ಕೊರಿಯಾದ ಯುದ್ಧವೂ, ಕಳೆದು ಹೋದ ಪ್ರೀತಿಯೂ!

Update: 2022-06-24 07:05 GMT

ಕೆಲವೊಮ್ಮೆ ನಾವು ಅತಿಯಾಗಿ ಬಯಸುವುದು ಪ್ರೀತಿಯನ್ನೇ. ನಾವದನ್ನು ಸಂಗಾತಿಯ ಬೆಚ್ಚಗಿನ ಅಪ್ಪುಗೆಯಲ್ಲೋ, ಗೆಳೆಯರ ಚೇಷ್ಟೆಯಲ್ಲೋ, ಅಪ್ಪನ ಗದರುವಿಕೆಯಲ್ಲೋ, ಅಮ್ಮನ ಮಡಿಲಿನ ಆಸರೆಯಲ್ಲೋ ಅಥವಾ ಇಷ್ಟದ ತಿನಿಸಿನಲ್ಲೋ ಆಗಾಗ ಹುಡುಕುತ್ತೇವೆ. ಅದಕ್ಕಾಗಿ ಕೆಲವೊಮ್ಮೆ ಹಾತೊರೆಯುತ್ತೇವೆ. ಅದು ಕಾಣದೆ ಇದ್ದಾಗ ಸೊರಗುತ್ತೇವೆ. ಅಷ್ಟಕ್ಕೂ ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರು ‘‘ಪ್ರೀತಿ ಇಲ್ಲದ ಮೇಲೆ -ಹೂವು ಅರಳೀತು ಹೇಗೆ? ಮೋಡ ಕಟ್ಟೀತು ಹೇಗೆ? ಹನಿಯೊಡೆದು ಕೆಳಗಿಳಿದು ನೆಲಕ್ಕೆ ಹಸಿರು ಮೂಡೀತು ಹೇಗೆ?’’ ಎಂದು ಸುಮ್ಮನೆ ಹೇಳಿದ್ದಾರೆಯೇ! ಪ್ರಾಚೀನ ಗ್ರೀಕ್ ತತ್ವಜ್ಞಾನಿಗಳು ಕೌಟುಂಬಿಕ ಪ್ರೀತಿ, ಸ್ನೇಹಪರ ಪ್ರೀತಿ, ಪ್ರಣಯ ಪ್ರೀತಿ (ಇರೋಸ್), ಸ್ವ-ಪ್ರೀತಿ (ಫಿಲೌಟಿಯಾ), ಅತಿಥಿ ಪ್ರೀತಿ (ಕ್ಸೆನಿಯಾ) ಮತ್ತು ದೈವಿಕ ಪ್ರೀತಿ (ಅಗಾಪೆ) ಎಂದು ಪ್ರೀತಿಯ ಆರು ಪ್ರಕಾರಗಳನ್ನು ಗುರುತಿಸಿದ್ದಾರಂತೆ. ಪ್ರತಿಯೊಬ್ಬರೂ ತಮ್ಮ ಕಾಲ ಘಟ್ಟದಲ್ಲಿ ಈ ಎಲ್ಲ ರೀತಿಯ ಪ್ರೀತಿಯ ಬಾಹುವಿನಲ್ಲಿ ಒಮ್ಮೆಯಾದರೂ ಬಂಧಿಯಾಗುತ್ತಾರೆಂಬುದು ಎಷ್ಟು ಸತ್ಯ ಅಲ್ಲವೇ ?

