14 ಪಂದ್ಯಗಳಲ್ಲಿ ಒಂದು ಅರ್ಧಶತಕ ಕೂಡಾ ಗಳಿಸದಿದ್ದರೆ...?

Update: 2022-06-24 02:37 GMT
ರೋಹಿತ್ ಶರ್ಮಾ (ಫೋಟೊ: BCCI/Twitter)

ಮುಂಬೈ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಅವರ ಫಾರ್ಮ್ ಬಗ್ಗೆ ದೇಶದ ಕ್ರಿಕೆಟ್ ವಲಯದಲ್ಲಿ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ.

ಆಕರ್ಷಕ ಹೊಡೆತಗಳಿಗೆ ಹೆಸರಾಗಿರುವ ಬಲಗೈ ಬ್ಯಾಟರ್ ಇದೀಗ, 2008ರಲ್ಲಿ ಮೊದಲ ಆವೃತ್ತಿಯ ಐಪಿಎಲ್ ಆರಂಭವಾದ ಬಳಿಕ ತಮ್ಮ ವೃತ್ತಿ ಜೀವನದಲ್ಲೇ ಅತ್ಯಂತ ಕಳಪೆ ಫಾರ್ಮ್‍ನಲ್ಲಿದ್ದಾರೆ. ಪ್ರಸಕ್ತ ಸಾಲಿನ ಐಪಿಎಲ್‍ನಲ್ಲಿ ರೋಹಿತ್ ಶರ್ಮಾ 14 ಪಂದ್ಯಗಳಲ್ಲಿ ಕೇವಲ 248 ರನ್ ಗಳಿಸಿದ್ದು, 19.14 ಸರಾಸರಿಯೊಂದಿಗೆ 120.17 ಸ್ಟ್ರೈಕ್‍ರೇಟ್ ಹೊಂದಿದ್ದಾರೆ.‌

ಐದು ಬಾರಿ ಐಪಿಎಲ್ ಕಿರೀಟ ಗೆದ್ದಿರುವ ರೋಹಿತ್ ನೇತೃತ್ವದ ತಂಡ ಈ ಬಾರಿ ಅಂಕ ಪಟ್ಟಿಯಲ್ಲಿ ಕಟ್ಟಕಡೆಯ ಸ್ಥಾನಕ್ಕೆ ಕುಸಿದಿದೆ. ನಾಯಕರಾಗಿ ವಿದೇಶದಲ್ಲಿ ತಂಡವನ್ನು ಮುನ್ನಡೆಸಲು ರೋಹಿತ್ ಸಜ್ಜಾಗಬೇಕಿದೆ. ಪರಿಷ್ಕೃತ ವೇಳಾಪಟ್ಟಿಯಂತೆ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಐದನೇ ಹಾಗೂ ಅಂತಿಮ ಟೆಸ್ಟ್ ಬರ್ಮಿಂಗ್‍ಹ್ಯಾಮ್‍ನಲ್ಲಿ ಜುಲೈ 1ರಂದು ನಡೆಯಲಿದೆ.

ಇಂಗ್ಲೆಂಡ್‍ನಲ್ಲಿ ನಡೆದ ಮೊದಲ ನಾಲ್ಕು ಟೆಸ್ಟ್ ಗಳಲ್ಲಿ ಒಂದು ಶತಕ ಹಾಗೂ ಎರಡು ಅರ್ಧಶತಕ ಸೇರಿದಂತೆ 368 ರನ್ ಗಳಿಸಿರುವ ರೋಹಿತ್ ಯಾವುದೇ ಪಿಚ್‍ಗಳಲ್ಲಿ ಕೂಡಾ ರನ್ ಗಳಿಸಬಲ್ಲ ಸಾಮರ್ಥ್ಯ ಹೊಂದಿರುವವರು. ಆದರೆ ಇತ್ತೀಚೆಗೆ ಅವರ ಬ್ಯಾಟಿಂಗ್ ಬಗ್ಗೆ ಆಕ್ಷೇಪಗಳು ಕೇಳಿ ಬರುತ್ತಿವೆ.

ಮಾಜಿ ನಾಯಕ ಕಪಿಲ್ ದೇವ್ ಇದೀಗ ರೋಹಿತ್ ಶರ್ಮಾ ಅವರ ಫಾರ್ಮ್ ಪ್ರಶ್ನಿಸಿದ್ದು, ಭಾರತದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ರೋಹಿತ್ ಶರ್ಮಾ ಇರಬೇಕಿತ್ತು. ಯಾರಿಗೆ ವಿಶ್ರಾಂತಿ ನೀಡಲಾಗಿದೆ, ಯಾರು ವಿಶ್ರಾಂತಿ ಕೇಳಿದ್ದಾರೆ ಎನ್ನುವುದು ನಮ್ಮ ಆಯ್ಕೆಗಾರರಿಗಷ್ಟೇ ಗೊತ್ತು ಎಂದು ಅನ್‍ಕಟ್‍ನಲ್ಲಿ ಹೇಳಿದ್ದಾರೆ.

"ರೋಹಿತ್ ಅದ್ಭುತ ಆಟಗಾರ ಎನ್ನುವುದು ನಿಸ್ಸಂದೇಹ. ಆದರೆ 14 ಪಂದ್ಯಗಳಲ್ಲಿ ಒಂದು ಅರ್ಧಶತಕ ಕೂಡಾ ಗಳಿಸದಿದ್ದಾಗ ಪ್ರಶ್ನೆ ಏಳುತ್ತದೆ. ಅದು ಗ್ಯಾರಿ ಸೋಬರ್ಸ್, ಡಾನ್ ಬ್ರಾಡ್‍ಮನ್, ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ಗಾವಸ್ಕರ್ ಅಥವಾ ವಿವ್ ರಿಚಡ್ರ್ಸ್ ಯಾರೇ ಇರಬಹುದು. ಏನಾಗುತ್ತಿದೆ ಎಂಬ ಪ್ರಶ್ನೆಗೆ ರೋಹಿತ್ ಅವರೇ ಉತ್ತರಿಸಬೇಕು. ಬಹಳಷ್ಟು ಪಂದ್ಯಗಳು ಇದಕ್ಕೆ ಕಾರಣವೇ ಅಥವಾ ಆಟವನ್ನು ಆಸ್ವಾದಿಸುವುದನ್ನು ಅವರು ನಿಲ್ಲಿಸಿದ್ದಾರೆಯೇ?" ಎಂದು ಕಪಿಲ್‍ ದೇವ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News