598 ಕೋಟಿ ರೂ. ಕಾಮಗಾರಿಗಳ ತನಿಖೆಯಾಗಲಿ: ಐವನ್ ಡಿಸೋಜಾ

Update: 2022-06-24 07:10 GMT

ಮಂಗಳೂರು: ನಗರದ ಸೌಂದರ್ಯೀಕರಣ, ಅಭಿವೃದ್ಧಿ ಉದ್ದೇಶದಿಂದ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆ ಯಡಿ ಮಂಗಳೂರಿನಲ್ಲಿ ಕಳೆದ ಮೂರೂವರೆ ವರ್ಷದಲ್ಲಿ ಪೂರ್ಣಗೊಂಡಿರುವ ಒಂದು ಕಾಮಗಾರಿಯನ್ನು ತೋರಿಸಿ ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ ಮನಪಾ ಆಯುಕ್ತರಿಗೆ ಸವಾಲು ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 598 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಸ್ಮಾರ್ಟ್ ಸಿಟಿ ಯೋಜನೆಯಡಿ ಕೇವಲ ಚರಂಡಿಗಳನ್ನು ತೆಗೆಯುವುದು, ಕಟ್ಟುವುದು ಬಿಟ್ಟು ಬೇರೇನೂ ನಗರದಲ್ಲಿ ನಡೆಯುತ್ತಿಲ್ಲ. ಎಲ್ಲಾ ಕಾಮಗಾರಿಗಳು ಅರ್ಧಂಬರ್ಧವಾಗಿವೆ. ಹಾಗಾಗಿ ಈವರೆಗೆ ಆಗಿರುವ ಕಾಮಗಾರಿಗಳ ಖರ್ಚು ವೆಚ್ಚಗಳ ತನಿಖೆ ಅಗತ್ಯವಾಗಿದೆ. ಜತೆಗೆ ಸ್ಮಾರ್ಟ್ ಸಿಟಿ ಯೋಜನೆಯ ಕುರಿತಂತೆ ಮನಪಾ ಶ್ವೇತಪತ್ರವನ್ನು ಸಾರ್ವಜನಿಕರ ಮುಂದಿಡಬೇಕು ಎಂದು ಆಗ್ರಹಿಸಿದರು.

ಸ್ಮಾರ್ಟ್ ಸಿಟಿ ಯೋಜನೆ ಆರಂಭಕ್ಕೆ ಮುನ್ನ ಯೋಜನೆಯಲ್ಲಿ ಮಾಡಬೇಕಾದ ಕಾಮಗಾರಿಗಳ ಕುರಿತು ಸಾರ್ವಜನಿಕರ ಅಭಿಪ್ರಾಯವನ್ನು ನನ್ನ ಕಚೇರಿಯಲ್ಲಿ ಸಂಗ್ರಹಿಸಲಾಗಿತ್ತು. 800 ಜನರ ಅಭಿಪ್ರಾಯ ಪಡೆದು ಯಾವ ಕಾಮಗಾರಿ ಸೂಕ್ತ ಎಂಬುದನ್ನು ಪುಸ್ತಕ ರೂಪದಲ್ಲಿ ಅಂದಿನ ಪಾಲಿಕೆ ಆಯುಕ್ತರಿಗೆ ನೀಡಲಾಗಿತ್ತು. ಆದರೆ ಕಾಮಗಾರಿಗಳು ಆರಂಭವಾಗಿ ಆರು ವರ್ಷದವಾದರೂ ಜನಾಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಕಾಮಗಾರಿಗಳು ನಡೆಯುತ್ತಿವೆ. ಕಾಮಗಾರಿಯ ಅವಾಂತರದ ಬಗ್ಗೆ ಪ್ರಶ್ನಿದಾಗ ಅದು ಗೇಲ್ ಕಾಮಗಾರಿ, ಜಲಸಿರಿ ಕಾಮಗಾರಿ ಎನ್ನಲಾಗುತ್ತಿದೆ. ಹಂಪನಕಟ್ಟದಲ್ಲಿ ರಸ್ತೆ ಅಗಲೀಕರಣಕ್ಕೆ ಸಾಕಷ್ಟು ಜಾಗವನ್ನು ಸ್ವಾಧೀನಪಡಿಸಲಾಗಿದೆ. ಆದರೆ ಈಗ ಪಾರ್ಕ್, ಅಸಂಬಂಧ ಸರ್ಕಲ್, ವೇಗ ತಡೆ ಕಾಮಗಾರಿಗಳ ಮೂಲಕ ರಸ್ತೆಗಳನ್ನು ಕಿರಿದಾಗಿಸಲಾಗುತ್ತಿದೆ. ಕೇಳಿದರೆ ಇವೆಲ್ಲಾ ಪ್ರಾಯೋಗಿಕ ಎನ್ನುತ್ತಿದ್ದಾರೆ. ಯಾವ ತಂತ್ರಜ್ಞಾನ ಇವರದ್ದು ಎಂಬುದೇ ಅರ್ಥ ಆಗುತ್ತಿಲ್ಲ. ಕದ್ರಿ ಪಾರ್ಕ್ ಅಭಿವೃದ್ಧಿ ಮಾಡಿರುವುದು ಜನರಿಗಾಗಿ. ಆದರೆ ಅಲ್ಲಿ ಬರುವ ಜನರಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ ಎಂದು ಅವರು ಆಕ್ಷೇಪಿಸಿದರು.

