ಅಗ್ನಿಪಥ್ ಯೋಜನೆ ಕ್ರಾಂತಿಕಾರಿ ಪರಿಕಲ್ಪನೆ: ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘ

Update: 2022-06-24 10:22 GMT

ಮಂಗಳೂರು‌ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆ ಉತ್ತಮ ಕ್ರಾಂತಿಕಾರಿ ಪರಿಕಲ್ಪನೆ ಯಾಗಿದ್ದು, ಯುವಜನತೆಗೆ ಭಾರತೀಯ ಸೇನಾಪಡೆ ಸೇರಿ ದೇಶ ಸೇವೆ ಮಾಡುವ ಅವಕಾಶ ಒದಗಿ ಬಂದಿದೆ ಎಂದು ದ.ಕ ಜಿಲ್ಲಾ ಮಾಜಿ ಸೈನಿಕರ ಸಂಘದ ಪ್ರಮುಖರಾದ ಕರ್ನಲ್ ಶರತ್ ಭಂಡಾರಿ ಹೇಳಿದರು.

ಯೋಜನೆಯಲ್ಲಿ ಕೆಲವೊಂದು ಸಣ್ಣಪುಟ್ಟ ದೋಷಗಳಿದ್ದು, ಅವುಗಳನ್ನು ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಒಂದೊಂದಾಗಿ ಪರಿಹರಿಸುವ ವಿಶ್ವಾಸವಿದೆ. ಯೋಜನೆ ಘೋಷಣೆ ವೇಳೆ ಸಮರ್ಪಕ ಮಾಹಿತಿ ನೀಡುವಲ್ಲಿ ಎಡವಿದ ಹಿನ್ನೆಲೆಯಲ್ಲಿ ಕೆಲವೊಂದು ಗೊಂದಲಗಳು ಉಂಟಾಗಿವೆ. ಅದರೆ ಇದನ್ನೇ ಮುಂದಿಟ್ಟುಕೊಂಡು ಸಾರ್ವಜನಿಕ ಸೊತ್ತುಗಳಿಗೆ ಹಾನಿ ಮಾಡಿರುವ ಪುಂಡರ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ರೈಲಿಗೆ ಬೆಂಕಿ ಹಾಕಿದವರಿಗೆ ಮಿಲಿಟರಿಗೆ ಸೇರುವ ಅರ್ಹತೆ ಇಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಸ್ತುತ ದೇಶದ ಸೇನೆಯ ಅಂದಾಜು ವರ್ಷ  ೩೦-೩೫ ರಷ್ಟಿದೆ. ಅದನ್ನು ಸುಮಾರು ೨೬ ವರ್ಷಕ್ಕೆ ಇಳಿಸುವುದು ಯೋಜನೆಯ ಉದ್ದೇಶ. ಕಾರ್ಗಿಲ್ ಯುದ್ಧದ ವೇಳೆಗಾಗಲೇ ಈ ಕುರಿತ ಚರ್ಚೆಗಳು ನಡೆದಿತ್ತು. ಈಗ ಅದನ್ನು ಜಾರಿಗೆ ತರಲಾಗುತ್ತಿದೆ. ಸೇನೆಯಿಂದ ಹೊರಬಂದು ದೇಶ ದ್ರೋಹದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎನ್ನುವ ಹೇಳಿಕೆಗಳು ಬಾಲಿಶ. ಪಿಂಚಣಿ ಹಣವನ್ನು ಉಳಿಸಲು ಯೋಜನೆ ಜಾರಿಗೆ ತರಲಾಗಿದೆ ಎನ್ನುವುದೂ ಒಪ್ಪತಕ್ಕದ್ದಲ್ಲ ಎಂದರು.

ಒಬ್ಬ ಉತ್ತಮ ಸೈನಿಕನಾಗಲು ಕನಿಷ್ಠ ಆರು ವರ್ಷ ಬೇಕು. ನಾಲ್ಕು ವರ್ಷ ಸೇವೆ ಸಲ್ಲಿಸುವ ಸೈನಿಕರನ್ನು ಹೇಗೆ ಸಿದ್ಧ ಪಡಿಸುತ್ತಾರೆ ಎನ್ನುವ ಪ್ರಶ್ನೆ ಇದೆ. ಅದಕ್ಕಾಗಿ ಹೊಸ ತರಬೇತಿ ಕ್ರಮ ಸಿದ್ಧಪಡಿಸುವ ಪ್ರಕ್ರಿಯೆ ಜಾರಿಗೆ ಬರಲಿದೆ. ಇನ್ನೊಂದೆಡೆ ಈಗ ಯಾವ ರೀತಿ ನೇಮಕಾತಿ ಪ್ರಕ್ರಿಯೆ ಇದೆಯೋ ಅದೇ ಮಾದರಿ ಮುಂದಕ್ಕೆ ಅಗ್ನಿವೀರರ ನೇಮಕಾತಿಯಲ್ಲೂ ಇರಲಿದೆ. ಆದರೆ ನಾಲ್ಕು ವರ್ಷದಲ್ಲಿ ಸೇನೆಯಿಂದ ನಿವೃತ್ತಿ ಯಾಗಲಿದ್ದಾರೆ. ಜತೆಗೆ ಪಿಂಚಣಿ, ಆರೋಗ್ಯ ಕವಚ, ಗ್ರ್ಯಾಚುವಿಟಿ ಇರುವುದಿಲ್ಲ. ಆದರೆ ನಾಲ್ಕು ವರ್ಷದ ಬಳಿಕ ಸೇನೆಯಲ್ಲಿ ಮುಂದುವರಿಯುವವರು ಈ ಸೌಲಭ್ಯ ಪಡೆಯಲಿದ್ದಾರೆ. ಇದಕ್ಕೆ ಬದಲಾಗಿ  ಅಗ್ನಿವೀರರು  ದೊಡ್ಡ ಮೊತ್ತ ವೊಂದನ್ನು ಪಡೆಯಲಿದ್ದಾರೆ. ಸಣ್ಣ ಪ್ರಾಯದಲ್ಲೇ ಇಷ್ಟು ದೊಡ್ಡ ಮೊತ್ತವನ್ನು ಬಳಸಿ ಉನ್ನತ ಶಿಕ್ಷಣ ಮುಂದುವರಿಸಬಹುದು. ಸ್ವ ಉದ್ಯೋಗ ಬೇಕಾದರೂ ಮಾಡಬಹುದು. ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಈಗಾಗಲೇ ಅಗ್ನಿವೀರರಿಗೆ ಉದ್ಯೋಗದಲ್ಲಿ ಮೀಸಲಾತಿಯನ್ನೂ ಘೋಷಿಸಿವೆ ಎಂದರು.

ಸಂಘದ ಕಾರ್ಯದರ್ಶಿ ಕ್ಯಾಪ್ಟನ್ ದೀಪಕ್ ಅಡ್ಯಂತಾಯ, ಮಾಜಿ ಅಧ್ಯಕ್ಷ ವಿಕ್ರಮ್ ದತ್ತ, ಸದಸ್ಯ ಕೆ. ಜಯ ಚಂದ್ರನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News