ಆದರೆ ಇಂತಹ ದರೋಡೆಕೋರರು ಇದೀಗ ಸ್ಥಳೀಯ ಹೆಸರಿನಲ್ಲೇ ನಕಲಿ ಪ್ರೊಫೈಲ್‌ಗಳನ್ನು ರಚಿಸಿಕೊಂಡಿರುತ್ತಾರೆ. ಆ ಹೆಸರಿನಲ್ಲಿಯೇ ಫ್ರೆಂಡ್ಸ್ ರಿಕ್ವೆಸ್ಟ್ ಬಂದಾಗ ಸಾಮಾನ್ಯವಾಗಿ ಹೆಚ್ಚಿನರು ರಿಕ್ವೆಸ್ಟ್ ಸ್ವೀಕರಿಸುತ್ತಾರೆ. ಬಳಿಕ ಪರಿಚಯ ಬೆಳೆದು ಪರಸ್ಪರ ಚಾಟಿಂಗ್ ಕೂಡಾ ಆರಂಭಿಸುತ್ತಾರೆ. ಇನ್ನು ಕೆಲವೊಮ್ಮೆ  ವಾಟ್ಸಾಪ್, ಫೇಸ್‌ಬುಕ್ ಮೂಲಕ ವೀಡಿಯೋ ಕರೆ ಮಾಡುವ ಈ ನಕಲಿಗಳು ವೀಡಿಯೋ ಸ್ಕ್ರೀನ್‌ಶಾಟ್ ತೆಗೆದು, ವೀಡಿಯೋವನ್ನು ಎಡಿಟ್ ಮಾಡಿ ಹಣ ಪೀಕಿಸುವ ದಂಧೆ ಆರಂಭಿಸುತ್ತಾರೆ. ಸಣ್ಣ  ಮೊತ್ತದ ಹಣದಿಂದ ಆರಂಭಿಸಿ ಇದು ಲಕ್ಷಗಟ್ಟಲೆ ಹಣ ದರೋಡೆ ಮಾಡುವ ಮಟ್ಟಕ್ಕೂ ತಲುಪುತ್ತಿದೆ.

‘‘ಈ ಸೈಬರ್ ಖದೀಮರು ಇತ್ತೀಚೆಗೆ ನಕಲಿಯಾಗಿ ಸ್ಥಳೀಯ ಪ್ರೊಫೆಲ್‌ಗಳೊಂದಿಗೆ ಖಾತೆಗಳನ್ನು ಹೊಂದಿರುವುದರಿಂದ ಸಾಕಷ್ಟು ಮಂದಿ ಗೊತ್ತಿಲ್ಲದೆಯೇ ಈ ಬಲೆಗೆ ಬೀಳುತ್ತಿದ್ದಾರೆ. ಮ್ಯೂಚುವಲ್ ಫ್ರೆಂಡ್ಸ್ ಲಿಸ್ಟ್‌ನಲ್ಲಿಯೂ ಇಂತಹ ನಕಲಿ ಪ್ರೊಫೆಲ್‌ಗಳವರು ಇರುವಾಗ ಗೊತ್ತಿಲ್ಲದೆಯೂ ಕೆಲವೊಮ್ಮೆ ಫ್ರೆಂಡ್ಸ್ ರಿಕ್ವೆಸ್ಟ್ ಸ್ವೀಕರಿಸಬಹುದು. ಕೆಲವರಿಗೆ ವಾಟ್ಸಾಪ್ ಕಾಲ್‌ನ ಆಡಿಯೋ ಮತ್ತು ವೀಡಿಯೋ ಕಾಲ್‌ಗಳ ವ್ಯತ್ಯಾಸವೂ ಗೊತ್ತಿರುವುದಿಲ್ಲ. ಯಾವುದೋ ತುರ್ತು ಸಂದರ್ಭಗಳಲ್ಲಿ ಬೆಡ್‌ರೂಂ, ಬಾತ್‌ರೂಂನಲ್ಲಿ ಇರುವಾಗ ಕರೆ ಬಂದಾಗ ಸ್ವೀಕರಿಸಿದರೆ, ಈ ಖದೀಮರು ಒಂದೆರಡು ಸೆಕೆಂಡ್‌ಗಳ ವೀಡಿಯೋವನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ತಂತ್ರವನ್ನು ಆರಂಭಿಸುತ್ತಾರೆ. ಕೆಲವೊಮ್ಮೆ ಬೆತ್ತಲೆಯಾಗಿರಬೇಕೆಂದೇನಿಲ್ಲ. ವೀಡಿಯೋವನ್ನು ಎಡಿಟ್ ಮಾಡಿಯೂ ಬ್ಲ್ಯಾಕ್‌ಮೇಲ್ ಮಾಡಿರುವುದು ಕಂಡು ಬರುತ್ತಿದೆ. ಹಾಗಾಗಿ ಸಾಮಾಜಿಕ ಜಾಲತಾಣಗಳ ಬಳಕೆಯ ಸಂದರ್ಭ ಅದೆಷ್ಟು ಎಚ್ಚರವಾಗಿರುತ್ತೇವೋ ಅಷ್ಟೆ ಸುರಕ್ಷಿತ’’ ಎನ್ನುತ್ತಾರೆ ಮಂಗಳೂರಿನ ಖ್ಯಾತ ಸೈಬರ್ ತಜ್ಞ ಡಾ. ಅನಂತ ಪ್ರಭು.

ಈ ವೀಡಿಯೋ ಕಾಲ್ ದಂಧೆಯಿಂದ ರಕ್ಷಣೆ ಹೇಗೆ?

ಅನಾಮಧೇಯರು, ಅಪರಿಚತರಿಂದ ವೀಡಿಯೋ ಕಾಲ್ ಸ್ವೀಕರಿಸದೇ ಇರುವುದು ಉತ್ತಮ. ವೀಡಿಯೋ ಫ್ರಂಟ್ ಕ್ಯಾಮರಾಕ್ಕೆ ಫ್ರಂಟ್ ಕ್ಯಾಮರಾ ಸ್ಟಿಕರ್ ಹಾಕಿದ್ದಲ್ಲಿ ವೀಡಿಯೋ ಕರೆ ಬಂದಾಗ ಅಗತ್ಯವಿದ್ದಾಗ ಮಾತ್ರವೇ ಕ್ಯಾಮರಾ ಬಳಕೆ ಮಾಡಬಹುದು. ಸ್ಥಳೀಯ ಹೆಸರಿನಲ್ಲಿಯೂ ಬಂದಂತಹ ಫ್ರೆಂಡ್ಸ್ ರಿಕ್ವೆಸ್ಟ್‌ಗಳನ್ನು ಸ್ವೀಕರಿಸುವಾಗ ಎಚ್ಚರಿಕೆ ಅತೀ ಅಗತ್ಯ. ತಪ್ಪಿ ಏನಾದರೂ ಬಲಿಪಶು ಆದಲ್ಲಿ ರಾಷ್ಟ್ರೀಯ ಸೈಬರ್ ಕ್ರೈಮ್ ನಂಬರ್ ೧೯೩೦ಗೆ ಕರೆ ಮಾಡಿ ದೂರು ನೀಡಿ.
*ಡಾ. ಅನಂತ ಪ್ರಭು, ಸೈಬರ್ ತಜ್ಞ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News