ನಗರದಲ್ಲಿ 420 ಸರ್ವಿಸ್ ಬಸ್ಸುಗಳು ದಿನಕ್ಕೆ ಸುಮಾರು 1700 ಟ್ರಿಪ್, 235 ಸಿಟಿ ಬಸ್ಸುಗಳು 700 ಟ್ರಿಪ್, 180 ಕೆಎಸ್‌ಆರ್‌ಟಿಸಿ ಬಸ್ಸುಗಳು 500 ಟ್ರಿಪ್, 60 ಕಾಂಟ್ರಾಕ್ಟ್ ಕ್ಯಾರಿಯೇಜ್ ಬಸ್ಸುಗಳು 180 ಟ್ರಿಪ್ ಸೇರಿ ನಗರದ ಒಳಗಡೆ ದಿನಕ್ಕೆ ಸುಮಾರು 900 ಬಸ್ಸುಗಳು ಅಂದಾಜು 4000 ಟ್ರಿಪ್‌ಗಳನ್ನು ನಡೆಸುತ್ತವೆ. ಆದರೆ ಸೂಕ್ತ ಬಸ್ಸು ನಿಲ್ದಾಣವಾಗಲಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಇಲ್ಲ ಎಂದು ಅವರು ದೂರಿದರು.

ಗೋಷ್ಠಿಯಲ್ಲಿ ಭಾಸ್ಕರ್, ಅಲಿಸ್ಟನ್ ಡಿಕುನ್ನ, ಸಲೀಂ ಮುಕ್ಕ, ಸಿ. ಮುಸ್ತಫಾ, ಹುಸೇನ್ ಕುಳೂರು, ವಿಕಾಸ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಅಗ್ನಿಪಥ್ ಯುವಕರ ಭವಿಷ್ಯಕ್ಕೆ ಕಂಟಕ

"ಕೇಂದ್ರ ಸರಕಾರದ ಅಗ್ನಿಪಥ್ ಯೋಜನೆ ಯುವಕರ ಭವಿಷ್ಯಕ್ಕೆ ಕಂಟಕವಾಗಿದೆ. 18 ವರ್ಷ ಪ್ರಾಯದ ಯುವಕರು ಸೇನೆಗೆ ಸೇರಿದ್ದಲ್ಲಿ ಅವರ ಶಿಕ್ಷಣದ ಹಕ್ಕು ಮೊಟಕುಗೊಳ್ಳಲಿದೆ. ಸೇನೆಯಲ್ಲಿ ಸುಮಾರು ನಾಲ್ಕು ವರ್ಷಗಳ ಬಳಿಕ ಹೊರ ಬರಲಿರುವ ಶೇ. 75ರಷ್ಟು ಮಂದಿಯ ಭವಿಷ್ಯಕ್ಕೆ ಪೂರಕ ಭದ್ರತೆಯನ್ನು ಈ ಯೋಜನೆಯಲ್ಲಿ ಸ್ಪಷ್ಟಪಡಿಸಿಲ್ಲ. ಇದರಿಂದ ಅವರು ಮುಂದಿನ ಭವಿಷ್ಯಕ್ಕೆ ಉದ್ಯೋಗಕ್ಕಾಗಿ ಏನು ಮಾಡಬೇಕು? ಪಿಯುಸಿ ವಿದ್ಯಾರ್ಹತೆಯಲ್ಲಿ ಅವರು ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವೇ? ಎಂಬ ಪ್ರಶ್ನೆಗಳಿಗೆ ಈ ಯೋಜನೆಯಲ್ಲಿ ಉತ್ತರವಿಲ್ಲ. ಹಾಗಾಗಿ   ಇದನ್ನು ವಿರೋಧಿಸಿ ಎಐಸಿಸಿ, ಕೆಪಿಸಿಸಿ ಮಾರ್ಗದರ್ಶನದಂತೆ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಜೂ. 27ರಂದು ಸತ್ಯಾಗ್ರಹ ನಡೆಯಲಿದೆ. ರಾಜ್ಯದ ವಿಧಾನಸಬಾ ಕಾರ್ಯದರ್ಶಿಗಳು ಉಪಸ್ಥಿತರಿದ್ದು, ಸತ್ಯಾಗ್ರಹ ನಡೆಸುವಂತೆ ಸೂಚನೆ ನೀಡಲಾಗಿದೆ. ಶಿರಸಿಯ ಸತ್ಯಾಗ್ರಹದಲ್ಲಿ ನಾನು ಭಾಗವಹಿಸಲಿದ್ದೇನೆ".
-ಐವನ್ ಡಿಸೋಜಾ, ವಿಧಾನ ಪರಿಷತ್ ಮಾಜಿ ಸದಸ್ಯರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News