ನೀತಿ ಆಯೋಗದ ಸಿಇಓ ಆಗಿ ಪರಮೇಶ್ವರನ್ ಅಯ್ಯರ್ ನೇಮಕ

Update: 2022-06-25 01:51 GMT

ಹೊಸದಿಲ್ಲಿ : ಸ್ವಚ್ಛಭಾರತ ಮಿಷನ್ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಪರಮೇಶ್ವರನ್ ಅಯ್ಯರ್ ಅವರನ್ನು ನೀತಿ ಆಯೋಗದ ನೂತನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಜೂನ್ 30ರಂದು ಆರು ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸಲಿರುವ ಅಮಿತಾಬ್ ಕಾಂತ್ ಅವರ ಹುದ್ದೆಗೆ ಅಯ್ಯರ್ ನೇಮಕಗೊಂಡಿದ್ದಾರೆ ಎಂದು timesofindia.com ವರದಿ ಮಾಡಿದೆ.

ಕೇಂದ್ರ ಸಂಪುಟದ ಆಯ್ಕೆ ಸಮಿತಿ, ಉತ್ತರ ಪ್ರದೇಶ ಕೇಡರ್‍ನ 1981ನೇ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಅಯ್ಯರ್ ಅವರ ಹೆಸರನ್ನು ಅಂತಿಮ ಪಡಿಸಿದೆ. ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದ ವರೆಗೆ ಅವರು ಅಧಿಕಾರದಲ್ಲಿ ಇರುತ್ತಾರೆ.

ಕೇರಳ ಕೇಡರ್ ಅಧಿಕಾರಿಯಾಗಿದ್ದಾಗ 'ಗಾಡ್ಸ್ ಓನ್ ಕಂಟ್ರಿ' ಎಂಬ ಪ್ರಚಾರ ಅಭಿಯಾನದೊಂದಿಗೆ ಕೇರಳದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ್ದ ಕಾಂತ್, ನರೇಂದ್ರ ಮೋದಿ ಸರ್ಕಾರದ ಕಲ್ಪನೆ ಮತ್ತು ಯೋಜನೆಗಳಿಗೆ ಅಡಿಗಟ್ಟು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಅಯ್ಯರ್, ಶೌಚಾಲಯ ಗುಂಡಿಗಳನ್ನು ಸ್ವಚ್ಛಗೊಳಿಸುವ ಸಂಬಂಧ ಇದ್ದ ಕಳಂಕವನ್ನು ಬಗೆಹರಿಸುವ ಸಲುವಾಗಿ 2017ರ ಫೆಬ್ರುವರಿಯಲ್ಲಿ ತೆಲಂಗಾಣದ ಗ್ರಾಮದಲ್ಲಿ ಅವಳಿ-ಗುಂಡಿ ಶೌಚಾಲಯಕ್ಕೆ ಇಳಿದು ಸ್ವಚ್ಛಗೊಳಿಸುವ ಮೂಲಕ ಸುದ್ದಿ ಮಾಡಿದ್ದರು. ಮೋದಿ ತಮ್ಮ ಮನ್ ಕಿ ಬಾತ್‍ನಲ್ಲಿ ಅಯ್ಯರ್ ಅವರನ್ನು ಗಮನಾರ್ಹ ಸಾಧನೆ ಎಂದು ಇದನ್ನು ಬಣ್ಣಿಸಿದ್ದರು.

2020ರ ಜುಲೈನಲ್ಲಿ ವೈಯಕ್ತಿಕ ಕಾರಣ ನೀಡಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದರು. 2009ರಲ್ಲಿ ಸ್ವಯಂ ನಿವೃತ್ತಿ ಪಡೆದ ಅಯ್ಯರ್, ಆ ಬಳಿಕ 2016ರಲ್ಲಿ ಸ್ವಚ್ಛಭಾರತ ಆಂದೋಲನಕ್ಕೆ ಉತ್ತೇಜನ ನೀಡುವ ಸಲುವಾಗಿ ಪರ್ಯಾಯ ಪ್ರವೇಶದಲ್ಲಿ ಕುಡಿಯುವ ನೀರು ಇಲಾಖೆಗೆ ಕಾರ್ಯದರ್ಶಿಯಾಗಿ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News