ಪಠ್ಯ ಪರಿಷ್ಕರಣೆ ನೆಪದಲ್ಲಿ ದಾರ್ಶನಿಕರ ಕಡೆಗಣನೆ : ರಮಾನಾಥ ರೈ

Update: 2022-06-25 09:08 GMT

ಮಂಗಳೂರು : ಪಠ್ಯ ಪರಿಷ್ಕರಣೆ ನೆಪದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ದಾರ್ಶನಿಕರನ್ನು ಕಡೆಗಣಿಸಿ ಅರಸೊತ್ತಿಗೆಯವರಿಗೆ ಮಾತ್ರ ಸೀಮಿತವಾಗಿದ್ದ ಶಿಕ್ಷಣವನ್ನು ಮತ್ತೆ ಜಾರಿಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳನ್ನು ತಪ್ಪು ದಾರಿಗೆಳೆಯುವ, ವಿಷ ತುಂಬಿಸುವ ನೀತಿಯ ಮೂಲಕ ಬಿಜೆಪಿ ಶಿಕ್ಷಣ ಇಲಾಖೆಯನ್ನೇ ದುರ್ಬಲಗೊಳಿಸುವ ಪ್ರಯತ್ನ ನಡೆಸುತ್ತಿದೆ ಎಂದರು.

ಶಾಲೆಗಳು ಆರಂಭವಾಗಿದ್ದು, ಶಿಕ್ಷಕರ ಕೊರತೆ ಕಾಡುತ್ತಿದೆ. ಪಠ್ಯಪುಸ್ತಕ ನೀಡಲಾಗಿಲ್ಲ. ಸಮವಸ್ತ್ರ ನೀಡಲಾಗಿಲ್ಲ. ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ಮಕ್ಕಳಿಗೆ ನೀಡಲಾಗುತ್ತಿದ್ದ ಸೈಕಲ್ ನಿಲ್ಲಿಸಲಾಗಿದೆ. ಕಲಿಕಾ ಚೇತರಿಕೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಯ ಕಾರ್ಯಕ್ರಮ ಘೋಷಿಸಲಾಗಿದೆ. ಆದರೆ ಶಿಕ್ಷಕರಿಗೆ ಝೆರಾಕ್ಸ್ ಮಾಡಿ ಪುಸ್ತಕ ನೀಡಲಾಗುತ್ತಿದೆ. ಇಂತಹ ನಿರ್ಲಕ್ಷ್ಯ, ವಿಳಂಬ ನೀತಿಯಿಂದ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ಆರೋಪಿಸಿದರು.

ಯುಪಿಎ ಅವಧಿಯಲ್ಲಿ ಸರ್ವ ಶಿಕ್ಷಣ ಅಭಿಯಾನ ಜಾರಿಗೆ ತರಲಾಯಿತು. ಸಿದ್ದರಾಮಯ್ಯನವರು ವಿದ್ಯಾಸಿರಿ ಯೋಜನೆ ಜಾರಿಗೆಗೊಳಿಸಿದರು. ಮಧ್ಯಾಹ್ನದ ಬಿಸಿಯೂಟ ಆರಂಭಿಸಿದ್ದೇ ಕಾಂಗ್ರೆಸ್. ಆದರೆ ಇದೀಗ ಅದಕ್ಕೂ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದೆ. ಶಿಕ್ಷಕರಿಗೆ ನೀಡುವ ಕಲಿಕೋಪಕರಣ ಅನುದಾನ ನಿಲ್ಲಿಸಲಾಗಿದೆ. ಹಣಕಾಸಿನ ವ್ಯವಸ್ಥೆ ಇಲ್ಲದೆ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರು ಕೆಲಸ ಮಾಡಲಾಗದ ಪರಿಸ್ಥಿತಿ ಇದೆ. ಸರಕಾರ ಶೇ.40 ಕಮಿಷನ್ ದೊರೆಯುವ ಕಾರ್ಯಕ್ರಮಕ್ಕೆ ಮಾತ್ರವೇ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿದರು.

