ಕಾಂಗ್ರೆಸ್ ಮಕ್ಕಳನ್ನು ಸೇನೆಗೆ ಕೇಳಿಲ್ಲ: ನಳಿನ್ ಕುಮಾರ್ ಕಟೀಲು

Update: 2022-06-25 11:28 GMT

ಮಂಗಳೂರು : ನಾವು ಕಾಂಗ್ರೆಸ್ ಮಕ್ಕಳನ್ನು ಸೇನೆಗೆ ಕೇಳಿಲ್ಲ. ಉದ್ಯೋಗಾಕಾಂಕ್ಷಿಗಳು, ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವ ಬಯಕೆಯುಳ್ಳವರು ಹಾಗೂ ರಾಷ್ಟ್ರಕ್ಕಾಗಿ ದುಡಿಯುವವರಿಗೆ ‘ಅಗ್ನಿಪಥ’ ಯೋಜನೆಯಲ್ಲಿ ಅವಕಾಶವಿದೆ ಎಂದು ದ.ಕ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ

ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ೨೦೧೪ರಲ್ಲಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದ ಬಳಿಕ ದೇಶ ಪರಿವರ್ತನೆ ಹಾದಿಯಲ್ಲಿ ಸಾಗುತ್ತಿದೆ. ಉಪಯುಕ್ತ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ. ಇದನ್ನು ಸಹಿಸದ ಕಾಂಗ್ರೆಸ್ ಮುಖಂಡರು ಕೇಂದ್ರ ಸರ್ಕಾರ ಯಾವುದೇ ಒಳ್ಳೆಯ ಕೆಲಸ ಮಾಡಿದರೂ ಅದನ್ನು ವಿರೋಧಿಸುವುದನ್ನೇ ಮಾನಸಿಕತೆ ಮಾಡಿಕೊಂಡಿದೆ ಎಂದು ಟೀಕಿಸಿದರು.

ದೇಶದಲ್ಲಿ ಯುವ ಸೈನ್ಯದ ಶಕ್ತಿಗಾಗಿ ಅಗ್ನಿಪಥ ಯೋಜನೆಯನ್ನು ಜಾರಿಗೆ ತರಲಾಗಿದೆ. ಯುವಕರಿಗೆ ದೇಶ ಸೇವೆಯ ಜತೆಗೆ ಶಿಕ್ಷಣ, ಉದ್ಯೋಗಕ್ಕೂ ಅವಕಾಶ ಕಲ್ಪಿಸಲಾಗಿದೆ. ಇದು ರಾಷ್ಟ್ರಭಕ್ತಿ ಜಾಗತಿಗೂ ಕಾರಣವಾಗಲಿದೆ. ಯುವಜನತೆಯ ಭವಿಷ್ಯವೂ ಇದರಲ್ಲಿ ಇದೆ. ದೇಶದಲ್ಲಿ ಉದ್ಯೋಗ ಕೊರತೆ ಹೋಗಲಾಡಿಸಲು ಅಗ್ನಿಪಥ ಯೋಜನೆ ಸಹಕಾರಿಯಾಗಲಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹೋದ ಮೇಲೆ ಗಲಭೆಗೆ ಪ್ರಚೋದನೆ ನೀಡುವ ಕೆಲಸವನ್ನು ಕಾಂಗ್ರೆಸಿಗರು ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರದ ಪಠ್ಯ ಪುಸ್ತಕ ಪರಿಷ್ಕರಣೆ, ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥರ ಕಾರ್ಯಕ್ರಮಕ್ಕೆ ತಡೆ ಮಾಡುವುದನ್ನು ಮುಂದುವರಿಸುತ್ತಿದ್ದಾರೆ. ಡಿಜೆ ಹಳ್ಳಿ, ಕೆಜೆ ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಗಲಭೆಗಳ ಹಿಂದೆ ಕಾಂಗ್ರೆಸ್‌ನ ದ್ವೇಷ ರಾಜಕಾರಣದ ಕೈವಾಡ ಇದೆ. ಕಾಂಗ್ರೆಸ್ ಅರಾಜಕತೆಯನ್ನು ಬಯಸುತ್ತಿದ್ದು, ಎಲ್ಲದಕ್ಕೂ ಮೊದಲು ಪರಿಷ್ಕೃತ ಪಠ್ಯ ಪುಸ್ತಕದಲ್ಲಿ ಏನಿದೆ ಎಂಬುದನ್ನು ಕಾಂಗ್ರೆಸಿಗರು, ಇದನ್ನು ವಿರೋಧಿಸುವ ಸಾಹಿತಿಗಳು, ಮತ್ತಿತರರು ಮೊದಲು ತಿಳಿದುಕೊಳ್ಳಲಿ ಎಂದರು.

ಈ ಸಂದರ್ಭ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News