ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ನೂತನ ಐಸಿಯು ಘಟಕ ಲೋಕಾರ್ಪಣೆ

Update: 2022-06-24 14:05 GMT

ಬಂಟ್ವಾಳ: ತನ್ನ ಕ್ಷೇತ್ರದ ಜನಸಾಮಾನ್ಯರಿಗೂ ಗುಣಮಟ್ಟದ  ಆರೋಗ್ಯ ಸೇವೆ ನೀಡಬೇಕೆಂಬ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಯನ್ನು ಮೀರಿಸುವ ರೀತಿಯಲ್ಲಿ ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆ ನಿರ್ಮಾಣವಾಗಲು ಕಾರಣವಾದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಅಭಿನಂದನೆಗಳು ಎಂದು ಸಂಸದ ನಳಿನ್ ಕುಮಾರ್ ಕಟೀಲು ಅವರು ಹೇಳಿದರು. 

ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ 1.67 ಕೋಟಿ ರೂ. ವೆಚ್ಚದಲ್ಲಿ ನೂತನ ವಾಗಿ ನಿರ್ಮಾಣ ಮಾಡಲಾದ 24 ಹಾಸಿಗೆಯ ಐಸಿಯು ಘಟಕವನ್ನು ಶುಕ್ರವಾರ ಲೋಕಾರ್ಪಣೆಗೈದು ಅವರು ಮಾತನಾಡಿದರು. 

ಗ್ರಾಮೀಣ ಭಾಗದ ಬಡವರಿಗೆ ಅನುಕೂಲವಾಗುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಕೆಲಸ ಮಾಡಲಾಗಿದೆ. ಇಚ್ಛಾಶಕ್ತಿ ಇದ್ದಾಗ ಸರಕಾರಿ ಆಸ್ಪತ್ರೆಯನ್ನು ಯಾವ ರೀತಿಯಲ್ಲಿ ಗುಣಮಟ್ಟದ ಆಸ್ಪತ್ರೆಯಾಗಿ ಬದಲಾವಣೆ ಮಾಡಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದರು.

ತಾಲೂಕು ಮಟ್ಟದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು  ಮೇಲ್ದರ್ಜೆಗೆ ಏರಿಸುವ ಯೋಜನೆಯನ್ನು ಕೇಂದ್ರ ಸರಕಾರ ಮಾಡುತ್ತಿದೆ.ಎಲ್ಲಾ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಯ ಶೈಲಿಯಲ್ಲಿ ನಿರ್ಮಿಸಿ, ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಯೋಜನೆ ಗಳನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದು ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು, ಆರೋಗ್ಯ ಮತ್ತು ಶಿಕ್ಷಣಕ್ಕೆ ಕೇಂದ್ರ ಸರಕಾರ ಹೆಚ್ಚು ಒತ್ತು ನೀಡುತ್ತಿದೆ. ಬಂಟ್ವಾಳ ತಾಲೂಕು ಆರೋಗ್ಯ ಕೇಂದ್ರವನ್ನು ಸುಸಜ್ಜಿತ ರೀತಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಬಾಕಿರುವ ಕೆಲವು ಸಣ್ಣ ಪುಟ್ಟ ಕೆಲಸಗಳನ್ನು ಕೂಡ  ಶೀಘ್ರವಾಗಿ ಮಾಡುವ ಭರವಸೆ ನೀಡಿದರು.

ಆರೋಗ್ಯ ಇಲಾಖೆಯ ಸಮಿತಿ ಹಾಗೂ ವೈದ್ಯರ ಸಹಕಾರದಿಂದ ಆಸ್ಪತ್ರೆಯ ಅಭಿವೃದ್ಧಿಗೆ ಕಾರಣವಾಯಿತು ಎಂದ ಅವರು ಅಭಿನಂದನೆ ಸಲ್ಲಿಸಿದ ಅವರು ಪುಂಜಾಲಕಟ್ಟೆ ಆರೋಗ್ಯ ಕೇಂದ್ರವು 10 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಲಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ, ಜಿಪಂ ಮಾಜಿ ಸದಸ್ಯರಾದ ಎಂ.ತುಂಗಪ್ಪ ಬಂಗೇರ, ರವೀಂದ್ರ ಕಂಬಳಿ, ಕಮಾಲಾಕ್ಷಿ ಪೂಜಾರಿ, ಡಿಎಚ್.ಒ ಡಾ. ಕಿಶೋರ್, ತಹಶೀಲ್ದಾರ್ ಡಾ. ಸ್ಮಿತಾ ರಾಮು, ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಪುಷ್ಪಲತಾ, ಟಿ.ಎಚ್.ಒ. ಡಾ. ಸುದರ್ಶನ ಮಾದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News