ಬ್ರಿಟನ್: ಸಂಸತ್ ಉಪಚುನಾವಣೆ; 2 ಕ್ಷೇತ್ರಗಳಲ್ಲಿ ಆಡಳಿತ ಪಕ್ಷಕ್ಕೆ ಸೋಲು

Update: 2022-06-24 17:34 GMT

ಲಂಡನ್, ಜೂ.24: ಬ್ರಿಟನ್ ನ 2 ಸಂಸತ್ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಕನ್ಸರ್ವೇಟಿವ್ ಪಕ್ಷ ಸೋಲು ಅನುಭವಿಸಿದ್ದು ಜಾನ್ಸನ್ ಗೆ ತೀವ್ರ ಹಿನ್ನಡೆಯಾಗಿದೆ ಎಂದು ವರದಿಯಾಗಿದೆ.

ಒಂದು ಶತಮಾನಗಳಿಗೂ ಅಧಿಕ ಕಾಲದಿಂದ ಕನ್ಸರ್ವೇಟಿವ್ ಪಕ್ಷದ ಭದ್ರಕೋಟೆ ಎನಿಸಿದ್ದ ಟಿವರ್ಟನ್ ಕ್ಷೇತ್ರದಲ್ಲಿ ಆಗಿರುವ ಸೋಲು ಪ್ರಧಾನಿ ಜಾನ್ಸನ್ ಅವರ ಗಾಯದ ಮೇಲೆ ಬರೆಯಿಟ್ಟಿದೆ. ಸೋಲಿನ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷರು ಪದತ್ಯಾಗ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ಡೆಮೊಕ್ರಾಟ್ಸ್ ಪಕ್ಷ ಗೆಲುವಿನ ನಗೆ ಬೀರಿದೆ. ವೆಸ್ಟ್ಮಿನಿಸ್ಟರ್ ಕ್ಷೇತ್ರದಲ್ಲಿ ಪ್ರಮುಖ ವಿಪಕ್ಷ ಲೇಬರ್ ಪಕ್ಷ ಗೆಲುವು ಸಾಧಿಸಿರುವುದು ಪಕ್ಷದ ಪುನಶ್ಚೇತನದ ಸಂಕೇತವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 ಪಾರ್ಟಿಗೇಟ್ ಹಗರಣದಿಂದ ಜಾನ್ಸನ್ ಹಾಗೂ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿರುವುದು ಈ ಫಲಿತಾಂಶದಿಂದ ಸಾಬೀತಾಗಿದೆ ಎಂದು ಹೇಳಲಾಗಿದ್ದರೂ, ಫಲಿತಾಂಶದ ಹಿನ್ನೆಲೆಯಲ್ಲಿ ಹುದ್ದೆಗೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಜಾನ್ಸನ್ ಸ್ಪಷ್ಟಪಡಿಸಿದ್ದಾರೆ. ಆದರೆ ಸೋಲಿನ ಹೊಣೆ ಹೊತ್ತು ಪಕ್ಷದ ಅಧ್ಯಕ್ಷ ಒಲಿವರ್ ಡೌಡೆನ್ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ. ಇತ್ತೀಚಿನ ಘಟನೆಗಳಿಂದ ನಮ್ಮ ಬೆಂಬಲಿಗರು ದುಃಖಿತರಾಗಿದ್ದಾರೆ ಮತ್ತು ನಿರಾಶೆಗೊಂಡಿದ್ದಾರೆ. ಅವರ ಭಾವನೆಗಳನ್ನು ನಾನು ಹಂಚಿಕೊಳ್ಳುತ್ತೇನೆ. ಯಾರಾದರೊಬ್ಬರು ಹೊಣೆ ಹೊತ್ತುಕೊಳ್ಳಬೇಕಾಗಿದೆ ಮತ್ತು ಈ ಪರಿಸ್ಥಿತಿಯಲ್ಲಿ ಹುದ್ದೆಯಲ್ಲಿ ಮುಂದುವರಿಯುವುದು ಸರಿಯಲ್ಲ ಎಂದು ಭಾವಿಸುತ್ತೇನೆ ಎಂದು ರಾಜೀನಾಮೆ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News