ಅಂತರ್ಜಾಲವನ್ನು ತಡಕಾಡುತ್ತಿದ್ದಾಗ ಒಂದು ಸುದ್ದಿ ನನ್ನನ್ನು ಬಹುವಾಗಿ ಸೆಳೆಯಿತು. 1953ರಲ್ಲಿ ನಡೆದ ಒಂದು ಪ್ರೇಮ ಕಥೆಯ ಬಗ್ಗೆ ಇದ್ದ ಸುದ್ದಿ ಅದು. ಇದು ನಡೆದದ್ದು ಜಪಾನಿನಲ್ಲಿ. 1950-53ರವರೆಗೆ ನಡೆದ ಕೊರಿಯಾದ ಯುದ್ಧದಲ್ಲಿ ಉತ್ತರ ಕೊರಿಯಾಕ್ಕೆ ಚೀನಾ ಮತ್ತು ಸೋವಿಯತ್ ಒಕ್ಕೂಟ ಬೆಂಬಲ ನೀಡಿದರೆ, ಅಮೆರಿಕ ದಕ್ಷಿಣ ಕೊರಿಯಾಗೆ ಬೆಂಬಲ ನೀಡಿತ್ತು. ಈ ಸಂದರ್ಭದಲ್ಲಿ ಬೆಂಬಲ ಪಡೆಯೊಂದಿಗೆ ಬಂದವರಲ್ಲಿ ಅಮೆರಿಕದ ನೌಕಾ ಪಡೆಯ ಯೋಧ ಡ್ವೆಯ್ನೆ ಮ್ಯಾನ್ ಎಂಬಾತನೂ ಒಬ್ಬ. ಈತ ಟೋಕಿಯೋದಲ್ಲಿ ಇದ್ದಾಗ ಪೆಗ್ಗಿ ಯಮಗುಚಿ ಎಂಬ ಜಪಾನಿ ಯುವತಿಯ ಪರಿಚಯವಾಯಿತಂತೆ. ಆಕೆ ಸೇನೆಯ ಅಧಿಕಾರಿಗಳ ಕ್ಲಬ್ಬಿನಲ್ಲಿ ಅವರ ಟೋಪಿಗಳನ್ನು ಪರಿಶೀಲಿಸುವ ಕೆಲಸವನ್ನು ನಿರ್ವಹಿಸುತ್ತಿದ್ದವಳು. ದಿನವೂ ಆಕೆಯನ್ನು ನೋಡುತ್ತಿದ್ದ ಡ್ವೆಯ್ನೆ ಒಂದು ದಿನ ಆಕೆಯ ಜೊತೆ ನರ್ತಿಸಿದನಂತೆ. ಹೀಗೆ ಅವರ ಮಧ್ಯೆ ಪ್ರೇಮಾಂಕುರವಾಗಿ, ಮದುವೆಯಾಗಲೂ ನಿರ್ಧರಿಸಿದರಂತೆ. ಆದರೆ ವಿಧಿ ಬೇರೆಯೇ ಜಾಲವನ್ನು ಹೆಣೆದಿತ್ತು. ಇವರು ಮದುವೆಯಾಗುವ ಮೊದಲೇ ಪೆಗ್ಗಿ ಗರ್ಭವತಿಯಾಗಿದ್ದಳು ಹಾಗೆಯೇ ಕೊರಿಯಾದ ಯುದ್ಧವೂ ಮುಗಿದಿತ್ತು! ಯುದ್ಧ ಮುಗಿದ ಕೂಡಲೇ ಡ್ವೆಯ್ನೆ ತಾಯ್ನೆಡಿಗೆ ಮರಳಬೇಕಾಯಿತು. ಆದರೆ ಹೊರಡುವ ಮೊದಲು ಡ್ವೆಯ್ನೆ, ಕಣ್ಣೀರು ತುಂಬಿಕೊಂಡಿದ್ದ ಪೆಗ್ಗಿಗೆ ಅಮೆರಿಕಾಗೆ ಮರಳಿದ ಕೂಡಲೇ ತಾನು ಉಳಿಸಿದ ಹಣವನ್ನು ಮಗುವಿನ ಭವಿಷ್ಯಕ್ಕಾಗಿ ಕಳುಹಿಸಿಕೊಡುವ ಮಾತು ಕೊಟ್ಟಿದ್ದನಂತೆ.

