ಜೂ.28: ಹಡಿಲು ಭೂಮಿ ಪುನಶ್ಚೇತನ ಯೋಜನೆಗಳಿಗೆ ಚಾಲನೆ

Update: 2022-06-25 13:27 GMT

ಉಡುಪಿ : ಧರ್ಮಸ್ಥಳದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆಯ ವತಿಯಿಂದ ಕಳೆದೆರಡು ವರ್ಷ ಗಳಿಂದ ಚಾಲ್ತಿಯಲ್ಲಿರುವ ಹಡಿಲು ಭೂಮಿ ಪುನಶ್ಚೇತನ ಯೋಜನೆ ಕಾರ್ಯಕ್ರಮಕ್ಕೆ ಜೂ.೨೮ರ ಮಂಗಳವಾರ ಬ್ರಹ್ಮಾವರ ತಾಲೂಕು ಬಾರಕೂರಿನ ಕೂಡ್ಲಿ ಉಡುಪರ ಮನೆ ವಠಾರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗೆಡೆ ಅವರ ಅಧ್ಯಕ್ಷತೆಯಲ್ಲಿ ವಿದ್ಯುಕ್ತ ಚಾಲನೆ ನೀಡಲಾಗುವುದು.

ಉಡುಪಿಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಮನೋಜ್ ಮಿನೇಜಸ್ ಅವರು ವಿಷಯ ತಿಳಿಸಿದರು.ಇದರೊಂದಿಗೆ ೨೦೨೨-೨೩ನೇ ಸಾಲಿನಲ್ಲಿ ರಾಜ್ಯದ ೨೦,೦೦೦ ಹೆಕ್ಟೇರ್ ಪ್ರದೇಶದಲ್ಲಿ ಅನುಷ್ಠಾನಗೊಳ್ಳಲಿರುವ ಸಂಪೂರ್ಣ ಯಾಂತ್ರೀಕೃತ ಭತ್ತ ಬೇಸಾಯ (ಯಂತ್ರಶ್ರೀ) ಯೋಜನೆಗೂ ಚಾಲನೆ ನೀಡಲಾಗುವುದು ಎಂದವರು ತಿಳಿಸಿದರು.

ಕಳೆದೆರಡು ವರ್ಷಗಳಲ್ಲಿ ರಾಜ್ಯದ ಒಟ್ಟು ೧೯,೮೧೩ ರೈತರ ೩೧,೦೦೦ ಎಕರೆ ಪ್ರದೇಶದಲ್ಲಿ ಈ ಯೋಜನೆ ಯನ್ನು ಅನುಷ್ಠಾನಗೊಳಿಸಲಾಗಿತ್ತು. ಈ ಆರ್ಥಿಕ ವರ್ಷದಲ್ಲಿ ಹೊಸದಾಗಿ ಒಟ್ಟು ೨೦,೦೦೦ ಹೆಕ್ಟೇರ್ ಪ್ರದೇಶದಲ್ಲಿ ಯಂತ್ರಶ್ರೀ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಮಿನೇಜಸ್ ತಿಳಿಸಿದರು.

ಗ್ರಾಮಾಭಿವೃದ್ಧಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಯವರ ಮಹತ್ವಾಕಾಂಕ್ಷಿ ಯೋಜನೆ ಯಾಗಿದ್ದು, ಕಳೆದ ನಾಲ್ಕು ದಶಕಗಳಿಂದ ರಾಜ್ಯದ ಸಣ್ಣ ಹಾಗೂ ಅತೀ ಸಣ್ಣ ರೈತರ ಸರ್ವತೋಮುಖ ಅಭಿವೃದ್ಧಿ ಹಾಗೂ ನೆಮ್ಮದಿಗಾಗಿ ವಿವಿಧ ಕೃಷಿ ವಿಸ್ತರಣೆ ಹಾಗೂ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಮತ್ತೊಬ್ಬ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್ ತಿಳಿಸಿದರು.

ಇದೀಗ ರೈತರಿಗೆ ಬೇಸಾಯದ ಕುರಿತಂತೆ ವಿಶೇಷ ಪ್ರೇರಣೆ ನೀಡಲು ಭತ್ತ ಬೇಸಾಯದ ಯಾಂತ್ರೀಕರಣ ‘ಯಂತ್ರಶ್ರೀ’ ಕಾರ್ಯಕ್ರಮವನ್ನು ಜಾರಿಗೊಳಿಸ ಲಾಗಿದೆ.ಇದು ಭತ್ತ ಬೇಸಾಯವನ್ನು ಸಂಪೂರ್ಣ ಯಾಂತ್ರೀಕರಣ ಕ್ಕೊಳಪಡಿಸಿ ಉಳುಮೆಯಿಂದ ಹಿಡಿದು ಒಕ್ಕಣೆಯವರೆಗೆ (ಸೀಡ್ ಟು ಸೀಡ್) ಯಂತ್ರೋಕರಣಗಳನ್ನು ರೈತರಿಗೆ ಅವರ ಹೊಲದ ಬಾಗಿಲಲ್ಲೇ ರಿಯಾಯಿತಿ ಬಾಡಿಗೆ ದರದಲ್ಲಿ ಒದಗಿಸುವುದಾಗಿದೆ ಎಂದವರು ವಿವರಿಸಿದರು.

