ಬಿಜೆಪಿಯಿಂದ ಧರ್ಮಗಳ ಆಧಾರದಲ್ಲಿ ಮತ ಗಳಿಸುವ ಹುನ್ನಾರ: ವೀರಪ್ಪ ಮೊಯ್ಲಿ ಆರೋಪ

Update: 2022-06-24 14:22 GMT

ಉಡುಪಿ: ಬಿಜೆಪಿ ಇಂದು ಧರ್ಮಗಳ ಆಧಾರದಲ್ಲಿ ಮತ ಗಳಿಸುವ ಹುನ್ನಾರವನ್ನು ಮಾಡುತ್ತಿದೆ. ಒಂದು ವರ್ಗವನ್ನು ಪ್ರತ್ಯೇಕಿಸಿ ದ್ವೇಷಿಸುವ ಕೆಲಸ ಮಾಡಲಾಗುತ್ತಿದೆ. ನಾವು ಕಟ್ಟಿದ ಶಾಂತಿಯ ದೇಶವನ್ನು ಅಶಾಂತಿಯತ್ತ ಕೊಂಡೊಯ್ಯಲಾಗುತ್ತಿದೆ ಎಂದು ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ಆಶ್ರಯದಲ್ಲಿ ಉಡುಪಿ ಪುತ್ತೂರಿನ ಅಮೃತ್ ಗಾರ್ಡನ್‌ನಲ್ಲಿ ಆಯೋಜಿಸಲಾದ ನವ ಸಂಕಲ್ಪ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಜನಗಣ ಮನ, ಸರ್ವಜನಾಂಗಗಳ ಶಾಂತಿಯ ತೋಟ ಎಂಬುದು ಕೇವಲ ಹಾಡಿಗೆ ಹಾಗೂ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ಕಾಂಗ್ರೆಸ್ ಸರಕಾರದ ಯೋಜನೆಗಳನ್ನು ಬಿಜೆಪಿ ಸರಕಾರ ಹೊಸ ನಾಮಕರಣ ದೊಂದಿಗೆ ಜಾರಿಗೆ ತರುತ್ತಿದೆ. ಯುವಕರಿಗೆ ಉದ್ಯೋಗ ಕೊಡುವ ಹಾಗೂ ಕಪ್ಪು ಹಣ ವಾಪಾಸ್ಸು ತರುವ ಭರವಸೆಗಳು ಹುಸಿಯಾಗಿವೆ ಎಂದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್‌ನ ಇತಿಹಾಸವು ಭವಿಷ್ಯಕ್ಕೆ ಮುನ್ನುಡಿ ಆಗಬೇಕು. ಬೂತ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಮತ್ತು ನಿಷ್ಠಾವಂತ ಕಾರ್ಯಕರ್ತರನ್ನು ಸಿದ್ಧಪಡಿಸದಿದ್ದರೆ ಗೆಲ್ಲಲು ಸಾಧ್ಯವಿಲ್ಲ. ರಾಷ್ಟ್ರ, ರಾಜ್ಯ ಮಟ್ಟದ ಬಗ್ಗೆ ಚಿಂತನೆ ಮಾಡುವ ಬದಲು ಬೂತ್ ಮಟ್ಟದಲ್ಲಿನ ಕೊರತೆ ಬಗ್ಗೆ ಗಮನ ಕೊಡುವ ಕಾರ್ಯ ಮಾಡಬೇಕು ಎಂದು ಅವರು ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಮಾತನಾಡಿ, ಅಗ್ನಿಪಥ್ ಯೋಜನೆ ಮೂಲಕ ಬಿಜೆಪಿ ಸರಕಾರ ಸೈನಿಕರ ನೈತಿಕತೆಯನ್ನು ಕುಗ್ಗಿಸುವ ಕೆಲಸ ಮಾಡುತ್ತಿದೆ. ಇದರ ವಿರುದ್ಧ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ವಾರದೊಳಗೆ ಪ್ರತಿಭಟನೆ ನಡೆಸಬೇಕು ಎಂದು ತಿಳಿಸಿದರು.

ಚಿಂತನಾ ಶಿಬಿರಗಳಿಂದ ಪಕ್ಷದ ಬಲವರ್ಧನೆ ಸಾಧ್ಯವಾಗುತ್ತದೆ. ಸದಸ್ಯತ್ವ ನೋಂದಾಣಿಯಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸದಸ್ಯತ್ವ ನೋಂದಾಣಿ ಉತ್ತಮವಾಗಿ ಆಗಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಈ ವಿಚಾರದಲ್ಲಿ ಗಂಭೀರವಾಗಿ ತೆಗೆದುಕೊಂಡಿಲ್ಲ. ಪಕ್ಷದ ಹುದ್ದೆ ಯಲ್ಲಿ ಶೇ.೫೦ರಷ್ಟು 50 ವರ್ಷದೊಳಗಿನ ಯುವಕರಿಗೆ ಅವಕಾಶ ಮತ್ತು ಒಂದು ಕುಟುಂಬಕ್ಕೆ ಒಂದೇ ಹುದ್ದೆ ನೀಡುವ ಬಗ್ಗೆ ಪಕ್ಷ ನಿರ್ಣಯ ಮಾಡಿದೆ ಎಂದರು.