ಆದರೆ ದೈವೇಚ್ಛೆ ಬೇರೆಯೇ ಇತ್ತು. ಅಮೆರಿಕಕ್ಕೆ ಮರಳಿದ ಡ್ವೆಯ್ನೆಗೆ ಕಂಡದ್ದು ತನ್ನ ಖಾಲಿ ಬ್ಯಾಂಕ್ ಅಕೌಂಟ್. ಯುದ್ಧದಲ್ಲಿ ತಾನು ಮಡಿದರೆ ಹಣ ತನ್ನ ತಂದೆಗೆ ಸೇರಲಿ ಎಂದು ಬ್ಯಾಂಕ್ ಅಕೌಂಟನ್ನು ಆತನ ಹೆಸರಿಗೆ ಬದಲಾಯಿಸಿದ್ದನಂತೆ. ಅದೇ ಅವಕಾಶವನ್ನು ಬಳಸಿಕೊಂಡು ಆತನ ಅಪ್ಪಹಣವನ್ನೆಲ್ಲ ಖರ್ಚು ಮಾಡಿದ್ದ. ಕೂಡಲೇ ಪೆಗ್ಗಿಗೆ ಒಂದು ಕಾಗದ ಬರೆದು ಪರಿಸ್ಥಿತಿಯನ್ನು ವಿವರಿಸಿದ ಡ್ವೆಯ್ನೆ, ಹಣ ಸಂಪಾದಿಸಲು ಒಂದು ಕೆಲಸ ಹಿಡಿದ. ಒಂದೆರಡು ಬಾರಿ ಅವರಿಬ್ಬರ ನಡುವೆ ಪತ್ರ ವ್ಯವಹಾರ ನಿರಾಳವಾಗಿ ನಡೆದು ಒಂದು ದಿನ ಆಕೆಯಿಂದ ಪತ್ರ ಬರುವುದೇ ನಿಂತಿತು. ಕೆಲವು ತಿಂಗಳು ಉರುಳಿದ ಮೇಲೆ ಮತ್ತೆ ಪೆಗ್ಗಿಯಿಂದ ಪತ್ರ ಬಂದಿತ್ತು. ‘‘ನಿನ್ನ ಮಗು ಉಳಿಯಲಿಲ್ಲ, ನಾನು ಬೇರೆಯವನನ್ನು ಮದುವೆಯಾಗುತ್ತಿದ್ದೇನೆ..’’ ಎಂದು ಅದರಲ್ಲಿ ಉಲ್ಲೇಖಿಸಿತ್ತು!. ಇದಾಗಿ ಸ್ವಲ್ಪದಿನಗಳಲ್ಲಿ ಡ್ವೆಯ್ನೆಗೆ ತನ್ನ ತಾಯಿ ಪೆಗ್ಗಿಯಿಂದ ಬಂದ ಪತ್ರಗಳನ್ನೆಲ್ಲ ಬೆಂಕಿಗೆ ಹಾಕಿ ಸುಡುತ್ತಿದ್ದಳು ಎಂಬ ಸತ್ಯದ ಅರಿವಾಯ್ತಂತೆ. ಹಾಗಾಗಿ ಎಷ್ಟೋ ಪತ್ರಗಳು ಡ್ವೆಯ್ನೆಗೆ ಸೇರದೆ ಬೆಂಕಿಪಾಲಾಗಿತ್ತು. ತನ್ನ ಮಗ ಓರ್ವ ಜಪಾನೀ ಯುವತಿಯನ್ನು ಮದುವೆಯಾಗುವುದು ಸುತರಾಂ ಇಷ್ಟವಿರದೆ ಈ ಕೆಲಸವನ್ನು ಆಕೆ ಮಾಡಿದ್ದಳು. ಮುಂದೆ ತನ್ನ ತಾಯಿಯ ಇಷ್ಟದಂತೆಯೇ ತಮ್ಮದೇ ಚರ್ಚಿನ ಹುಡುಗಿಯನ್ನು ಮದುವೆಯಾದ ಡ್ವೆಯ್ನೆ ಮ್ಯಾನ್.

