ಪಕ್ಷ ಬಿಟ್ಟು ಹೋಗಲು ಬಯಸುವವರು ಹೋಗಲಿ, ಹೊಸ ಶಿವಸೇನೆ ಕಟ್ಟುವೆ: ಉದ್ಧವ್ ಠಾಕ್ರೆ

Update: 2022-06-25 05:15 GMT

ಮುಂಬೈ: ನಿಮಗೆ ಧೈರ್ಯವಿದ್ದರೆ  ಶಿವಸೇನೆ ಕಾರ್ಯಕರ್ತರನ್ನು  ಹಾಗೂ ಪಕ್ಷಕ್ಕೆ ಮತ ಹಾಕಿದವರನ್ನು ಕರೆದುಕೊಂಡು ಹೋಗಿ ಎಂದು ಬಂಡಾಯ ನಾಯಕ ಏಕನಾಥ್ ಶಿಂಧೆ ಹಾಗೂ ಬಿಜೆಪಿಗೆ ಸವಾಲು ಹಾಕಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಿಜೆಪಿಯು ಶಿವಸೇನೆಯನ್ನು ಮುಗಿಸಲು ಪ್ರಯತ್ನಿಸುತ್ತಿದೆ ಎಂದು  ಆರೋಪಿಸಿದ್ದಾರೆ.

ವರ್ಚುವಲ್  ಆಗಿ ಪಕ್ಷದ ಕಾರ್ಪೊರೇಟರ್‌ಗಳನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ ಅವರು "ಸಾಮಾನ್ಯ ಶಿವಸೇನೆ ಕಾರ್ಯಕರ್ತರು ನಮ್ಮ 'ಸಂಪತ್ತು'.  ಅವರು ನಮ್ಮೊಂದಿಗೆ ಇರುವವರೆಗೂ ನಾನು ಯಾರ  ಟೀಕೆಗಳಿಗೆ ಹೆದರುವುದಿಲ್ಲ'' ಎಂದರು.

"ಚುನಾಯಿಸಿದವರನ್ನು ನೀವು ಕಿತ್ತುಕೊಂಡಿದ್ದೀರಿ. ಆದರೆ ನಿಮಗೆ ಧೈರ್ಯವಿದ್ದರೆ, ನಿಮ್ಮನ್ನು ಆಯ್ಕೆ ಮಾಡಿದವರನ್ನು ನಮ್ಮಿಂದ ದೂರವಿಡಲು ಪ್ರಯತ್ನಿಸಿ ಎಂದು ಶಿಂಧೆಗೆ  ಸವಾಲು  ಹಾಕಿದ ಠಾಕ್ರೆ,  ಹೊರಹೋಗಲು ಬಯಸುವವರು ಮುಕ್ತವಾಗಿ ಹೋಗಲು ಸ್ವತಂತ್ರರಿದ್ದಾರೆ.... ನಾನು ಹೊಸ ಶಿವಸೇನೆಯನ್ನು ಕಟ್ಟುತ್ತೇನೆ'' ಎಂದು  ಠಾಕ್ರೆ ಹೇಳಿದ್ದಾರೆ.

"ಶಿವಸೇನೆಯು ತನ್ನ  ಸ್ವಂತ ಜನರಿಂದ ದ್ರೋಹಕ್ಕೆ ಒಳಗಾಗಿದೆ. ಶಿವಸೇನೆ ಒಂದು ಸಿದ್ಧಾಂತವಾಗಿದೆ... ಹಿಂದೂ ವೋಟ್ ಬ್ಯಾಂಕ್ ಅನ್ನು ಯಾರೊಂದಿಗೂ ಹಂಚಿಕೊಳ್ಳಲು ಬಯಸದ ಕಾರಣ ಬಿಜೆಪಿ ನಮ್ಮ ಪಕ್ಷವನ್ನು ಮುಗಿಸಲು ಬಯಸುತ್ತದೆ.  ದಿವಂಗತ ಬಾಳ್ ಠಾಕ್ರೆ ಅವರು ಹಿಂದೂ ಮತಗಳಲ್ಲಿ  ವಿಭಜನೆಯನ್ನು ತಪ್ಪಿಸಲು ಬಿಜೆಪಿಯೊಂದಿಗೆ ಮೈತ್ರಿಯನ್ನು ಆರಂಭಿಸಿದರು.  ಈಗ ಬಂಡಾಯ ಗುಂಪಿಗೆ ಬಿಜೆಪಿ ಸೇರುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಅವರು ಸರಕಾರ ರಚಿಸುವಲ್ಲಿ ಯಶಸ್ವಿಯಾದರೂ ಅದು ಹೆಚ್ಚು ಕಾಲ ಉಳಿಯುವುದಿಲ್ಲ. ಏಕೆಂದರೆ ಅವರಲ್ಲಿ ಅನೇಕ ಶಾಸಕರು ನಿಜವಾಗಿಯೂ ಸಂತೋಷವಾಗಿಲ್ಲ'' ಎಂದು ಠಾಕ್ರೆ  ಹೇಳಿದರು.

"ಮುಂದಿನ ಚುನಾವಣೆಯಲ್ಲಿ ಬಂಡಾಯ ಶಾಸಕರು  ಗೆಲ್ಲಲು ಸಾಧ್ಯವಿಲ್ಲ. ನಿಮ್ಮಲ್ಲಿ ಹಲವರು ಆಕಾಂಕ್ಷಿಗಳಾಗಿದ್ದರೂ ನಾವು ಈ ಬಂಡಾಯ ಶಾಸಕರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದ್ದೇವೆ. ನಿಮ್ಮ ಕಠಿಣ ಪರಿಶ್ರಮದಿಂದ ಆಯ್ಕೆಯಾದ ನಂತರ ಈ ಜನರು ಅಸಮಾಧಾನಗೊಂಡಿದ್ದಾರೆ. ಈ ನಿರ್ಣಾಯಕ ಸಮಯದಲ್ಲಿ ನೀವು ಪಕ್ಷದ ಪರವಾಗಿ ನಿಂತಿದ್ದೀರಿ. ನಾನು ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆ" ಎಂದು ಶಿವಸೇನಾ ಅಧ್ಯಕ್ಷರೂ ಆಗಿರುವ ಠಾಕ್ರೆ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News