ಇದರಂತೆ ಈ ವರ್ಷ ಹೊಸದಾಗಿ ೨೦೦೦೦ ಹೆಕ್ಟೇರ್ ಪ್ರದೇಶದಲ್ಲಿ ಯಂತ್ರಶ್ರೀ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು. ಇದರಲ್ಲಿ ಆರು ಸಾವಿರ ಹೆಕ್ಟೇರ್ ಪ್ರದೇಶ ಉಡುಪಿ ಜಿಲ್ಲೆಯಲ್ಲಿದೆ. ಇದಕ್ಕಾಗಿ ರಾಜ್ಯದಲ್ಲಿ ೧೮೯ ನಾಟಿ ಯಂತ್ರಗಳನ್ನು ಹೊಂದಿದ್ದು, ೫೬ ನಾಟಿ ಯಂತ್ರಗಳು ಉಡುಪಿ ಜಿಲ್ಲೆಯಲ್ಲಿವೆ.  ನಾಟಿಯಂತ್ರದ ಬಾಡಿಗೆ ಪ್ರತಿ ಗಂಟೆಗೆ ೯೫೦ರೂ. ಎಂದು ನಿಗದಿ ಪಡಿಸಲಾಗಿದೆ. ಇದು ಸರಕಾರ ನಿಗದಿ ಪಡಿಸಿದ ದರವಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ಸೇವೆಯನ್ನು ತರಬೇತಾದ ನಮ್ಮ ಸಂಘಟನೆಯ ಯಂತ್ರಯೋಧರು ಮಾಡಲಿದ್ದಾರೆ ಎಂದು ವಸಂತ ಸಾಲ್ಯಾನ್ ತಿಳಿಸಿದರು.

ಸಂಸ್ಥೆಯ ಮೂಲಕ ಅನುಷ್ಠಾನಗೊಳ್ಳುವ ಎರಡೂ ಯೋಜನೆಗಳಿಗೆ ಜೂ.೨೮ರಂದು ಬೆಳಗ್ಗೆ ೧೧:೦೦ ಗಂಟೆಗೆ ಬಾರಕೂರಿನ ಕೂಡ್ಲಿ ಉಡುಪರ ಮನೆ ಯಲ್ಲಿ ಚಾಲನೆ ನೀಡಲಾಗುತ್ತದೆ. ಕಾರ್ಯಕ್ರಮವನ್ನು ಉದ್ಘಾಟಿಸುವ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಅವರು ಯಂತ್ರಶ್ರೀ ಸಾಧಕರಿಗೆ ಪ್ರಮಾಣ ಪತ್ರ ವಿತರಿಸುವರು. ರಾಜ್ಯದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ನರ್ಸರಿ ಟ್ರೇ ವಿತರಿಸುವರು.

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಡಿಲು ಭೂಮಿಯನ್ನು ಅಭಿವೃದ್ಧಿ ಪಡಿಸಿದ ರೈತರನ್ನು ಸನ್ಮಾನಿಸುವರು. ಉಡುಪಿ ಶಾಸಕ ಕೆ.ರಘುಪತಿ ಭಟ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜಿಲ್ಲಾ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಡಾ.ಎಚ್.ಕೆಂಪೇಗೌಡ, ಯಡ್ತಾಡಿ ಗ್ರಾಪಂ ಅಧ್ಯಕ್ಷೆ ಸವಿತಾ ದೇವಾಡಿಗ, ಬಾರಕೂರಿನ ರಾಜ್ಯೋತ್ಸವ ಕೃಷಿಸಾಧಕ ಪ್ರಶಸ್ತಿ ಪಡೆದ ಬಿ.ಶಾಂತಾರಾಮ ಶೆಟ್ಟಿ, ಕೂಡ್ಲಿ ಶ್ರೀಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಕೆ.ವೆಂಕಟರಮಣ ಉಡುಪ ಉಪಸ್ಥಿತರಿರುವರು.

ಪತ್ರಿಕಾಗೋಷ್ಠಿಯಲ್ಲಿ ಯೋಜನೆಯ ಯೋಜನಾಧಿಕಾರಿ ಸುಧೀರ್ ಜೈನ್, ಕೂಡ್ಲಿ ಉಡುಪರ ಮನೆಯ ಕೆ.ಶ್ರೀನಿವಾಸ ಉಡುಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News