ಇಷ್ಟೂ ಜರಗಿದ್ದು 1955-56ರ ಆಸುಪಾಸಿನಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಪೆಗ್ಗಿಗೆ ಮೋಸ ಮಾಡಿದೆ ಎಂಬ ಒಂದು ಕೊರಗಿನಲ್ಲೇ ಬದುಕಿದ 91ರ ಹರೆಯದ ಡ್ವೆಯ್ನೆ, ಈ ತಿಂಗಳ ಶುರುವಿನಲ್ಲಿ ಫೇಸ್‌ಬುಕ್‌ನಲ್ಲಿ ತನ್ನ ಪ್ರೇಮಕಥೆಯ ಬಗ್ಗೆ ಬರೆದು, ಪೆಗ್ಗಿಯನ್ನು ಅಥವಾ ಆಕೆಯ ಮನೆಯವರನ್ನು ಭೇಟಿ ಮಾಡುವ ಇರಾದೆ ವ್ಯಕ್ತಪಡಿಸಿದರಂತೆ. ಆಗ ಇಂಟರ್‌ನೆಟ್ ತನ್ನ ಚಮತ್ಕಾರವನ್ನು ತೋರಿಸಿತು ನೋಡಿ! ಡ್ವೆಯ್ನೆ ಪೋಸ್ಟ್ ವೈರಲ್ ಆಗಿ ಜಪಾನಿನ ಒಮಾಹಾ ನ್ಯೂಸ್‌ನಲ್ಲಿ ಪ್ರಕಟವಾಯ್ತಂತೆ. ಅವರೊಡನೆ ಮಾತಾಡಿದ ಡ್ವೆಯ್ನೆ, ‘‘ಪೆಗ್ಗಿಯನ್ನು ಆ ಸ್ಥಿತಿಯಲ್ಲಿ ಬಿಟ್ಟು ಬಂದದಕ್ಕೆ ನನಗೆ ವಿಷಾದವಿದೆ, ಇದು ಆಕೆಯನ್ನು ಹುಡುಕುವ ಮತ್ತೊಂದು ಪ್ರಯತ್ನ’’ ಎಂದು ಹಲುಬಿದನಂತೆ. ಆತನ ಮನವಿ ಹಿಸ್ಟರಿ ಚಾನೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಥೆರೆಸಾ ವಾಂಗ್ ಎಂಬ ಸಂಶೋಧಕಿಯ ಗಮನಕ್ಕೆ ಬಂದು, ಆಕೆ ಪೆಗ್ಗಿ ಯಮಗುಚಿ ಯನ್ನು ಹುಡುಕುವ ಕೆಲಸಕ್ಕೆ ಇಳಿದಳಂತೆ. ಆಕೆಯ ಸತತ ಪ್ರಯತ್ನದಿಂದ ಪೆಗ್ಗಿ ಮಿಚಿಗನ್‌ನಲ್ಲಿ ವಾಸವಿರುವುದಾಗಿ ತಿಳಿಯಿತಂತೆ. ಸ್ವಾರಸ್ಯವೇನೆಂದರೆ ಆ ಜಾಗ ಡ್ವೆಯ್ನೆ ನ ಮನೆಯಿಂದ ಕೇವಲ 14 ಘಂಟೆಯ ಪಯಣದ ಅಂತರದಲ್ಲಿತ್ತಂತೆ! ಕಣ್ಣೀರಿನೊಂದಿಗೆ ಡ್ವೆಯ್ನೆ ಮ್ಯಾನ್ ನನ್ನು ಎದುರುಗೊಂಡ ಪೆಗ್ಗಿ ಆತನನ್ನು ಮರೆತಿರಲಿಲ್ಲ. ಈಗ ಇಬ್ಬರಿಗೂ 91 ವರುಷ. 1955ರಲ್ಲಿ ಬೇರೆ ಮದುವೆಯಾದ ಪೆಗ್ಗಿ ತನ್ನ ಹಿರಿಯ ಮಗನ ಮಧ್ಯದ ಹೆಸರನ್ನಾಗಿ ‘ಡ್ವೆಯ್ನೆ’ ಎಂದು ಇಟ್ಟಿದ್ದಳಂತೆ. ಪ್ರೀತಿಯಿಂದ ಮತ್ತೊಮ್ಮೆ ಅಪ್ಪಿಕೊಂಡ ಇಬ್ಬರು, ತಮ್ಮ ಯೌವನದ ದಿನಗಳಂತೆ ನರ್ತಿಸಿದರಂತೆ. ತಮ್ಮ ಎರಡೂ ಕುಟುಂಬದವರೊಂದಿಗೆ ಸೇರಿ ಹಾಡಿ ಕುಣಿದರಂತೆ.

ಇಲ್ಲಿಗೆ ಪೆಗ್ಗಿ ಯಮಗುಚಿ ಹಾಗೂ ಡ್ವೆಯ್ನೆ ಮ್ಯಾನ್ ಅವರ ಪ್ರೇಮ ಕಥೆ ಸುಖಾಂತ್ಯ ಕಂಡಿತು. ಅವರಿಬ್ಬರ ನಡುವೆ ಇದ್ದದ್ದು ಪರಿಶುದ್ಧ ಪ್ರೀತಿ. ವಿಧಿಯ ಆಟಕ್ಕೆ ಅವರಿಬ್ಬರೂ ಸಿಲುಕಿ ಬೇರೆ ಬೇರೆಯಾದರೂ, ಆ ಪ್ರೀತಿ ಯಾವುದೋ ರೂಪದಲ್ಲಿ ಅವರೊಳಗೆ ಜೀವಂತವಾಗಿತ್ತು. ಕೊನೆಗೆ ವಿಧಿಯೂ ಆ ಪ್ರೀತಿಗೆ ಸೋತಿತೇನೋ! ಸುಮಾರು 70 ವರ್ಷ ಆದಮೇಲೆ ಅವರನ್ನು ಮತ್ತೆ ಸೇರುವಂತೆ ಮಾಡಿದೆ.

Writer - ಕಾರ್ತಿಕ್ ಕೃಷ್ಣ

contributor

Editor - ಕಾರ್ತಿಕ್ ಕೃಷ್ಣ

contributor

Similar News

ಜಗದಗಲ
ಜಗ ದಗಲ