ರಾಜ್ಯದಲ್ಲಿ ಕಣ್ಣು-ಕಿವಿ ಇಲ್ಲದ ಭಂಡ ಸರಕಾರ: ಧ್ರುವ ನಾರಾಯಣ್ ಆರೋಪ

Update: 2022-06-24 15:06 GMT

ಉಡುಪಿ: ರಾಜ್ಯದಲ್ಲಿ ಕಣ್ಣು-ಕಿವಿ ಇಲ್ಲದ ಭಂಡ ಸರಕಾರ ಇದೆ. ದೇಶದ ಪುಣ್ಯಪುರುಷರ ಸಾಧನೆಗಳನ್ನು ಪಠ್ಯದಲ್ಲಿ ತಿರುಚಲಾಗಿದೆ. ಅಂಬೇಡ್ಕರ್, ಬಸವಣ್ಣ, ಕುವೆಂಪು, ನಾರಾಯಣಗುರು, ಭಗತ್ ಸಿಂಗ್, ಕನಕದಾಸರಿಗೆ ಅವಮಾನ ಮಾಡಲಾಗಿದೆ. ಬಿಜೆಪಿ ಸಾಮಾಜಿಕ ನ್ಯಾಯದ ಬದಲು ಶ್ರೇಣೀಕೃತ ಸಮಾಜ ಕಟ್ಟಲು ಮುಂದಾಗಿದೆ. ಇಂತಹ ಕೆಟ್ಟ ಸರಕಾರ ಎಂದಿಗೂ ಬಂದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಟೀಕಿಸಿದ್ದಾರೆ.

ಉಡುಪಿಯಲ್ಲಿ ನಡೆದ ಕಾಂಗ್ರೆಸ್ ನವ ಸಂಕಲ್ಪ ಶಿಬಿರದ ಸಮಾರೋಪದ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಕಚೇರಿಯಲ್ಲಿ ಸಮಾಜ ಸುಧಾರಕರ ಫೋಟೋಗಳೇ ಇರುವುದಿಲ್ಲ. ಕಾಂಗ್ರೆಸ್ ಕಾಲದ ಪಠ್ಯ ದಲ್ಲಿ ತಪ್ಪಿದ್ದರೆ ಬಿಜೆಪಿ ಏಕೆ ಕಣ್ಮುಚ್ಚಿ ಕುಳಿತಿತ್ತು. ಬಿಜೆಪಿಗೆ ಪ್ರಶ್ನೆ ಎತ್ತುವ ಶಕ್ತಿ ಇರಲಿಲ್ಲವೇ? ಆಗಿನ ಪಠ್ಯದಲ್ಲಿ 150 ತಪ್ಪು ಇತ್ತು ಎಂದು ಹಸಿ ಸುಳ್ಳು ಹೇಳುತ್ತಿದ್ದಾರೆ ಎಂದರು.

ಮಕ್ಕಳಿಗೆ ಆಗಿರುವ ತೊಂದರೆಗೆ ಸರಕಾರವೇ ನೇರ ಹೊಣೆ. ಟ್ಯುಟೋರಿ ಯಲ್ ಅಧ್ಯಾಪಕನನ್ನು ಪಠ್ಯ ಸಮಿತಿಗೆ ಹಾಕಿದರೆ ಯಾವ ರೀತಿಯ ಪಠ್ಯ ಪುಸ್ತಕ ಬರುತ್ತದೆ ಎಂಬುದಕ್ಕೆ ಇದುವೇ ಉದಾಹರಣೆ. ತಮ್ಮ ಭ್ರಷ್ಟಾಚಾರ ಮರೆ ಮಾಚಲು ಬಿಜೆಪಿ ಇಂತಹ ಕೆಲಸ ಮಾಡುತ್ತಿದೆ. ಧರ್ಮ ಧರ್ಮಗಳ ಮಧ್ಯೆ ಕಂದಕ ನಿರ್ಮಿಸುತ್ತಾರೆ. ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆಯೇ ಇವರಿಗೆ ಇಲ್ಲ ಎಂದು ಅವರು ಹೇಳಿದರು.

ಡಿಕೆಶಿ ಪಠ್ಯಪುಸ್ತಕ ಹರಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಮಾಜ ಸುಧಾಕರ ವಿಚಾರವನ್ನು ತಿರುಚಿರುವ ಬಗ್ಗೆ ಆಕ್ರೋಶದಿಂದ ಮಾಡಲಾಗಿದೆ. ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಅಲ್ಲ ಎಂದು ತಿರುಚಿದರೆ ಸುಮ್ಮನೆ ಕುಳಿತು ಕೊಳ್ಳಲು ಆಗುತ್ತದೆಯೇ ಎಂದು ಸಮರ್ಥಿಸಿಕೊಂಡರು.

ಮಹಾರಾಷ್ಟ್ರದಲ್ಲಿ ಬಿಜೆಪಿಯಿಂದ ಆಪರೇಷನ್ ಕಮಲ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಗಣಿಧಣಿಗಳು ಆರಂಭಿಸಿದ ಆಪರೇಷನ್ ಕಮಲ, ಈಗ ದೇಶವ್ಯಾಪಿ ಪಸರಿಸುತ್ತಿದೆ. ಕಾಂಗ್ರೆಸ್ ಯಾವ ಕಾಲಕ್ಕೂ ಈ ರೀತಿ ಪ್ರಜಾಪ್ರಭುತ್ವ ವಿರೋಧಿ ಕ್ರಮಕ್ಕೆ ಕೈ ಹಾಕುವುದಿಲ್ಲ. ಶಾಸಕರನ್ನು ಖರೀದಿಸುವ ಕೆಟ್ಟ ಸಂಪ್ರದಾಯ ಹುಟ್ಟಿಸಿರುವುದೇ ಬಿಜೆಪಿ. ಎಲ್ಲದಕ್ಕೂ ಅಂತ್ಯ ಇದೆ. ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು.

ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಪ್ರಯುಕ್ತ ಆ.೧೫ಕ್ಕೆ ಮೊದಲು ಭಾರತ ಜೋಡೋ ಯಾತ್ರೆಯನ್ನು ಪ್ರತಿ ಜಿಲ್ಲೆಯಲ್ಲಿ ೭೫ ಕಿಲೋಮೀಟರ್ ಪಾದಯಾತ್ರೆಯ ಮೂಲಕ ನಡೆಸಲು ಉದ್ದೇಶಿಸಲಾಗಿದೆ. ಯಾತ್ರೆಯುದ್ದಕ್ಕೂ ಕಾಂಗ್ರೆಸ್ನ ಸಾಧನೆಯನ್ನು ಅನಾವರಣ ಮಾಡಲಾಗುವುದು. ಅಗ್ನಿಪತ್ ಯೋಜನೆ ಹಾಗೂ ಇಡಿ, ಸಿಬಿಐ, ಐಟಿ ಸಂಸ್ಥೆಗಳ ದುರ್ಬಳಕೆ ವಿರುದ್ಧವೂ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಉಸ್ತುವಾರಿ ಅಭಯಚಂದ್ರ ಜೈನ್, ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎ.ಗಫೂರ್, ಮಮತಾ ಗಟ್ಟಿ, ಪ್ರಸಾದ್ ಕಾಂಚನ್, ದೀಪಕ್ ಕೋಟ್ಯಾನ್,  ಭಾಸ್ಕರ್ ರಾವ್ ಕಿದಿಯೂರು, ಸೌರಭ್ ಬಲ್ಲಾಳ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News