ಪಕ್ಷದಿಂದ ಸಾಕಷ್ಟು ಲಾಭ ಪಡೆದರೂ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರುವ ಮೂಲಕ ಪಕ್ಷಕ್ಕೆ ದ್ರೋಹ ಎಸಗಿದರು. ಇದನ್ನು ಸವಾಲಾಗಿ ಸ್ವೀಕರಿಸಿ, ಈ ಕ್ಷೇತ್ರ ದಿಂದ ಯುವ ನಾಯಕನನ್ನು ಗುರುತಿಸಿ ಶಾಸಕರನ್ನಾಗಿ ಮಾಡಬೇಕು ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಉಸ್ತುವಾರಿ ಅಭಯಚಂದ್ರ ಜೈನ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎ.ಗಫೂರ್, ಮಮತಾ ಗಟ್ಟಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ವರೋನಿಕಾ ಕರ್ನೆಲಿಯೋ, ಗೀತಾ ವಾಗ್ಳೆ, ಪ್ರಸಾದ್ ಕಾಂಚನ್, ದೀಪಕ್ ಕೋಟ್ಯಾನ್ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಡಾ.ಸುನೀತಾ ಶೆಟ್ಟಿ ಹಾಗೂ ಸತೀಶ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು. ಭಾಸ್ಕರ್ ರಾವ್ ಕಿದಿಯೂರು ಮತ್ತು ಕೆ.ಅಣ್ಣಯ್ಯ ಶೇರಿಗಾರ್ ಕಾರ್ಯಕ್ರಮ ಸಂಯೋಜಿಸಿದರು.

ಎನ್‌ಆರ್‌ಐಯನ್ನು ನಂಬಲೇ ಬಾರದಿತ್ತು!

ನಾನು ಮುಖ್ಯಮಂತ್ರಿಯಾಗಿದ್ದಾಗ ಪಡುಬಿದ್ರೆಯ ನಾಡ್ಸಾಲುವಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಅದಕ್ಕಾಗಿ ಜಾಗ ಕೂಡ ಮೀಸಲಿಡಲಾಗಿತ್ತು. ಆಗ ಎನ್‌ಆರ್‌ಐ ಸ್ನೇಹಿತರೊಬ್ಬರು ತಾನು  ನಿಲ್ದಾಣ ನಿರ್ಮಿಸುವುದಾಗಿ ಸರಕಾರದೊಂದಿಗೆ ಎಂಓಯು ಮಾಡಿಕೊಂಡರು. ಆದರೆ ನಂತರ ಆ ವ್ಯಕ್ತಿ ಅದರಿಂದ ಹಿಂದೆ ಸರಿದರು. ನಾವು ಎಂಓಯುಗೆ  ಒಪ್ಪಬಾರದಿತ್ತು ಮತ್ತು ಅವರನ್ನು ನಂಬ ಬಾರದಿತ್ತು. ಒಪ್ಪದಿದ್ದರೆ ಇವತ್ತು ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ ವಿಮಾನ ನಿಲ್ದಾಣ ನಿರ್ಮಾಣ ಆಗುತ್ತಿತ್ತು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ನೆನಪಿಸಿಕೊಂಡರು.

ಮೊಯ್ಲಿ ಭಾಷಣಕ್ಕೆ ಅಡ್ಡಿ!

ಕಾಂಗ್ರೆಸ್ ಪಕ್ಷದ ಕೊಡುಗೆ ಬಗ್ಗೆ ಸುಧೀರ್ಘವಾಗಿ ಮಾತನಾಡುತಿದ್ದ ವೀರಪ್ಪ ಮೊಯಿಲಿ ಅವರ ಉದ್ಘಾಟನಾ ಭಾಷಣಕ್ಕೆ ಕೆಲ ಯುವಕರು ಅಡ್ಡಿ ಪಡಿಸಿರುವ ಘಟನೆ ಶಿಬಿರದಲ್ಲಿ ನಡೆಯಿತು.

ಭಾಷಣದ ಮಧ್ಯೆ ‘ಹಿಂದಿನ ವಿಚಾರವನ್ನು ಬಿಟ್ಟು ಮುಂದೆ ಏನು ಮಾಡಬೇಕು ಎಂಬುದನ್ನು ಹೇಳಿ’ ಕೆಲವರು ಬೊಬ್ಬೆ ಹಾಕಿದರು. ಇದರಿಂದ ಕೆಲ ಕಾಲ ಗೊಂದಲ ನಿರ್ಮಾಣವಾಯಿತು. ನಾನು ಭಾಷಣ ನಿಲ್ಲಿಸಬೇಕೆ ಎಂದು ಪ್ರಶ್ನಿಸಿದ ಮೊಯಿಲಿ, ನಿಮ್ಮ ಸಲಹೆಗಳಿದ್ದರೆ ಇಲ್ಲಿಗೆ ಬಂದು ಹೇಳಿ ಎಂದರು. ಬಳಿಕ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಸೊರಕೆ ಯುವಕರನ್ನು ಸಮಾಧಾನ ಪಡಿಸಿ ಮೊಯ್ಲಿ ಭಾಷಣ ಮುಂದುವರೆಸಲು ಅನುವು ಮಾಡಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News