ಪುಸ್ತಕ ಪರಿಷ್ಕರಣೆಯ ವಿಚಾರ ಬಂದಾಗ ಹಿಂದೆ ರಷ್ಯದಲ್ಲಿ ನಡೆದ  ಕ್ರಾಂತಿ ನೆನಪಾಗುತ್ತದೆ. ಅಲ್ಲಿ ಪ್ರಜೆಗಳಿಗೆ ಶಿಕ್ಷಣ ನೀಡಿದರೆ ಅರಸೊತ್ತಿಗೆಯನ್ನು ಪ್ರಶ್ನಿಸುತ್ತಾರೆ. ಅರಸು ಮನೆತನದವರಿಗೆ ಮಾತ್ರ ಶಿಕ್ಷಣವನ್ನು ನೀಡಲಾಗುತ್ತಿತ್ತು. ಇಲ್ಲಿಯೂ ಹಿಂದೆ ನಿರ್ದಿಷ್ಟ ಸಮುದಾಯಗಳಿಗೆ ಮಾತ್ರವೇ ಶಿಕ್ಷಣ ದೊರೆಯುತ್ತಿತ್ತು. ಅಂತಹ ಮೂಲ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸುವ ಹುನ್ನಾರವೇ ಇದಾಗಿದೆ. ಅಂತಹ ಶಿಕ್ಷಣ ವ್ಯವಸ್ಥೆಯನ್ನು ತರಬೇಕೆಂಬ ಅಪೇಕ್ಷೆಯುಳ್ಳ ಅವರೆಷ್ಟೇ ಬುದ್ಧಿವಂತರಾಗಿದ್ದರೂ ಜನ ದಡ್ಡರಾಗಬಾರದು ಎಂದು ಅವರು ಹೇಳಿದರು.

ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷನ ಮೇಲೆ ಅದೆಷ್ಟೇ ಆರೋಪ ಬಂದರೂ ಮಂಗಳೂರಿನಲ್ಲಿ ಬಿಜೆಪಿ ನಾಯಕರು ಆತನಿಗೆ ಸನ್ಮಾನ ಮಾಡಲು ಹೊರಟಿರುವುದು ನೋವಿನ ಮೇಲೆ ಉಪ್ಪು ಸವರುವ ಯತ್ನ. ಇಲ್ಲಿ ರೋಹಿತ್ ಚಕ್ರತೀರ್ಥಗೆ ಸನ್ಮಾನ ಮಾಡುವವರಿಗೆ ರಾಜಕೀಯ ನಾಯಕರು ಯಾರೂ ಬೆದರಿಕೆ ಹಾಕಿಲ್ಲ. ನಾರಾಯಣಗುರು ಸೇರಿದಂತೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರ ಅನುಯಾಯಿಗಳಿಗೆ ನೋವಾಗಿದೆ. ಅವರು ತಮ್ಮ ನೋವನ್ನು ತೋರ್ಪಡಿಸಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಗೋಷ್ಠಿಯಲ್ಲಿ ಇಬ್ರಾಹೀಂ ಕೋಡಿಜಾಲ್, ಶಶಿಧರ ಹೆಗ್ಡೆ, ರಕ್ಷಿತ್, ಹರಿನಾಥ್, ಸಲೀಂ, ಪ್ರಕಾಶ್ ಸಾಲಿಯಾನ್, ನವೀನ್ ಡಿಸೋಜಾ, ಮಮತಾ ಗಟ್ಟಿ, ಶುಭೋದಯ ಆಳ್ವ, ಬೇಬಿ ಕುಂದರ್, ಶೇಖರ  ಪೂಜಾರಿ, ಪವನ್ ಸಿಲಾಯನ್, ಶಬ್ಬೀರ್, ನಝೀರ್ ಬಜಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News