ಮಂಗಳೂರು: ಬೇಡಿಕೆ ಈಡೇರಿಸಲು ಒತ್ತಾಯಿಸಿ ಡಿಎಸ್‌ಎಸ್‌ನಿಂದ ಮನವಿ

Update: 2022-06-24 10:20 GMT

ಮಂಗಳೂರು: ಭೂಮಿ, ವಸತಿ, ವಿದ್ಯಾರ್ಥಿವೇತನ, ಹಾಸ್ಟೆಲ್‌ಗಳಲ್ಲಿ ಮೂಲಸೌಲಭ್ಯ, ಪಿಟಿಸಿಎಲ್ ಕಾಯಿದೆ ತಿದ್ದುಪಡಿ, ನಾಗರಿಕ ಹಕ್ಕು ಜಾರಿ ದಳಕ್ಕೆ ರಕ್ಷಣಾತ್ಮಕ ಅಧಿಕಾರ ಮೊದಲಾದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ದ.ಕ ಜಿಲ್ಲಾ ಶಾಖೆ ವತಿಯಿಂದ ಶುಕ್ರವಾರದಂದು ಜಿಲ್ಲಾಧಿಕಾರಿಯವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಪುರಭವನದ ಎದುರಿನ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಅನಂತರ ದಸಂಸ ಮುಖಂಡರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪರಿಷ್ಕರಣೆಗೊಂಡಿರುವ ಪಠ್ಯಪುಸ್ತಕ ರದ್ದುಗೊಳಿಸಿ ಹಿಂದಿನ ಪ್ರೊ. ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ಪರಿಷ್ಕರಣೆಗೊಂಡಿರುವ ಪಠ್ಯಪುಸ್ತಕ ಶಾಲೆಗಳಿಗೆ ಒದಗಿಸಬೇಕು, ಪರಿಶಿಷ್ಟ ಜಾತಿ/ ವರ್ಗಗಳಿಗೆ ಕಾಯ್ದಿರಿಸಿರುವ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣದ ದುರುಪಯೋಗ ತಡೆಗಟ್ಟಬೇಕು, ಕಾಯಿದೆಯಲ್ಲಿರುವ ದಲಿತ ವಿರೋಧಿ ಸೆಕ್ಷನ್ ೭ (ಡಿ) ರದ್ದಾಗಬೇಕು, ಮಲೆನಾಡು ಭಾಗಗಳಲ್ಲಿ ಕಾಫಿ ಪ್ಲಾಂಟರುಗಳು ಅಕ್ರಮವಾಗಿ ಒತ್ತುವರಿ ಮಾಡಿರುವ ಭೂಮಿಯನ್ನು ತೆರವುಗೊಳಿಸಿ ಭೂಹೀನರಿಗೆ ಹಂಚಬೇಕು. ಯಾವುದೇ ಕಾರಣಕ್ಕೂ ಸರಕಾರ ಭೂಮಾಲಕರಿಗೆ ಗುತ್ತಿಗೆ ನೀಡುವುದನ್ನು ತಡೆಯಬೇಕು, ಪಿಟಿಸಿಎಲ್ ಕಾಯಿದೆ ತಿದ್ದುಪಡಿಯಾಗಬೇಕು. ಈಗಾಗಲೇ ನ್ಯಾಯಾಲಯಗಳಲ್ಲಿ ಪರಿಶಿಷ್ಟರ ವಿರುದ್ಧ ನೀಡಿರುವ ತೀರ್ಪುಗಳು ರದ್ದಾಗಬೇಕು. ಪಿಟಿಸಿಎಲ್ ಕಾಯಿದೆಯಂತೆ ಮರು ಮಂಜೂರಾತುದಾರರಿಗೆ ಮಂಜೂರು ಮಾಡಬೇಕು. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ರಕ್ಷಣಾತ್ಮಕ ಅಧಿಕಾರ ನೀಡಬೇಕು. ಇತರರು ಪಡೆದಿರುವ ಸುಳ್ಳು ಜಾತಿಪತ್ರಗಳನ್ನು ರದ್ದುಪಡಿಸಿ ಪಡೆದವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು. ರಾಜ್ಯದಾದ್ಯಂತ ಒಳಚರಂಡಿ ವಿಭಾಗದ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿರುವವರನ್ನು ಹಾಗೂ ಪೌರ ಕಾರ್ಮಿಕರನ್ನು ಕೂಡಲೇ ಖಾಯಂಗೊಳಿಸಬೇಕು ಮೊದಲಾದ ಬೇಡಿಕೆಗಳನ್ನೊಳಗೊಂಡು ಮನವಿ ಸಲ್ಲಿಸಲಾಯಿತು.

ಜಿಲ್ಲಾ ಪ್ರಧಾನ ಸಂಚಾಲಕ ಜಗದೀಶ್ ಪಾಂಡೇಶ್ವರ, ಪ್ರಮುಖರಾದ ಸದಾಶಿವ ಉರ್ವಸ್ಟೋರ್, ಚಂದು ಎಲ್, ಬಿ.ಕೆ.ವಸಂತ, ವೆಂಕಣ್ಣ ಕೊಯ್ಯೂರು, ಸೇಸಪ್ಪ ನೆಕ್ಕಿಲು, ನಾಗೇಶ್ ಮುಲ್ಲಕಾಡು, ನೇಮಿರಾಜ್ ಕೆ., ವಸಂತ ಕುಬಲಾಡಿ, ಓಬಯ್ಯ ಆರಂಬೋಡಿ, ಜಯಾನಂದ ಕೊಯ್ಯೂರು, ಲಿಂಗಪ್ಪ ನೆಕ್ಕಿಲು, ತಿರುಮಲೇಶ್, ಸುನಿಲ್ ಕುಮಾರ್ ಅದ್ಯಪಾಡಿ, ಲಿಂಗಪ್ಪ ಮೊದಲಾದವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News