ಬದ್ಧತೆ ಇದ್ದರೆ ಸಚಿವರಾದ ಸುನಿಲ್ ಕುಮಾರ್, ಶ್ರೀನಿವಾಸ ಪೂಜಾರಿ ರಾಜೀನಾಮೆ ನೀಡಲಿ: ಬೇಬಿ ಕುಂದರ್

Update: 2022-06-23 13:35 GMT

ಬಂಟ್ವಾಳ, ಜೂ.23: ಹತ್ತನೇ ತರಗತಿಯ ಸಮಾಜ ವಿಜ್ಞಾನದಿಂದ ಕೈಬಿಟ್ಟಿರುವ ಬ್ರಹ್ಮಶ್ರೀ ನಾರಾಯಣ ಗುರು ಅವರ ಪಠ್ಯವನ್ನು ರಾಜ್ಯ ಸರಕಾರ ಇನ್ನೂ ಸೇರ್ಪಡೆ ಮಾಡದಿರುವುದು ಖಂಡನೀಯವಾಗಿದ್ದು ಇದರ ವಿರುದ್ಧ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಬಿಲ್ಲವ ಆರ್ಯ ಈಡಿಗ ಮಹಾ ಸಂಸ್ಥಾನ ಸೇಲೂರು, ಬೆಂಗಳೂರು, ಇದರ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಬೇಬಿ ಕುಂದರ್ ಹೇಳಿದರು. 

ಬಿ.ಸಿ.ರೋಡ್ ಬ್ರಹ್ಮ ಶ್ರೀ ನಾರಾಯಣ ಗುರು ಸಭಾ ಭವನದ ಹಾಲ್ ನಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಲ್ವರ್ಗದ ಸ್ವಾಮೀಜಿಗಳ ಪ್ರತಿಭಟನೆಯ ಎಚ್ಚರಿಕೆಗೆ ಮಣಿದು ಪಠ್ಯ ಪುಸ್ತಕದಲ್ಲಿ ಆಗಿರುವ ಕೆಲವು ಲೋಪದೋಷಗಳನ್ನು ರಾಜ್ಯ ಸರಕಾರ ಸರಿಪಡಿಸಿದೆ. ಆದರೆ ಬ್ರಹ್ಮ ಶ್ರೀ ನಾರಾಯಣ ಗುರು ಅವರ ಪಠ್ಯವನ್ನು ಸೇರಿಸದೆ ಶೋಷಿತ, ಹಿಂದುಳಿದ ವರ್ಗದ ಜನರ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದೆ ಎಂದರು.

ರಾಜ್ಯ ಸರಕಾರ ಸಮಾಜ ವಿಜ್ಞಾನದಿಂದ ನಾರಾಯಣ ಗುರು ಅವರ ಪಠ್ಯವನ್ನು ಕಿತ್ತು ಹಾಕಿದ್ದರೂ ಬಿಲ್ಲವ ಸಮಾಜದ ಇಬ್ಬರು ಸಚಿವರಾದ ಸುನಿಲ್ ಕುಮಾರ್ ಮತ್ತು ಶ್ರೀನಿವಾಸ ಪೂಜಾರಿ ಅಧಿಕಾರದ ಆಸೆಗಾಗಿ ಮೌನವಾಗಿದ್ದಾರೆ. ಅಲ್ಲದೆ ಸುಳ್ಳು ಹೇಳಿಕೆ ನೀಡಿ ಸಮುದಾಯದ ಜನರ ದಾರಿ ತಪ್ಪಿಸುತ್ತಿದ್ದಾರೆ. ಇಬ್ಬರು ಸಚಿವರಿಗೆ ಸಮುದಾಯದ ಮೇಲೆ ಬದ್ಧತೆ ಎಂಬುದು ಇದ್ದರೆ ಪಠ್ಯವನ್ನು ಸೇರಿಸುವ ಕೆಲಸ ಮಾಡಲಿ. ಇಲ್ಲದಿದ್ದರೆ ಇಬ್ಬರೂ ತಕ್ಷಣ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದರು. 

ರಾಜ್ಯದಲ್ಲಿ ಈಡಿಗ ಸಮುದಾಯದ 26 ಉಪ ಜಾತಿಗಳು ಇದ್ದು ಜನಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇದ್ದೇವೆ. ಸಮಾಜ ವಿಜ್ಞಾನದಲ್ಲಿ ನಾರಾಯಣ ಗುರು ಅವರ ಪಠ್ಯ ಸೇರಿಸದಿದ್ದರೆ ಜೂ.25ರಂದು ಎಲ್ಲರನ್ನು ಒಟ್ಟು ಸೇರಿಸಿ ಹೋರಾಟದ ಬಗ್ಗೆ ರೂಪುರೇಷೆ ನಡೆಸಲಾಗುವುದು. ಈ ಬಗ್ಗೆ ಸಮುದಾಯದ ಸ್ವಾಮೀಜಿಗಳ ಜೊತೆ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು. 

ಕಳೆದ ವರ್ಷ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅವರ ಸ್ತಬ್ಧ ಚಿತ್ರವನ್ನು ನಿರಾಕರಿಸಿ ಕೇಂದ್ರ ಸರಕಾರ ಗುರುಗೆ ಮಾಡಿರುವ ಅವಮಾನವನ್ನು ಸಮಾಜ ಜನರು ಇನ್ನೂ ಮರೆತಿಲ್ಲ. ಆ ನೋವು ಇನ್ನೂ ಇದೆ. ಇದೀಗ ಮತ್ತೆ ಬಿಜೆಪಿ ಸರಕಾರ ಗುರು ಅವರ ಪಠ್ಯವನ್ನು ಕೈಬಿಡುವ ಮೂಲಕ ಮತ್ತೆ ಅವಮಾನ ಮಾಡಿದೆ. ಇಂತಹ ಕೆಲಸವನ್ನು ಇನ್ನೂ ಸಹಿಸಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.  

ಸುದ್ದಿಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ಸೇಸಪ್ಪ ಕೋಟ್ಯಾನ್, ಮಾಯಿಲಪ್ಪ ಸಾಲ್ಯಾನ್, ಜಯಂತಿ ಪೂಜಾರಿ, ಜಗದೀಶ್ ಕೊಯಿಲ, ವಾಸುಪೂಜಾರಿ, ದಿನೇಶ್ ಸುಂದರ ಶಾಂತಿ, ಸುಂದರ ಪೂಜಾರಿ, ರಂಜಿತ್ ಪೂಜಾರಿ, ನಾರಾಯಣ ಸಾಲ್ಯನ್ , ಲೋಕೇಶ್ ಸುವರ್ಣ, ಅಶೋಕ ಪೂಜಾರಿ, ಪ್ರೇಮನಾಥ್, ಶೈಲಜಾ ರಾಜೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News